ಸೋಮವಾರ, ಅಕ್ಟೋಬರ್ 21, 2019
21 °C

VIDEO| ರಫೇಲ್‌ನಲ್ಲಿ ಹಾರಾಟ ನಡೆಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

Published:
Updated:
prajavani

ಮೆರಿಗ್ನ್ಯಾಕ್‌ (ಫ್ರಾನ್ಸ್): ಭಾರತಕ್ಕೆ ಹಸ್ತಾಂತರಿಸಬೇಕಿರುವ 36 ರಫೇಲ್‌ ಯುದ್ಧವಿಮಾನಗಳ ಪೈಕಿ ಮೊದಲನೆಯ ವಿಮಾನವನ್ನು ಫ್ರಾನ್ಸ್‌ ಮಂಗಳವಾರ ಭಾರತಕ್ಕೆ ಹಸ್ತಾಂತರ ಮಾಡಿದೆ. ಇದೇ ವೇಳೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ರಫೇಲ್‌ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. 

ಫ್ರಾನ್ಸ್‌ನ ಬೊರಾಡೆಕ್ಸ್‌ ಸಮೀಪದ ಮೆರಿಗ್ನ್ಯಾಕ್‌ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧವಿಮಾನವನ್ನು ಭಾರತದ ಪರವಾಗಿ ಸ್ವೀಕರಿಸಿದರು. ನಂತರ, ಅದಕ್ಕೆ ಆಯುಧ ಪೂಜೆ ನೆರವೇರಿಸಿದರು. 

ಇದಾದ ಕೆಲವೇ ಕ್ಷಣಗಳಲ್ಲಿ ಸೇನಾ ಸಮವಸ್ತ್ರ, ಶಿರಸ್ತ್ರಾಣ ಧರಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ರಫೇಲ್‌ನಲ್ಲಿ ಹಾರಾಟ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ರಫೇಲ್‌ನಲ್ಲಿನ ಹಾರಾಟ ಅದ್ಭುತ ಅನುಭವ. ಅತ್ಯಂತ ಆರಾಮದಾಯಕವೆನಿಸುವ ಹಾರಾಟ. ಅತಿವೇಗವಾಗಿ ಹಾರುವ ವಿಮಾನವೊಂದರಲ್ಲಿ ನಾನೂ ಮುಂದೊಂದು ದಿನ ಹಾರಾಟ ನಡೆಸುತ್ತೇನೆ ಎಂದು ನೆನೆಸಿರಲಿಲ್ಲ,’ ಎಂದು ಅವರು ಹೇಳಿಕೊಂಡರು. 

ರಾಜ್‌ನಾಥ್‌ ಅವರಿದ್ದ ರಫೇಲ್‌ ಯುದ್ಧ ವಿಮಾನವನ್ನು ಯುದ್ಧ ವಿಮಾನ ತಯಾರಕ ಸಂಸ್ಥೆ ಡಸಾಲ್ಟ್‌ ಏವಿಯೇಷನ್‌ನ ಮುಖ್ಯ ಪೈಲಟ್‌ ಫಿಲಿಪ್ ಡುಚಾಟೊ ಚಲಾಯಿಸಿದರು. 

‘2021ರ ವೇಳೆಗೆ 18 ವಿಮಾನಗಳು ಭಾರತಕ್ಕೆ ಲಭ್ಯವಾಗಲಿವೆ. 2022ರ ಏಪ್ರಿಲ್‌–ಮೇ ಹೊತ್ತಿಗೆ ಉಳಿದ ರಫೇಲ್‌ ವಿಮಾನಗಳು ಹಸ್ತಾಂತರಗೊಳ್ಳಲಿವೆ. ಇದು ನಮ್ಮ ರಕ್ಷಣೆಗಾಗಿಯೇ ಹೊರತು, ಯಾರಾದ್ದೋ ವಿರುದ್ಧ ಆಕ್ರಮಣಕ್ಕಲ್ಲ. ಇದು ರಕ್ಷಕ ವಿಮಾನ,’ ಎಂದೂ ರಾಜನಾಥ್‌ ಸಿಂಗ್‌ ತಿಳಿಸಿದರು. 

Post Comments (+)