ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಆತಂಕಕ್ಕೆ ‘ನಮಸ್ತೆ’ ಮುನ್ನೆಚ್ಚರಿಕೆ: ಇಸ್ರೇಲ್ ಪ್ರಧಾನಿಯ ಸಲಹೆ

Last Updated 5 ಮಾರ್ಚ್ 2020, 4:31 IST
ಅಕ್ಷರ ಗಾತ್ರ

ನವದೆಹಲಿ: ಮಾರಣಾಂತಿಕ ಕೋವಿಡ್ 19 (ಕೊರೊನಾವೈರಸ್) ಸೋಂಕು ಹರಡುವುದನ್ನುತಡೆಯಲು ಭಾರತೀಯ ಶಿಷ್ಟಾಚಾರವಾದ ಕೈಮುಗಿದು ಸ್ವಾಗತ ಕೋರುವುದುಅತ್ಯುತ್ತಮ ಕ್ರಮ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಭಾರತೀಯರು ಪರಸ್ಪರರನ್ನು ಎದುರುಗೊಂಡಾಗಹಸ್ತಲಾಘವದ (ಶೇಕ್ ಹ್ಯಾಂಡ್)ಬದಲು ನಮಸ್ತೆ ಎಂದು ಕೈಮುಗಿಯುತ್ತಾರೆ. ಕೋವಿಡ್ ಸೋಂಕು ಹರಡುವ ಭೀತಿಗೆ ಇದು ಅತ್ಯುತ್ತಮ ಮುನ್ನೆಚ್ಚರಿಕೆ ಎಂದು ನೆತನ್ಯಾಹು ವ್ಯಾಖ್ಯಾನಿಸಿದ್ದಾರೆ.

‘ನನ್ನಂತೆ ನೀವೂ ಸಹ ಶೇಕ್ ಹ್ಯಾಂಡ್ ಬದಲು ನಮಸ್ತೆ ಎನ್ನುತ್ತಾ ಕೈಮುಗಿಯಬಹುದು. ಅದು ಬೇಡ ಎಂದಾದರೆ ಸಲಾಂ ಎಂದೋ ಅಥವಾ ಬೇರೆ ಯಾವುದಾದರೂ ಪದ ಬಳಸಿ ಪರಸ್ಪರರನ್ನು ಗೌರವಿಸಿ. ಆದರೆ ಶೇಕ್‌ ಹ್ಯಾಂಡ್ ಮಾತ್ರ ಬೇಡವೇ ಬೇಡ’ ಎಂಬುದು ನೆತನ್ಯಾಹು ಆಗ್ರಹ.

ಕೆಮ್ಮಿದಾಗ ಅಥವಾ ಸೀನಿದಾಗ ಹರಡುವ ಎಂಜಲಿನ ಕಣಗಳಿಂದ ಕೊರೊನಾವೈರಸ್ ಸೋಂಕು ಹರಡುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿಸೋಂಕಿತರ ಸಂಪರ್ಕದಿಂದ ದೂರ ಇರುವುದು, ಸೋಂಕು ನಿವಾರಕಗಳನ್ನು ಬಳಸಿ ಪದೇಪದೆ ಕೈತೊಳೆಯುವುದು ಅಗತ್ಯ.

ಕೊರೊನಾ ಸೋಂಕು ನಿವಾರಣೆಗಾಗಿ ತೆಗೆದುಕೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೆತನ್ಯಾಹು, ‘ಇಸ್ರೇಲ್‌ನಲ್ಲಿ ಸೋಂಕು ಹರಡುವುದನ್ನು ತಡೆಯಲು ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಐಸೊಲೇಶನ್ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ವಿಮಾನ ಹಾರಾಟ ನಿಯಮಗಳಲ್ಲಿಯೂ ಅಗತ್ಯ ಮಾರ್ಪಾಡು ತಂದಿದ್ದೇವೆ’ ಎಂದರು.

ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ನೆತನ್ಯಾಹು ಅವರಿಗೆ ಇರುವ ಒಲವು ಇಸ್ರೇಲ್‌ನಲ್ಲಿ ಜನಜನಿತ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ನೆತನ್ಯಾಹು ಉತ್ತಮ ಗೆಳೆತನ ಹೊಂದಿದ್ದಾರೆ. ಜನವರಿ 2018ರಂದು ನೆತನ್ಯಾಹು ದೆಹಲಿಗೆ ಭೇಟಿ ನೀಡಿದ್ದರು, 2017ರಲ್ಲಿ ನರೇಂದ್ರ ಮೋದಿ ಟೆಲ್ ಅವೀವ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭ ವಿಮಾನ ನಿಲ್ದಾಣದಲ್ಲಿಯೇ ಇಬ್ಬರೂ ನಾಯಕರು ಪರಸ್ಪರರನ್ನು ಸ್ವಾಗತಿಸಿದ್ದರು.

ಇಸ್ರೇಲ್‌ನಲ್ಲಿ ಈವರೆಗೆ 15 ಕೊರೊನಾ ವೈರಸ್ ಸೋಂಕು ಪ್ರಕರಣಗಳನ್ನು ವರದಿಯಾಗಿವೆ.. 7000 ಮಂದಿಯನ್ನು ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರಿಸಿ, ಗಮನಿಸಲಾಗಿದೆ. ವಿದೇಶಗಳಿಗೆ ತೆರಳದಿರುವಂತೆ ಇಸ್ರೇಲಿಗರಿಗೆ ಸೂಚನೆ ನೀಡಲಾಗಿದೆ. 5000ಕ್ಕಿಂತ ಹೆಚ್ಚು ಜನರು ಸೇರುವ ಸಭೆಗಳನ್ನು ನಿರ್ಬಂಧಿಸಲಾಗಿದೆ.

ವಿಶ್ವದಾದ್ಯಂತ ಈವರೆಗೆ ಕೊರೊನಾವೈರಸ್‌ನಿಂದಾಗಿ 3000 ಮಂದಿ ಮೃತಪಟ್ಟಿದ್ದಾರೆ. 90 ಸಾವಿರ ಮಂದಿಗೆ ಸೋಂಕು ತಗುಲಿದೆ. ಬಾರತದ ವಿವಿಧೆಡೆ 28 ಪ್ರಕರಣಗಳು ಪತ್ತೆಯಾಗಿವೆ. ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಸೋಂಕು ಇದೀಗ ವಿಶ್ವದ 60 ದೇಶಗಳಿಗೆ ಹರಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT