ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid 19 World Update: 36 ಲಕ್ಷ ದಾಟಿತು ಸೋಂಕಿತರ ಸಂಖ್ಯೆ, 2.53 ಲಕ್ಷ ಬಲಿ

ಚೀನಾ ವಿರುದ್ಧ ತೊಡೆತಟ್ಟಿದ ಅಮೆರಿಕ
ಅಕ್ಷರ ಗಾತ್ರ
ADVERTISEMENT
""

ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಉಂಟಾದ ಒಟ್ಟು ಸಾವುಗಳ ಸಂಖ್ಯೆ ಮಂಗಳವಾರ 2.53 ಲಕ್ಷ ದಾಟಿದೆ. ಸೋಂಕಿತರ ಸಂಖ್ಯೆ 36.73 ಲಕ್ಷ ಮುಟ್ಟಿದೆ. ಕೊರೊನಾ ಸೋಂಕು ಹರಡುವುದಕ್ಕೆ ಕಡಿವಾಣ ಹಾಕಲು ವಿಧಿಸಿದ್ದ ನಿರ್ಬಂಧಗಳನ್ನುತೆರವುಗೊಳಿಸುವ ಪ್ರಕ್ರಿಯೆಯು ಭಾರತ, ಅಮೆರಿಕ ಸೇರಿ ವಿಶ್ವದ ಹಲವು ದೇಶಗಳಲ್ಲಿ ಅರಂಭವಾಗಿದೆ.

ನಿರ್ಬಂಧಗಳನ್ನು ತೆರವುಗೊಳಿಸುವುದರಿಂದಜಾಗತಿಕ ಆರ್ಥಿಕತೆಯು ಮರಳಿ ಹಳಿಗೆ ಬರಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ಅದರಜೊತೆಜೊತೆಗೆ ಸೋಂಕು ಮರುಕಳಿಸಬಹುದೆಂಬ ಆತಂಕವೂ ವ್ಯಾಪಕವಾಗಿ ವ್ಯಕ್ತವಾಗಿದೆ. ಈ ಎಲ್ಲದರ ನಡುವೆ ಚೀನಾಗೆ ತಕ್ಕ ಪಾಠ ಕಲಿಸಲು ಹೊಸ ತೆರಿಗೆ ಹೇರುವ ಬೆದರಿಕೆ ಅಮೆರಿಕ ಶ್ವೇತ ಭವನದ ಮೊಗಸಾಲೆಯಿಂದ ತೇಲಿ ಬಂದಿದೆ.

ಕೊರೊನಾ ಸೋಂಕಿನಿಂದ ವ್ಯಾಪಕ ಜೀವಹಾನಿ ಮತ್ತು ಆರ್ಥಿಕ ನಷ್ಟ ಅನುಭವಿಸಿದ್ದ ಇಟಲಿ ನಿರ್ಬಂಧ ಸಡಿಲಿಸಿದೆ.ಕೆಲಸಗಳಿಗೆ ಮರಳಲು45 ಲಕ್ಷ ಜನರಿಗೆ ಅವಕಾಶ ಮಾಡಿಕೊಟ್ಟಿದೆ. ಸ್ಪೇನ್, ಪೋರ್ಚುಗಲ್, ಬೆಲ್ಜಿಯಂ, ಫಿನ್‌ಲೆಂಡ್, ನೈಜಿರಿಯಾ, ಭಾರತ, ಮಲೇಷಿಯಾ, ಥಾಯ್ಲೆಂಡ್, ಇಸ್ರೇಲ್ ಮತ್ತು ಲೆಬನಾನ್‌ಗಳಲ್ಲಿಯೂ ಕಾರ್ಖಾನೆಗಳು ಪುನಃ ಆರಂಭವಾಗುತ್ತಿವೆ. ಕಟ್ಟಡ ನಿರ್ಮಾಣ ಚಟುವಟಿಕೆಗಳು, ಉದ್ಯಾನಗಳು ಮತ್ತು ಗ್ರಂಥಾಲಯಗಳ ಕಾರ್ಯನಿರ್ವಹಣೆಗೆ ಹಲವು ದೇಶಗಳಲ್ಲಿ ಅವಕಾಶ ಕೊಡಲಾಗಿದೆ.

ಚೀನಾ ವಿರುದ್ಧ ತೊಡೆತಟ್ಟಲು ಅಮೆರಿಕ ಸಿದ್ಧತೆ

ಕೊರೊನಾ ವೈರಸ್ ಸೋಂಕು ಈಗ ಕೇವಲ ಆರೋಗ್ಯದ ಸಮಸ್ಯೆಯಾಗಿಯಷ್ಟೇ ಉಳಿದಿಲ್ಲ. ಅಮೆರಿಕ–ಚೀನಾ ಮೇಲಾಟಗಳಿಗೂ ನೆಪವಾಗಿ ಒದಗಿದೆ. ‘ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು, ತನ್ನ ದೇಶದ ಆರ್ಥಿಕತೆಗೆ ಧಕ್ಕೆ ಉಂಟು ಮಾಡಲು ಚೀನಾ ಮುಖ್ಯ ಕಾರಣ. ಅದಕ್ಕಾಗಿ ನಷ್ಟಪರಿಹಾರ ಕಟ್ಟಿಕೊಡಬೇಕು’ ಎಂದು ಈವರೆಗೆ ಬಾಯ್ಮಾತಿನ ಆರೋಪಗಳನ್ನು ಮಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ವಿಧಿಸುವ ಸುಂಕಗಳ ಪ್ರಮಾಣ ಹೆಚ್ಚಿಸಲು ಮತ್ತು ವಿಶ್ವದ ಇತರ ದೇಶಗಳಿಗೆ ರವಾನೆಯಾಗುವ ಚೀನಾದಲ್ಲಿ ತಯಾರಾದಉತ್ಪನ್ನಗಳನ್ನು ಮಿತಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಯೋಚಿಸುತ್ತಿದೆ. ಚೀನಾದಲ್ಲಿ ಅಮೆರಿಕ ಉದ್ಯಮಿಗಳು ಸ್ಥಾಪಿಸಿರುವ ಉತ್ಪಾದನಾ ಘಟಕಗಳನ್ನು ಬೇರೆಡೆಗೆ ಸ್ಥಳಾಂತರಿಸಲೂ ಟ್ರಂಪ್ ಆಡಳಿತ ಪರೋಕ್ಷ ಒತ್ತಡ ಹೇರುತ್ತಿದೆ.

ಅಮೆರಿಕದಲ್ಲಿ ಈವರೆಗೆ12.15 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 70 ಸಾವಿರ ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ208 ಸಾವುಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿವೆ.

ಕೊರೊನಾ ವೈರಸ್ ಸೋಂಕಿನಿಂದ ವ್ಯಾಪಕ ಪೆಟ್ಟು ತಿಂದಿದ್ದ ಅಮೆರಿಕದ ರಾಜ್ಯಗಳು ಇದೀಗ ಒಂದೊಂದಾಗಿ ನಿರ್ಬಂಧಗಳು ಸಡಿಲಿಸಲು ಮುಂದಾಗುತ್ತಿವೆ. ‘ಕ್ಯಾಲಿಫೋರ್ನಿಯಾ ರಾಜ್ಯದಲ್ಲಿಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯಲು ಇದೇ ವಾರ ಅನುಮತಿ ನೀಡಲು ಚಿಂತನೆ ನಡೆದಿದೆ. ಕೆಲ ಕೌಂಟಿಗಳಲ್ಲಿ ಸೋಂಕು ಪತ್ತೆ ಪ್ರಮಾಣ ಕಡಿಮೆಯಾದರೆ ಇನ್ನಷ್ಟು ಸ್ವಾತಂತ್ರ್ಯ ನೀಡಲಾಗುವುದು’ ಎಂದು ಕ್ಯಾಲಿಫೋರ್ನಿಯಾ ಗವರ್ನರ್ ಗಾವಿನ್ ನ್ಯುಸೊಮ್ ಹೇಳಿದ್ದಾರೆ.

ಯೂರೋಪ್‌ನ ಸೋಂಕು ಕೇಂದ್ರವಾದ ಇಂಗ್ಲೆಂಡ್‌: ಒಟ್ಟು 29 ಸಾವಿರ ಸಾವು

ಬ್ರಿಟನ್‌ನಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಈವರೆಗೆ ಸುಮಾರು 28,734 ಮಂದಿ ಮೃತಪಟ್ಟಿದ್ದಾರೆ.1.90ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಬ್ರಿಟನ್ ಸರ್ಕಾರವು ಮೃತರ ಸಂಖ್ಯೆಯನ್ನು30 ಸಾವಿರ ಎಂದು ಅಂದಾಜಿಸಿದೆ.ಇಟಲಿಯಲ್ಲಿ ಈವರೆಗೆ ಸೋಂಕಿನಿಂದ29,079 ಮಂದಿ ಮೃತಪಟ್ಟಿದ್ದಾರೆ. ಈ ಎರಡೂ ದೇಶಗಳ ಸರ್ಕಾರಗಳು ಕೊಟ್ಟಿರುವ ಅಂಕಿಅಂಶಗಳನ್ನು ಜಗತ್ತು ಸಂದೇಹದಿಂದ ನೋಡುತ್ತಿದೆ. ಎರಡೂ ದೇಶಗಳಲ್ಲಿ ತೀರಾ ಇತ್ತೀಚಿನವರೆಗೂ ಸೋಂಕು ಪರೀಕ್ಷೆ ವ್ಯಾಪಕವಾಗಿ ನಡೆದಿರಲಿಲ್ಲ. ಸೋಂಕು ಪತ್ತೆಯಾಗುವ ಮೊದಲೇ ಕಾಯಿಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಪಾಕಿಸ್ತಾನದಲ್ಲಿ 21,000 ಕೋವಿಡ್–19 ಪ್ರಕರಣ ಪತ್ತೆ

‘ದೀರ್ಘಕಾಲದ ನಿರ್ಬಂಧ ಸಹಿಸಿಕೊಳ್ಳುವ ಶಕ್ತಿ ಪಾಕ್ ಅರ್ಥ ವ್ಯವಸ್ಥೆಗೆ ಇಲ್ಲ’ ಎಂದು ಈಚೆಗಷ್ಟೇ ಅಲವತ್ತುಕೊಂಡಿದ್ದ ಪಾಕ್ ಪ್ರಧಾನಿಇಮ್ರಾನ್ ಖಾನ್‌ಗೆ ಇರಿಸುಮುರಿಸು ಉಂಟು ಮಾಡುವಂತೆ ಪಾಕಿಸ್ತಾನದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಕಳೆದ 24 ಗಂಟೆಗಳಲ್ಲಿ 1,300 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. 24 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸೋಂಕಿತರ ಒಟ್ಟು ಸಂಖ್ಯೆ 21,501ಕ್ಕೆ ಮತ್ತು ಮೃತರ ಸಂಖ್ಯೆ 486ಕ್ಕೆ ಏರಿಕೆಯಾಗಿದೆ ಎಂದು ಪಾಕ್ ಆರೋಗ್ಯ ಇಲಾಖೆ ತಿಳಿಸಿದೆ.

ಪಾಕಿಸ್ತಾನದ ಪಂಜಾಬ್‌ನಲ್ಲಿ 8,103, ಸಿಂಧ್‌ನಲ್ಲಿ 7882, ಖೈಬರ್ ಪಖ್ತುನ್‌ಖ್ವಾದಲ್ಲಿ 3,288, ಬಲೂಚಿಸ್ತಾನದಲ್ಲಿ 1,321, ಇಸ್ಲಾಮಾಬಾದ್‌ನಲ್ಲಿ 464, ಗಿಲ್ಗಿಟ್ ಬಾಲ್ಟಿಸ್ತಾನ್‌ನಲ್ಲಿ 372, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 71 ಪ್ರಕರಣಗಳು ವರದಿಯಾಗಿವೆ. ಪಾಕಿಸ್ತಾನದಲ್ಲಿ ಈವರೆಗೆ 2.22 ಲಕ್ಷ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶವ್ಯಾಪಿ ಲಾಕ್‌ಡೌನ್‌ ನಿರ್ಬಂಧ ಸಡಿಲಿಸಲಾಗಿದೆ.

ದಕ್ಷಿಣ ಕೊರಿಯಾದಲ್ಲಿ ಕ್ರೀಡಾ ಚಟುವಟಿಕೆ ಆರಂಭ

ದಕ್ಷಿಣ ಕೊರಿಯಾದಲ್ಲಿ ಕ್ರೀಡಾ ಚಟುವಟಿಕೆಗಳು, ಶಿಕ್ಷಣ ಸಂಸ್ಥೆಗಳು ಮಂಗಳವಾರದಿಂದ ಮತ್ತೆ ಆರಂಭವಾಗಿವೆ. ವೃತ್ತಿಪರ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಪಂದ್ಯಾವಳಿಗಳೂ ಆರಂಭಗೊಂಡಿವೆ. ಈವರೆಗೆ 10,804 ಮಂದಿಗೆ ಸೋಂಕು ತಗುಲಿದ್ದು, 254 ಮಂದಿ ಮೃತಪಟ್ಟಿದ್ದಾರೆ.

ಟರ್ಕಿ: ಅಪಾಯಿಂಟ್‌ಮೆಂಟ್ ತಗೊಂಡು ಕ್ಷೌರದಂಗಡಿಗೆ ಬನ್ನಿ

ಟರ್ಕಿಯಲ್ಲಿ ಕೊರೊನಾ ಸೋಂಕು ಹೊಸದಾಗಿ ವರದಿಯಾಗುವ ಪ್ರಮಾಣ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ಬಂಧ ಸಡಿಲಿಸುವ ಸಾಧ್ಯತೆಗಳ ಕುರಿತು ಅಧ್ಯಕ್ಷ ರೆಸೆಪ್ ತಯ್ಯೆಪೆ ಎರ್ಡೊಗನ್ ಮಾತನಾಡಿದ್ದಾರೆ. ಜನರು ಅಗತ್ಯ ಎಚ್ಚರಿಕೆಯೊಂದಿಗೆ ದೈನಂದಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಒಂದು ವೇಳೆ ಸೋಂಕು ಮರುಕಳಿಸಿದರೆ ಕಠಿಣ ನಿರ್ಬಂಧಗಳನ್ನು ವಿಧಿಸಬೇಕಾಗಬಹುದು ಎಂದು ಎರ್ಡೊಗನ್ ಎಚ್ಚರಿಸಿದ್ದಾರೆ.

ಮೇ 11ರ ನಂತರ ಮಾಲ್‌ಗಳು, ಕ್ಷೌರದಂಗಡಿಗಳು ಮತ್ತು ಬ್ಯೂಟಿ ಪಾರ್ಲರ್‌ಗಳಿಗೂ ಕಾರ್ಯಾರಂಭಕ್ಕೆ ಅನುಮತಿ ನೀಡಲಾಗುವುದು. ಆದರೆ ಗ್ರಾಹಕರುಮೊದಲೇ ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಬರಬೇಕು.ಒಟ್ಟು ಸ್ಥಳಾವಕಾಶದ ಅರ್ಧದಷ್ಟು ಸಾಮರ್ಥ್ಯದಲ್ಲಿ ಮಾತ್ರ ಜನರನ್ನು ಸೇವೆ ಒದಗಿಸಬೇಕುಎಂದು ಎರ್ಡೊಗನ್ ಸೂಚಿಸಿದ್ದಾರೆ. ಏಳು ಪ್ರಮುಖ ನಗರಗಳ ಪ್ರವೇಶ ಮತ್ತು ನಿರ್ಗಮನ ನಿರ್ಬಂಧವನ್ನು ಸಡಿಲಿಸಲಾಗುವುದು. ಆದರೆ ಇಸ್ತಾಂಬುಲ್, ಅಂಕರ ಸೇರಿ 24 ನಗರಗಳಲ್ಲಿ ಪ್ರವೇಶ ನಿರ್ಬಂಧ ಮುಂದುವರಿಯಲಿದೆ ಸರ್ಕಾರ ತಿಳಿಸಿದೆ.

ಬ್ರೆಜಿಲ್ ಅಧ್ಯಕ್ಷ ಬಾಲ್‌ಸೊನಾರೊಗೆ ಕೋವಿಡ್‌ ಇದೆಯೇ?

ಬ್ರೆಜಿಲ್ ಅಧ್ಯಕ್ಷ ಜೈರ್ ಬಾಲ್ಸೊನಾರೊ ಅವರು ಎರಡು ಬಾರಿ ಕೊರೊನಾ ಸೋಂಕು ತಪಾಸಣೆಗೆ ಒಳಗಾಗಿದ್ದಾರೆ. ಎರಡೂ ಬಾರಿಯೂ ಫಲಿತಾಂಶ ನೆಗೆಟಿವ್ ಬಂದಿದೆ. ಆದರೆ ಈ ಫಲಿತಾಂಶ ಒಪ್ಪಲು ಅಲ್ಲಿನ ಫೆಡರಲ್ ನ್ಯಾಯಾಧೀಶರು ಸಿದ್ಧರಿಲ್ಲ. ಅಧ್ಯಕ್ಷರು ನಿಜವಾದ ಫಲಿತಾಂಶ ಹಂಚಿಕೊಳ್ಳುತ್ತಿಲ್ಲ ಎನ್ನುವುದು ಅವರ ಅನುಮಾನ. ಇದು ಬ್ರಿಜಿಲ್‌ನಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಹುಟ್ಟುಹಾಕುವ ಅಪಾಯ ತಂದೊಡ್ಡಿದೆ.

ಎಲ್ಲರೂ ಸುರಕ್ಷಿತರಾಗುವವರೆಗೆ ಯಾರೂ ಸುರಕ್ಷಿತರಲ್ಲ: ವಿಶ್ವಸಂಸ್ಥೆ ಆತಂಕ

‘ಜಗತ್ತು ಕೊರೊನಾ ವೈರಸ್ ಪಿಡುಗಿನಿಂದ ಪಾರಾಗುವುದು ಅಷ್ಟು ಸುಲಭವಲ್ಲ. ಈಗ ಎಲ್ಲರೂ ಎಲ್ಲರಿಗೂ ಸಂಬಂಧಿಸಿದವರಾಗಿದ್ದೇವೆ. ಎಲ್ಲರೂ ಸುರಕ್ಷಿತರಾಗುವವರೆಗೆ ಯಾರೂ ಸುರಕ್ಷಿತರಲ್ಲ’ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.

‘ಸಾರ್ವಜನಿಕ ಆರೋಗ್ಯ ಕಾಪಾಡಲು ಮತ್ತು ಸೋಂಕು ಹರಡುವಿಕೆಗೆ ತಡೆಯೊಡ್ಡಲು ವಿಶ್ವಮಟ್ಟದಲ್ಲಿ ಗಟ್ಟಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಸೋಂಕು ಇನ್ನೂಹಲವು ದೇಶಗಳನ್ನು ತೀವ್ರಗತಿಯಲ್ಲಿ ಬಾಧಿಸುವ ಸಾಧ್ಯತೆಯಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ರಷ್ಯಾ: ಮೂರು ದಿನದಲ್ಲಿ 10 ಸಾವಿರ ಮಂದಿಗೆ ಸೋಂಕು

ರಷ್ಯಾದಲ್ಲಿಸೋಂಕಿನ ಪ್ರಮಾಣ ಈಚಿನ ದಿನಗಳಲ್ಲಿ ತೀವ್ರಗತಿಯಲ್ಲಿ ಹೆಚ್ಚಾಗಿದೆ. ಕಳೆದ ಮೂರು ದಿನಗಳಲ್ಲಿ 10 ಸಾವಿರ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ ರಷ್ಯಾದಲ್ಲಿ ಒಟ್ಟು 1.55 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 1451 ಮಂದಿ ಮೃತಪಟ್ಟಿದ್ದಾರೆ.

ಮೇ 5, ರಾತ್ರಿ 8.50ರ ಕೊರೊನಾ ಸೋಂಕು ಅಂಕಿಅಂಶ. ಮಾಹಿತಿwww.worldometers.info

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT