ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ -19: ಗುಣಮುಖರಾದರೂ 8 ದಿನ ಎಚ್ಚರ

ಚೀನಾದ ರೋಗಿಗಳ ಅಧ್ಯಯನದಿಂದ ತಿಳಿದ ಅಂಶ
Last Updated 28 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಬೀಜಿಂಗ್‌: ಕೊರೊನಾ ವೈರಾಣು ಹರಡುವಿಕೆಯನ್ನು ತಡೆಯುವುದು ಬಹಳ ಕಷ್ಟ ಎಂಬುದಕ್ಕೆ ಇನ್ನೊಂದು ಕಾರಣವೂ ತಿಳಿದು ಬಂದಿದೆ.

ಕೋವಿಡ್‌ 19 ರೋಗ ಗುಣಮುಖರಾಗಿ, ಯಾವುದೇ ಲಕ್ಷಣ ಇಲ್ಲದೇ ಇದ್ದರೂ ಸುಮಾರು ಎಂಟು ದಿನ ಅವರು ಸೋಂಕು ಹರಡಬಲ್ಲರು ಎಂದು ಸಂಶೋಧಕರು ಹೇಳಿದ್ದಾರೆ.

ಕೋವಿಡ್‌ 19 ರೋಗ ಬಾಧಿತರಾದ 16 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿ ಸಿದ್ಧಪಡಿಸಲಾದ ಪ್ರಬಂಧವು ಅಮೆರಿಕನ್‌ ಜರ್ನಲ್‌ ಆಫ್‌ ರೆಸ್ಪಿರೇಟರಿ ಎಂಡ್‌ ಕ್ರಿಟಿಕಲ್‌ ಕೇರ್‌ ಮೆಡಿಸಿನ್‌ನಲ್ಲಿ ಪ್ರಕಟವಾಗಿದೆ.

ಇವರಿಗೆ ಬೀಜಿಂಗ್‌ನ ಪಿಎಲ್‌ಎ ಜನರಲ್‌ ಆಸ್ಪತ್ರೆಯಲ್ಲಿ ಜನವರಿ 28ರಿಂದ ಫೆಬ್ರುವರಿ 9ರ ನಡುವೆ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾಗಿರುವುದು ದೃಢಪಟ್ಟ ನಂತರ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಬಳಿಕ, ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಅವರಲ್ಲಿ ಅರ್ಧಭಾಗದಷ್ಟು ರೋಗಿಗಳ ಗಂಟಲ ದ್ರವದಲ್ಲಿ ವೈರಸ್‌ ಪತ್ತೆಯಾಗಿತ್ತು ಮತ್ತು ಅದು ಇತರರಿಗೆ ರೋಗ ಹರಡುವ ಸಾಮರ್ಥ್ಯ ಹೊಂದಿತ್ತು ಎಂಬುದು ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಯೇಲ್‌ ವಿಶ್ವವಿದ್ಯಾಲಯದ ವಿಜ್ಞಾನಿ, ಭಾರತ ಮೂಲದ ಲೋಕೇಶ್‌ ಶರ್ಮಾ ಅವರೂ ಅಧ್ಯಯನ ತಂಡದ ಭಾಗವಾಗಿದ್ದರು.

‘ಕೋವಿಡ್‌ 19 ರೋಗದಿಂದ ತೀವ್ರ ಬಾಧೆಗೆ ಒಳಗಾದವರು ಇನ್ನೂ ಹೆಚ್ಚು ಕಾಲ ಸೋಂಕು ಹರಡಬಲ್ಲರು’ ಎಂದು ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಇವರಲ್ಲಿ 15 ವ್ಯಕ್ತಿಗಳಿಗೆ ಸೋಂಕು ತಗಲಿ ಐದು ದಿನಗಳ ಬಳಿಕ ಲಕ್ಷಣಗಳು ಕಾಣಿಸಿಕೊಂಡಿದ್ದವು. ಲಕ್ಷಣಗಳು ಇದ್ದ ಸರಾಸರಿ ಅವಧಿ ಎಂಟು ದಿನಗಳು. ಇವರ ಪೈಕಿ ಇಬ್ಬರಿಗೆ ಸಕ್ಕರೆ ಕಾಯಿಲೆ ಮತ್ತು ಒಬ್ಬರಿಗೆ ಕ್ಷಯ ರೋಗ ಇತ್ತು. ಆದರೆ, ಕೋವಿಡ್‌ ಇದ್ದ ಅವಧಿಯಲ್ಲಿ ಅವರಿಗೆ ಇದರಿಂದ ಹೆಚ್ಚಿನ ತೊಂದರೆ ಆಗಿಲ್ಲ ಎಂಬ ಆಶಾದಾಯಕ ಅಂಶವೂ ಅಧ್ಯಯನದಿಂದ ತಿಳಿದಿದೆ.

ಅಧ್ಯಯನಕ್ಕೆ ಒಳಗಾದ ರೋಗಿಗಳಲ್ಲಿ ಸಾಧಾರಣ ಲಕ್ಷಣಗಳು ಮಾತ್ರ ಕಂಡು ಬಂದಿದ್ದವು. ತೀವ್ರವಾದ ಸಮಸ್ಯೆ ಇರುವ ರೋಗಿಗಳಿಗೆ ಈ ಅಧ್ಯಯನದ ಫಲಿತಾಂಶವನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT