ಭಾನುವಾರ, ಮಾರ್ಚ್ 7, 2021
27 °C

ಕೋವಿಡ್‌ನ ತೀವ್ರತೆ ಮರೆಮಾಚಿ ಔಷಧ ಸಾಮಗ್ರಿ ಕಲೆಹಾಕುವಲ್ಲಿ ತೊಡಗಿತ್ತೇ ಚೀನಾ? 

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಅಗತ್ಯವಿದ್ದ ವೈದ್ಯಕೀಯ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಲೆಹಾಕುವ ಉದ್ದೇಶದಿಂದ ಚೀನಾ ವೈರಸ್‌ನ ತೀವ್ರತೆ ಮತ್ತು ಅದು ಸಾಂಕ್ರಾಮಿಕಗೊಳ್ಳುತ್ತಿರುವ ರೀತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿತ್ತು ಎಂಬ ಗುಪ್ತಚರ ಮಾಹಿತಿಯು ಅಮೆರಿಕಕ್ಕೆ ಸಿಕ್ಕಿತ್ತು ಎನ್ನಲಾಗಿದೆ.  

ಇದನ್ನೂ ಓದಿ: ಕೊರೊನಾ ವೈರಸ್ ಬಂದಿದ್ದು ವುಹಾನ್‌ ಲ್ಯಾಬ್‌ನಿಂದ ಎನ್ನಲು ಸಾಕ್ಷ್ಯವಿದೆ: ಅಮೆರಿಕ

ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಚೀನಾದ ನಾಯಕರು ಜನವರಿ ಆರಂಭದಲ್ಲೇ "ಉದ್ದೇಶಪೂರ್ವಕವಾಗಿ ಮುಚ್ಚಿಟ್ಟರು‘ ಎಂದು ಮೇ 1 ರಂದು ಅಮೆರಿಕದ ಗುಪ್ತಚರ ಇಲಾಖೆಯು ನಾಲ್ಕು ಪುಟಗಳ ವರದಿಯನ್ನು ಸರ್ಕಾರಕ್ಕೆ ನೀಡಿದೆ ಎನ್ನಲಾಗಿದ್ದು, ಈ ವರದಿಯನ್ನು ಉಲ್ಲೇಖಿಸಿ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆ ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ. ‌‌

‘ಅಮೆರಿಕ ಗುಪ್ತಚರ ಇಲಾಖೆಯ ಈ ವರ್ಗೀಕರಿಸದ ಈ ವರದಿಯ ಮೇಲೆ ‘ಅಧಿಕೃತ ಬಳಕೆಗೆ ಮಾತ್ರ’ ಎಂದು ಬರೆಯಲಾಗಿದೆ. 
‘ಜನವರಿ ಆರಂಭದಲ್ಲಿ ಚೀನಾ ಔಷಧಗಳ ಆಮದನ್ನು ಹೆಚ್ಚಿಸಿ, ರಫ್ತನ್ನು ಕಡಿಮೆ ಮಾಡಿತ್ತು, ಆದರೆ, ರಫ್ತು ನಿರ್ಬಂಧಗಳನ್ನು ನಿರಾಕರಿಸಿ, ವ್ಯಾಪಾರ ದತ್ತಾಂಶಗಳನ್ನು ಮುಚ್ಚಿಡುವ ಮೂಲಕ ತನ್ನ ಈ ನಡೆಯನ್ನು ಗೌಪ್ಯವಾಗಿರಿಸಿಕೊಳ್ಳಲು ಚೀನಾ ಪ್ರಯತ್ನಿಸಿತ್ತು,’ ಎಂದು ಗುಪ್ತಚರ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.  

ಕೊರೊನಾ ವೈರಸ್‌ನ ಸಾಂಕ್ರಾಮಿಕಗೊಳ್ಳುವ ಗುಣಲಕ್ಷಣಗಳನ್ನು ಚೀನಾ ಜನವರಿ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೂ ತಿಳಿಸಿರಲಿಲ್ಲ. ಈ ಮೂಲಕ ಜಗತ್ತಿನ ಇತರ ದೇಶಗಳಿಂದ ಔಷಧಿಗಳನ್ನು ಆಮದು ಮಾಡಿಕೊಳ್ಳುವುದು, ಮಾಸ್ಕ್‌, ಗೌನ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವ ಪ್ರಯತ್ನ ನಡೆಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. 

ಜನವರಿಯಲ್ಲಿ ಚೀನಾದ ಆಮದು, ರಫ್ತು ಪ್ರಮಾಣವೂ ಸಹಜವಾಗಿರಲಿಲ್ಲ. ಆಮದು–ರಫ್ತುವಿನಲ್ಲಿ ಅದರ ವರ್ತನೆ ಬದಲಾಗಿತ್ತು ಎಂದು ವರದಿ ಹೇಳಿದೆ.  

ಚೀನಾವು ಡಿಸೆಂಬರ್ 31 ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಕೊರೊನಾ ವೈರಸ್‌ನ ಬಗ್ಗೆ ಮಾಹಿತಿ ನೀಡಿತ್ತು. ಜನವರಿ 3 ರಂದು ಅಮೆರಿಕದ ರೋಗ ನಿಯಂತ್ರಣಾ ವಿಭಾಗವನ್ನು ಸಂಪರ್ಕಿಸಿತ್ತು. ಜನವರಿ 8 ರಂದು ಕಾಯಿಲೆಯನ್ನು ನಾವೆಲ್‌ ಕೊರೊನಾ ವೈರಸ್‌ ಎಂದು ಬಹಿರಂಗಗೊಳಿಸಿತ್ತು ಎಂಬುದು ಇಲ್ಲಿ ಗಮನಾರ್ಹ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು