ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ಲಕ್ಷ ದಾಟಿತು ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ: ಸತ್ತವರು 1.36 ಲಕ್ಷ

ಕೆನಡಾದಲ್ಲಿ ಅನಿರ್ದಿಷ್ಟ ಲಾಕ್‌ಡೌನ್ | ಚೀನಾಕ್ಕೆ 2ನೇ ಅಲೆಯ ಭೀತಿ | ಸಿಂಗಪುರದ ಡಾರ್ಮಿಟರಿಗಳಲ್ಲಿ ಸೋಂಕು
Last Updated 16 ಏಪ್ರಿಲ್ 2020, 13:11 IST
ಅಕ್ಷರ ಗಾತ್ರ
ADVERTISEMENT
""
""

ವಿಶ್ವದ ವಿವಿಧೆಡೆ ಒಟ್ಟು21 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.ಮೃತರ ಸಂಖ್ಯೆ 1.36 ಲಕ್ಷಕ್ಕೇರಿದೆ. ಗುರುವಾರ ಸಂಜೆ 6.30ರವರೆಗಿನ ಮಾಹಿತಿ ಪ್ರಕಾರ ಕೋವಿಡ್-19 ಪಿಡುಗಿಗೆ ಅಮೆರಿಕದಲ್ಲಿ (28,554) ವಿಶ್ವದಲ್ಲೇ ಅತಿಹೆಚ್ಚು ಮಂದಿ ಬಲಿಯಾಗಿದ್ದಾರೆ.ಇಟಲಿ (21,645) ಮತ್ತು ಸ್ಪೇನ್ (19,130) ನಂತರದ ಸ್ಥಾನದಲ್ಲಿವೆ.

ಸೋಂಕಿತರ ಸಂಖ್ಯೆಯೂ ಅಮೆರಿಕದಲ್ಲಿ (644,417) ಹೆಚ್ಚಾಗಿದೆ. ನಂತರದ ಸ್ಥಾನದಲ್ಲಿ ಸ್ಪೇನ್ (182,816) ಮತ್ತುಇಟಲಿ ಇವೆ. ಜರ್ಮನಿ (134,753) ಮತ್ತುಫ್ರಾನ್ಸ್‌ (147,863) ದೇಶಗಳಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ.ಬ್ರಿಟನ್‌ನಲ್ಲಿ (98,476) ಸೋಂಕಿತರ ಸಂಖ್ಯೆ ಒಂದು ಲಕ್ಷಕ್ಕೆ ಕೇವಲ 2 ಸಾವಿರ ಕಡಿಮೆಯಿದೆ.

ಕಳೆದ 24 ಗಂಟೆಗಳಲ್ಲಿ ಬೆಲ್ಜಿಯಂನಲ್ಲಿ ಅತಿಹೆಚ್ಚು ಸಾವುಗಳು (417) ವರದಿಯಾಗಿವೆ. ಸ್ಪೇನ್ (318), ಮೆಕ್ಸಿಕೊ (43), ರಷ್ಯಾ (34) ಮತ್ತು ಪಾಕಿಸ್ತಾನಗಳಲ್ಲಿಯೂ (13) ಸಾವಿನ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿದೆ.

ವಿಶ್ವದ ಪ್ರಮುಖ ದೇಶಗಳಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಈಚೆಗೆ ಸಂಭವಿಸಿರುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ನಿರ್ಬಂಧ ತೆರವಿಗೆ ಟ್ರಂಪ್ ಒಲವು

'ಅಮೆರಿಕದಲ್ಲಿ ಸೋಂಕು ನಿರ್ವಹಣೆ ಪರಿಣಾಮಕಾರಿಯಾಗಿ ನಡೆಯತ್ತಿದೆ. ಲಾಕ್‌ಡೌನ್‌ ತೆರವುಗೊಳಿಸುವ ಬಗ್ಗೆ ಶೀಘ್ರ ಯೋಜನೆ ಪ್ರಕಟಿಸಲಾಗುವುದು' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'ಸೋಂಕು ಕಡಿಮೆಯಾಗಿರುವ ಪ್ರದೇಶಗಳಲ್ಲಿ ನಿರ್ಬಂಧ ತೆರವುಗೊಳಿಸಲಾಗುವುದು. ಸೋಂಕು ಇರುವ ಪ್ರದೇಶಗಳಲ್ಲಿ ನಿರ್ಬಂಧ ಹಾಗೆಯೇ ಮುಂದುವರಿಯಲಿದೆ. ತಮ್ಮ ರಾಜ್ಯಗಳಲ್ಲಿ ನಿರ್ಬಂಧ ಹೇಗೆ ಉಳಿಸಿಕೊಳ್ಳಬೇಕು ಎಂಬ ಅಂತಿಮ ನಿರ್ಣಯ ಆಯಾ ಗವರ್ನರ್‌ಗಳ ವಿವೇಚನೆಗೆ ಬಿಡಲಾಗುತ್ತದೆ' ಎಂದು ಟ್ರಂಪ್ ಹೇಳಿದ್ದಾರೆ.

ಫ್ರಾನ್ಸ್‌ನಲ್ಲಿ ರೋಗಿಗಳ ಸಂಖ್ಯೆ ಇಳಿಮುಖ

ಫ್ರಾನ್ಸ್‌ನಲ್ಲಿ ಹೊಸದಾಗಿ ಸೋಂಕಿತರಾಗುವವರ ಪ್ರಮಾಣ ಕಡಿಮೆಯಾಗಿದೆ. ನ್ಯಾಷನಲ್ ಹೆಲ್ತ್‌ ಏಜೆನ್ಸಿಯ ಮುಖ್ಯಸ್ಥರಾದ ಜೆರೊಮ್ ಸಾಲೊಮೊನ್, ಹಿಂದಿನ ದಿನಕ್ಕೆ ಹೋಲಿಸಿದರೆ ಹೊಸದಾಗಿ ಸೋಂಕು ಪತ್ತೆಯಾಗುವ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ(-500). ತುರ್ತು ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ರೋಗಿಗಳ ಸಂಖ್ಯೆಯೂ ಕಳೆದ 7 ದಿನಗಳಿಂದ ಕಡಿಮೆಯಾಗುತ್ತಲೇ ಇದೆ ಎಂದು ಹೇಳಿದ್ದಾರೆ.

ಫ್ರಾನ್ಸ್‌ನಲ್ಲಿ ಈವರೆಗೆ 17,167 ಮಂದಿಕೋವಿಡ್-19ಕ್ಕೆ ಮೃತಪಟ್ಟಿದ್ದಾರೆ. ಮೇ 11ರರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. 'ನಾವು ಎಚ್ಚರದಿಂದ ಇರಬೇಕು. ತಕ್ಷಣಕ್ಕೆ ನಿರ್ಬಂಧ ತೆರವುಗೊಳಿಸಲು ಒತ್ತಾಯಿಸಬೇಡಿ' ಎಂದು ಸರ್ಕಾರ ಜನರಿಗೆ ಕರೆ ನೀಡಿದೆ.

ಚೀನಾ: ಇನ್ನೂ ಆಸ್ಪತ್ರೆಯಲ್ಲಿದ್ದಾರೆ 3000 ಮಂದಿ

ಕೊರೊನಾ ವೈರಸ್ ಸೋಂಕು ವಿಶ್ವದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಚೀನಾಇದೀಗ ಸಹಜ ಸ್ಥಿತಿಗೆ ಮರಳಲು ಯತ್ನಿಸುತ್ತಿದೆ. ಆದರೆ ದೇಶದ ವಿವಿಧ ಭಾಗಗಳಲ್ಲಿರುವ ತಮ್ಮಮನೆಗಳಲ್ಲಿ ಸಿಲುಕಿರುವ ಲಕ್ಷಾಂತರ ಕಾರ್ಮಿಕರು ನಗರ ಪ್ರದೇಶಗಳಲ್ಲಿರುವ ಕಾರ್ಖಾನೆಗಳಿಗೆ ತಲುಪಲು ಆಗುತ್ತಿಲ್ಲ. ಬೀಜಿಂಗ್ ಸೇರಿದಂತೆ ಹಲವು ದೊಡ್ಡ ನಗರಗಳನ್ನು ಭದ್ರಕೋಟೆಯಾಗಿಸಿರುವ ಚೀನಾ ಟೆಸ್ಟಿಂಗ್‌ ಪ್ರಮಾಣವನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಕಟ್ಟೆಚ್ಚರವಹಿಸಿದೆ.

ದೇಶದ ವಿವಿಧೆಡೆ 3000 ಮಂದಿ ಕೋವಿಡ್-19 ರೋಗಿಗಳು ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ವಿದೇಶಗಳಿಂದ ಚೀನಾಕ್ಕೆ ಕರೆತಂದ 34 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿರುವುದು ಚೀನಾ ಆಡಳಿತಕ್ಕೆ ತಲೆಬಿಸಿಯಾಗಿದೆ. ಈಗಾಗಲೇ ಗುಣವಾಗಿರುವ ಹಲವರಲ್ಲಿ ಸೋಂಕು ಮತ್ತೆ ಕಾಣಿಸಿಕೊಳ್ಳುತ್ತಿರುವುದು ಹೊಸ ಆತಂಕ ತಂದೊಡ್ಡಿದೆ.

ಚೀನಾದಲ್ಲಿ ಒಟ್ಟು82,341 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.3,342 ಮಂದಿ ಮೃತಪಟ್ಟಿದ್ದಾರೆ,77,892 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಹೊಸದಾಗಿ46 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸಿಂಗಾಪುರದಲ್ಲಿ ಸತತ ಮೂರನೇ ದಿನ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ

ಸಿಂಗಾಪುರದಲ್ಲಿ 447 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕಳೆದ ಮೂರು ದಿನಗಳಿಂದ ಸೋಂಕು ಕ್ಷಿಪ್ರಗತಿಯಲ್ಲಿ ಏರುತ್ತಿದೆ. ಈವರೆಗೆ ಒಟ್ಟು 3,699 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಮವಾರದಿಂದೀಚೆಗೆ 1,167 ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದು ಆತಂಕ ಹುಟ್ಟಿಸಿದೆ.ಬಾಂಗ್ಲಾದೇಶ, ಭಾರತ ಮತ್ತು ಏಷ್ಯಾದ ಇತರ ದೇಶಗಳ ಬಡವರಿಗೆ ಆಶ್ರಯ ಕೊಟ್ಟಿರುವ ಡಾರ್ಮಿಟರಿಗಳಲ್ಲಿಯೇ ಸೋಂಕಿತರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ.

ಕೋವಿಡ್-19ರ ಮೊದಲ ಹಂತದ ಸಮಸ್ಯೆಯನ್ನು ಸಿಂಗಾಪುರ ಯಶಸ್ವಿಯಾಗಿ ನಿರ್ವಹಿಸಿತ್ತು. ಆದರೆ ಎರಡನೇ ಅಲೆಯ ಹೊಡೆತ ಸಿಂಗಾಪುರವನ್ನು ಹೈರಾಣಾಗಿಸಿದೆ. ಈ ಡಾರ್ಮಿಟರಿಗಳಲ್ಲಿ ಸರಿಸುಮಾರು 20 ಮಂದಿಯನ್ನು ಇರಿಸಲಾಗಿದೆ.ಒಂದೇ ಅಡುಗೆಮನೆ, ಶೌಚಾಲಯ ಇವೆ. ಇಂಥ ಡಾರ್ಮಿಟರಿಗಳೂ ಸೋಂಕು ಹರಡಲು ಕಾರಣವಾಗಬಹುದು ಎಂದು ಸಿಂಗಾಪುರ ಸರ್ಕಾರ ಆರಂಭದಲ್ಲಿ ಮನಗಾಣಲಿಲ್ಲ.ಇಂಥ ಡಾರ್ಮೆಟರಿಗಳಲ್ಲಿಯೇ ಸಾವಿರಾರು ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇದೀಗ ಇಂಥ ಡಾರ್ಮಿಟರಿಗಳಿಂದ ಸೋಂಕು ಕಡಿಮೆಯಾಗಲಿ ಎಂದು ಕೆಲವರನ್ನು ದೂರದ ಊರುಗಳಿಗೆ ಕಳಿಸಲಾಗಿದೆ.

ಸಿಂಗಾಪುರದ ಒಟ್ಟು ಸೋಂಕಿತರ ಪೈಕಿ ವಿದೇಶಗಳಿಂದ ಬಂದಿರುವವರೇ ಅರ್ಧದಷ್ಟು ಮಂದಿ ಇರುವುದು ಗಮನಾರ್ಹ ಸಂಗತಿ. ಮೇ 4ರವರೆಗೆ ಲಾಕ್‌ಡೌನ್ ವಿಧಿಸಲಾಗಿದೆ. ಮನೆಗಳಿಂದ ಹೊರಗೆ ಓಡಾಡುವಾಗ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಜಸ್ಟಿನ್ ಟ್ರುಡೊ - ಸೋಫಿ ಗ್ರೆಗೋಯಿರ್ ಟ್ರುಡೊ

ಕೆನಡಾದಲ್ಲಿ ಅನಿರ್ದಿಷ್ಟಾವಧಿ ಲಾಕ್‌ಡೌನ್

ಇನ್ನೂ ಹಲವು ವಾರಗಳ ಅವಧಿಗೆ ಲಾಕ್‌ಡೌನ್‌ ವಿಸ್ತರಿಸಲಾಗುವುದು ಎಂದಷ್ಟೇ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೆ ಹೇಳಿದ್ದಾರೆ.

'ತಕ್ಷಣಕ್ಕೆ ಲಾಕ್‌ಡೌನ್ ತೆರವುಗೊಳಿಸಿದರೆ, ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ. ಈವರೆಗೆ ಮಾಡಿರುವ ಎಲ್ಲಾ ತ್ಯಾಗಗಳು ಬೆಲೆ ಕಳೆದುಕೊಳ್ಳುತ್ತವೆ. ಕೆನಡಾ ಇನ್ನೂ ಸಹಜಸ್ಥಿತಿಗೆ ಮರಳಿಲ್ಲ. ಹಲವು ವಾರಗಳು ನಾವು ತ್ಯಾಗಕ್ಕೆ ಸಿದ್ಧರಾಗಬೇಕಿದೆ. ನಿರ್ಬಂಧ ತೆರವುಗೊಳ್ಳುವ ಮೊದಲು ವ್ಯಾಪಕವಾಗಿ ಟೆಸ್ಟಿಂಗ್ ಮಾಡುವ ಸಾಮರ್ಥ್ಯ ನಾವು ಗಳಿಸಿಕೊಳ್ಳಬೇಕಿದೆ. ಪಾಸಿಟಿವ್ ಬಂದವರನ್ನು ತಕ್ಷಣ ಪ್ರತ್ಯೇಕಿಸಿ ಚಿಕಿತ್ಸೆ ನೀಡಬೇಕಿದೆ. ಕೊರೊನಾ ಸೋಂಕಿನ ಮೊದಲ ಅಲೆಯನ್ನು ದೇಶ ಯಶಸ್ವಿಯಾಗಿ ನಿರ್ವಹಿಸಿದೆ' ಎಂದು ಟ್ರೂಡೆ ಹೇಳಿದ್ದಾರೆ.

ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಟ್ರುಡೆ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕೆನಡಾದಲ್ಲಿ 28,379ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. 1010 ಮಂದಿ ಮೃತಪಟ್ಟಿದ್ದಾರೆ.

(ಈ ಬರಹಕ್ಕೆಅಂಕಿಅಂಶಗಳನ್ನುwww.worldometers.info/coronavirus/#countries ಜಾಲತಾಣದಿಂದ ಪಡೆಯಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT