ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ, ಬ್ರೆಜಿಲ್‌, ಅಮೆರಿಕದಲ್ಲಿ ಸಂಕಷ್ಟ: ಕೊರೊನಾ ಸಮರದಲ್ಲಿ ಗೆಲುವು ಬಲು ದೂರ!

Last Updated 6 ಮೇ 2020, 11:52 IST
ಅಕ್ಷರ ಗಾತ್ರ
ADVERTISEMENT
""
""

ಬ್ಯಾಂಕಾಕ್‌: ಭಾರತದಲ್ಲಿ ಮೂರನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದು, ತಮಿಳುನಾಡಿನ ಕೊಯಂಬೇಡು ಮಾರುಕಟ್ಟೆ ಕೊರೊನಾ ಸೋಂಕಿನ ಹೊಸ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ. ಇದರಿಂದಾಗಿ ಸೋಂಕು ಪ್ರಕರಣಗಳ ಸಂಖ್ಯೆದಿಢೀರ್‌ ಏರಿಕೆಯಾಗಿದೆ. ಬ್ರೆಜಿಲ್‌ನಲ್ಲಿ ಮೊದಲ ಬಾರಿಗೆ ಲಾಕ್‌ಡೌನ್‌ ಜಾರಿ ಮಾಡಲಾಗಿದೆ ಹಾಗೂ ಅಮೆರಿಕದಲ್ಲಿ ಕೋವಿಡ್‌–19 ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಮನೆಯಲ್ಲಿಯೇ ಉಳಿಯುವ ನಿಯಮಗಳು ಸಡಿಲಗೊಳ್ಳುತ್ತಿವೆ,... ಹಲವು ಕ್ರಮಗಳ ನಡುವೆಯೂಕೊರೊನಾ ವೈರಸ್‌ ವಿರುದ್ಧ ಹೋರಾಟದಲ್ಲಿ ಗೆಲವು ದೂರವೇ ಉಳಿದಿರುವುದು ದಿನೇ ದಿನೇ ಜಗತ್ತಿನ ಬಹುತೇಕ ಭಾಗಗಳಲ್ಲಿ ಸಾಬೀತಾಗುತ್ತಿದೆ.

ಅಮೆರಿಕದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಹಾಗೂ ಸಾವಿಗೀಡಾಗಿರುವುದು ನ್ಯೂಯಾರ್ಕ್‌ನಲ್ಲಿ ವರದಿಯಾಗಿದೆ. ಪ್ರಸ್ತುತ ಅಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ, ನ್ಯೂಯಾರ್ಕ್ ಹೊರಭಾಗಗಳಲ್ಲಿ ಸೋಂಕು ವ್ಯಾಪಿಸುತ್ತಿದೆ. ಈ ನಡುವೆ ಆರಿಜೊನಾದ ಮಾಸ್ಕ್‌ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಶೀಘ್ರದಲ್ಲಿ ಅಮೆರಿಕ ಸಹಜ ಚಟುವಟಿಕೆಗೆ ತೆರದುಕೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ. ಏಳು ವಾರಗಳಿಂದ ಬಹುತೇಕ ಲಾಕ್‌ಡೌನ್‌ ಸ್ಥಿತಿಯಲ್ಲಿರುವ ಅಮೆರಿಕ, ಮನೆಯಲ್ಲಿಯೇ ಉಳಿಯುವ ಕಠಿಣ ನಿಯಮಗಳನ್ನು ಸಡಿಲಗೊಳಿಸಲು ಮುಂದಾಗಿದೆ.

ಜಾನ್ಸ್‌ ಹಾಪ್‌ಕಿನ್ಸ್‌ ಮಾಹಿತಿ ಪ್ರಕಾರ, ಅಮೆರಿಕದಲ್ಲಿ ಕೋವಿಡ್‌–19 ದೃಢಪಟ್ಟ ಹೊಸ ಪ್ರಕರಣಗಳ ಪ್ರಮಾಣ ದಿನಕ್ಕೆ 20,000 ದಾಟಿದೆ ಹಾಗೂ ಸುಮಾರು 1,000 ಮಂದಿ ಸೋಂಕಿನಿಂದ ಸಾವಿಗೀಡಾಗುತ್ತಿದ್ದಾರೆ. ಯೂನಿವರ್ಸಿಟಿ ಆಫ್‌ ವಾಷಿಂಗ್ಟನ್‌ ಪರಿಗಣಿಸಿರುವ ಮಾದರಿ ಪ್ರಕಾರ, ಅಮೆರಿಕದಲ್ಲಿ ಆಗಸ್ಟ್‌ ವೇಳೆಗೆ ಕೋವಿಡ್‌–19ನಿಂದಾಗಿ ಸಾವಿಗೀಡಾಗುವವರ ಸಂಖ್ಯೆ 1,34,000 ತಲುಪಲಿದೆ.

ಆದಷ್ಟು ಬೇಗ ಅಮೆರಿಕದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕಾರ್ಯಾರಂಭಿಸುವ ಚರ್ಚೆ ಬಿರುಸಾಗಿದೆ. ನ್ಯೂಯಾರ್ಕ್‌ ಗವರ್ನರ್‌ ಆ್ಯಂಡ್ರ್ಯೂ ಕೌಮೊ, 'ಅತ್ಯಂತ ಬೇಗ ಪುನರಾರಂಭ ಮಾಡಿದರೆ ಆರ್ಥಿಕ ಹೊಡೆತ ಕಡಿಮೆ ಮಾಡಿಕೊಳ್ಳಬಹುದು. ಆದರೆ, ಅತಿ ಹೆಚ್ಚು ಜೀವಗಳನ್ನು ಕಳೆದುಕೊಳ್ಳಬೇಕಾಗುತ್ತದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನೂ ಭಾರತದ ಕಥೆ ಭಿನ್ನ. ಮೂರನೇ ಹಂತದ ಲಾಕ್‌ಡೌನ್‌ ಜಾರಿಯಾಗುವ ಜೊತೆಗೆ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಕೆಲವು ಸಡಿಲಿಕೆಗಳನ್ನು ಸರ್ಕಾರ ನೀಡಿದೆ. ಸರ್ಕಾರಗಳು ಆದಾಯ ಗಳಿಕೆಗಾಗಿ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿ, ಹೆಚ್ಚುವರಿ ತೆರಿಗೆ ವಿಧಿಸಿವೆ. ಜನರ ಸಂಚಾರ ಹೆಚ್ಚುತ್ತಿದೆ. ಇದರೊಂದಿಗೆ ಒಂದೇ ದಿನ 3,800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಹೆಚ್ಚಿಸಿದೆ.

ಏಷ್ಯಾದ ಬೃಹತ್‌ ಹಣ್ಣು, ತರಕಾರಿ ಮಾರುಕಟ್ಟೆಗಳಲ್ಲಿ ಒಂದಾಗಿರುವ ಚೆನ್ನೈನ ಕೊಯಂಬೇಡು ಮಾರುಕಟ್ಟೆಯಿಂದ ಸೋಂಕು ಹರಡಿರುವುದು ಪತ್ತೆಯಾಗಿದೆ. ಸುಮಾರು 250 ಎಕರೆ ಪ್ರದೇಶದಲ್ಲಿ ವಿಸ್ತರಿಸುವ ಮಾರುಕಟ್ಟೆ ಲಾಕ್‌ಡೌನ್‌ ಅವಧಿ ಪೂರ್ತಿ ತೆರೆಯಲಾಗಿತ್ತು. ಇಲ್ಲಿಂದ ಕನಿಷ್ಠ 1,000 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಮಾರುಕಟ್ಟೆಯಿಂದ ತಮಿಳುನಾಡು ಹಾಗೂ ಸುತ್ತಮುತ್ತಲಿನ ರಾಜ್ಯಗಳಿಗೆ ಹಣ್ಣು–ತರಕಾರಿ ರವಾನೆಯಾಗುತ್ತದೆ.

ಕೊಯಂಬೇಡು ಮಾರುಕಟ್ಟೆ ಸಂಪರ್ಕಕ್ಕೆ ಬಂದಿರುವ ಸುಮಾರು 7,000 ಜನರನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸುವ ಕಾರ್ಯ ನಡೆದಿದೆ. ಇದರಿಂದಾಗಿ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಚೆನ್ನೈನ ಕೊಯಂಬೇಡು ಮಾರುಕಟ್ಟೆಯ ಬಾಳೆ ಮಂಡಿ

ಬ್ರೆಜಿಲ್‌ನಲ್ಲಿ ಮೊದಲ ಲಾಕ್‌ಡೌನ್‌

ಬ್ರೆಜಿಲ್‌ನ ಮರಾನ್‌ಹಾವೊದಲ್ಲಿ ಮಂಗಳವಾರದಿಂದ ಲಾಕ್‌ಡೌನ್‌ ಘೋಷಿಸಲಾಗಿದೆ. ಕೊರೊನಾ ಸೋಂಕು ನಿಯಂತ್ರಿಸಲು ಲಾಕ್‌ಡೌನ್‌ ತಂತ್ರಕ್ಕೆ ಮೊರೆ ಹೋಗಿರುವ ಬ್ರೆಜಿಲ್‌ನ ಮೊದಲ ಪ್ರಮುಖ ನಗರವಾಗಿದೆ. ಸಾವೊ ಲೂಸ್‌ ಹಾಗೂ ಸಮೀಪದ ಮೂರು ನಗರಗಳಲ್ಲಿ ಸುಮಾರು 15 ಲಕ್ಷ ಜನರು ಮನೆಯೊಳಗೆ ಉಳಿದಿದ್ದಾರೆ. ಅತ್ಯಗತ್ಯ ಕಾರ್ಯಗಳಿಗಾಗಿ ಓಡಾಟವಿದೆ. ‌

ಪ್ರಮುಖ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿವೆ. ಶಾಲೆಗಳು ಮುಚ್ಚಿವೆ, ಸಾರ್ವಜನಿಕ ಸಾರಿಗೆ ರದ್ದುಪಡಿಸಲಾಗಿದೆ ಹಾಗೂ ಪಾರ್ಕ್‌ಗಳು ಮುಚ್ಚಿವೆ. ಈ ಹಿಂದೆ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸನಾರೊ, ಹಿರಿಯ ವ್ಯಕ್ತಿಗಳು ಹಾಗೂ ಸೋಂಕಿಗೆ ಬಹುಬೇಗ ಒಳಗಾಗುವವರು ಮಾತ್ರ ಮನೆಯಲ್ಲಿಯೇ ಉಳಿಯುವಂತೆ ಸೂಚಿಸಿದ್ದರು. ಬ್ರೆಜಿಲ್‌ನಲ್ಲಿ 1,15,953 ಸೋಂಕು ಪ್ರಕರಣಗಳು ದಾಖಲಾಗಿದ್ದು, 7,958 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ಬ್ರಿಟನ್‌ನಲ್ಲಿ ಕೋವಿಡ್‌–19ನಿಂದ ಸಾವಿಗೀಡಾದವರ ಸಂಖ್ಯೆ 29,000 ದಾಟಿದ್ದು,ಕೊರೊನಾ ಸೋಂಕಿನಿಂದ ಮೃತಪಟ್ಟವರ ಲೆಕ್ಕದಲ್ಲಿ ಜಗತ್ತನಲ್ಲೇ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಈವರೆಗೂ ಕೊರೊನಾ ಸೋಂಕಿನಿಂದ 72,000 ಜನ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT