ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಎಸ್‌ಜಿ ಗುಂಪಿಗೆ ಭಾರತ’ ಚರ್ಚೆ ನಡೆದಿಲ್ಲ ಎಂದ ಚೀನಾ

ಎನ್‌ಪಿಟಿ ಸಹಿ ಹಾಕದ ಹೊರತು ಸದಸ್ಯತ್ವಕ್ಕೆ ಒಪ್ಪಿಗೆ ಇಲ್ಲ
Last Updated 21 ಜೂನ್ 2019, 20:07 IST
ಅಕ್ಷರ ಗಾತ್ರ

ಬೀಜಿಂಗ್‌: ‘ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಭಾರತ ಸೇರಿಸುವ ಸಂಬಂಧ ಯಾವುದೇ ಚರ್ಚೆ ಇಲ್ಲ ಎಂದು ಚೀನಾ ಶುಕ್ರವಾರ ಹೇಳಿದೆ. ಎನ್‌ಎಸ್‌ಜಿ ಗುಂಪಿನಲ್ಲಿ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್‌ಪಿಟಿ) ಸಹಿಹಾಕಿದ ದೇಶಗಳಲ್ಲದೆ ಇತರೆ ದೇಶಗಳ ಕುರಿತಂತೆ ನಿರ್ದಿಷ್ಟ ತೀರ್ಮಾನಕ್ಕೆ ಬರದ ಹೊರತು ಮಾತುಕತೆ ನಡೆಸಲಾಗದು ಎಂದು ಹೇಳಿದೆ.

ಎನ್‌ಎಸ್‌ಜಿಗೆ ಭಾರತ 2016 ರ ಮೇನಲ್ಲಿ ಅರ್ಜಿ ಸಲ್ಲಿಸಿದೆ. ಪಾಕಿಸ್ತಾನ ಸಹ ಎನ್ಎಸ್‌ಜಿ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದೆ. ಎನ್‌ಪಿಟಿಗೆ ಯಾವ ದೇಶಗಳು ಸಹಿ ಹಾಕಿವೆಯೊ ಅವನ್ನು ಮಾತ್ರವೇ ಎನ್‌ಎಸ್‌ಜಿ ದೇಶಗಳ ಗುಂಪಿನಲ್ಲಿ ಸೇರಿಸಿಕೊಳ್ಳಬೇಕು ಎಂಬ ಒತ್ತಾಯವನ್ನು ಚೀನಾ ಮಾಡುತ್ತಲೇ ಬರುತ್ತಿದೆ. 48 ಸದಸ್ಯರಾಷ್ಟ್ರಗಳನ್ನು ಹೊಂದಿರುವ ಎನ್‌ಎಸ್‌ಜಿ, ಪರಮಾಣು ವ್ಯಾಪಾರ ಹಾಗೂ ವ್ಯವಹಾರಗಳನ್ನು ನಿಯಂತ್ರಿಸುತ್ತದೆ. ಎನ್‌ಪಿಟಿಗೆ ಭಾರತ ಮತ್ತು ಚೀನಾ ಈವರೆಗೆ ಸಹಿ ಹಾಕಿಲ್ಲ.

ಕಜಕಸ್ತಾನದ ಅಸ್ತಾನದಲ್ಲಿ ಇದೇ 20 ಮತ್ತು 21 ರಂದು ಎನ್ಎಸ್‌ಜಿಯ ಅಧಿವೇಶನ ನಡೆದಿದೆ. ಇದರಲ್ಲಿ ಎನ್‌ಎಸ್‌ಜಿಗೆ ಭಾರತ ಸೇರ್ಪಡೆ ಸಂಬಂಧ ಚೀನಾದ ನಿಲುವಿನಲ್ಲಿ ಯಾವುದಾದರೂ ಬದಲಾವಣೆ ಆಗಿದೆಯೇ ಎಂಬ ಬಗ್ಗೆ ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್‌ ಪ್ರತಿಕ್ರಿಯಿಸಿದ್ದು, ಎನ್‌‍ಪಿಟಿಗೆ ಸಹಿಹಾಕದ ದೇಶಗಳ ಕುರಿತು ಯಾವುದೇ ಚರ್ಚೆ ಆಗಿಲ್ಲ. ಭಾರತದ ಬೇಡಿಕೆ ಕುರಿತೂ ಮಾತುಕತೆಯಾಗಿಲ್ಲ ಎಂದು ಹೇಳಿದರು.

‘ಭಾರತ ಪ್ರವೇಶಕ್ಕೆ ಚೀನಾ ಅಡ್ಡಗಾಲು ಹಾಕುತ್ತಿಲ್ಲ. ಆದರೆ ಕೆಲವು ನಿಯಮಗಳನ್ನು ಅನುಸರಿಸಬೇಕು’ ಎಂದು ಲು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT