ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ 'ಭಯೋತ್ಪಾದನೆಯ ಡಿಎನ್‌ಎ': ಯುನೆಸ್ಕೊದಲ್ಲಿ ಭಾರತದ ವಾಗ್ದಾಳಿ

ಪ್ಯಾರಿಸ್‌
Last Updated 15 ನವೆಂಬರ್ 2019, 11:10 IST
ಅಕ್ಷರ ಗಾತ್ರ

ಪ್ಯಾರಿಸ್‌: ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಅಪಪ್ರಚಾರದಲ್ಲಿ ತೊಡಗಿರುವ ಪಾಕಿಸ್ತಾನಕ್ಕೆ ಗುರುವಾರ ಯುನೆಸ್ಕೊದಲ್ಲಿ ಭಾರತ ತಕ್ಕ ಉತ್ತರ ನೀಡಿದೆ. ಹಣದ ಕೊರತೆ ಎದುರಿಸುತ್ತಿರುವ ರಾಷ್ಟ್ರವು ಸ್ವತಃ 'ಭಯೋತ್ಪಾದನೆಯ ಡಿಎನ್‌ಎ' ಆಗಿದೆ ಎಂದಿದೆ.

'ಪಾಕಿಸ್ತಾನದ ಮಾನಸಿಕತೆಯ ಪರಿಣಾಮವೇ ಆರ್ಥಿಕ ಕುಸಿತ, ಮೂಲಭೂತವಾದಿ ಸಮಾಜ ಹಾಗೂ ಆಳವಾಗಿ ಬೇರೂರಿರುವ ಭಯೋತ್ಪಾದನೆಯ ಮೂಲ(ಡಿಎನ್‌ಎ)ವಾಗಿದೆ' ಎಂದು ಅನನ್ಯಾ ಅಗರ್ವಾಲ್‌ ಹೇಳಿದ್ದಾರೆ. ಯುನೆಸ್ಕೊ ಸಭೆಯಲ್ಲಿ ಭಾರತದ ಪ್ರತಿನಿಧಿಗಳ ನೇತೃತ್ವವನ್ನು ಅನನ್ಯಾ ವಹಿಸಿದ್ದಾರೆ.

'ಭಾರತದ ವಿರುದ್ಧ ವಿಷಕಾರಲು ಯುನೆಸ್ಕೊ ವೇದಿಕೆಯನ್ನು ದುರುಪಯೋಗ ಪಡಿಸಿಕೊಂಡ ಹಾಗೂ ರಾಜಕೀಯಗೊಳಿಸಿದ ಪಾಕಿಸ್ತಾನದ ಕ್ರಮವನ್ನು ಖಂಡಿಸುತ್ತೇವೆ' ಎಂದು ಭಾರತದ ಪ್ರತಿರೋಧವನ್ನು ದಾಖಲಿಸಿದ್ದಾರೆ.

2018ರಲ್ಲಿ ದುರ್ಬಲ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ 14ನೇ ಸ್ಥಾನದಲ್ಲಿತ್ತು. ತೀವ್ರಗಾಮಿ ಸಿದ್ಧಾಂತಗಳು, ಮೂಲವಾದಿ ಧೋರಣೆಗಳೊಂದಿಗೆ ಭಯೋತ್ಪಾದನೆಯ ಕರಾಳ ನೆಲೆಯನ್ನು ಪಾಕಿಸ್ತಾನ ಹೊಂದಿದೆ ಎಂದಿದ್ದಾರೆ.

ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಸ್ತಾಪಿಸಿದ ಅಂಶಗಳನ್ನು ಅನನ್ಯಾ ಉಲ್ಲೇಖಿಸಿದರು. 'ಅಣ್ವಸ್ತ್ರ ಬಳಸಿ ಸಮರ ಮತ್ತು ಇತರೆ ರಾಷ್ಟ್ರಗಳ ವಿರುದ್ಧ ಶಸ್ತ್ರಾಸ್ತ್ರ ಬಳಕೆಗೆ ಕರೆ ನೀಡಲು ವಿಶ್ವಸಂಸ್ಥೆ ವೇದಿಕೆಯನ್ನು ಬಳಸಿದಂತಹ ರಾಷ್ಟ್ರ ಪಾಕಿಸ್ತಾನ. ಭಯೋತ್ಪಾದನೆಯನ್ನು ಹರಡುತ್ತಿರುವ ರಾಷ್ಟ್ರದ ನಾಯಕ ಭಾರತದ ವಿರುದ್ಧ ಅಣ್ವಸ್ತ್ರ ಬಳಸುವ ಬೆದರಿಕೆಯೊಡ್ಡಿದರು' ಎಂದು ಅನನ್ಯಾ ನೆನಪಿಸಿದ್ದಾರೆ.

'ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಅವರು ಭಯೋತ್ಪಾದಕರಾದ ಒಸಾಮಾ ಬಿನ್‌ ಲಾಡೆನ್‌ ಮತ್ತು ಹಕ್ಕಾನಿ ನೆಟ್‌ವರ್ಕ್‌ನ್ನು ಪಾಕಿಸ್ತಾನದ ಹೀರೊಗಳೆಂದು ಕರೆದಿದ್ದಾರೆ' ಎಂದು ಹೇಳಿದರೆ ಈ ಸಭೆಯು ನಂಬುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

1947ರಲ್ಲಿ ಪಾಕಿಸ್ತಾನದ ಜನಸಂಖ್ಯೆಯ ಪೈಕಿ ಶೇ 23ರಷ್ಟು ಇದ್ದ ಅಲ್ಪಸಂಖ್ಯಾತ ಸಮುದಾಯದ ಪ್ರಮಾಣ ಶೇ 3ಕ್ಕೆ ಇಳಿಕೆಯಾಗಿದೆ. ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಮರ್ಯಾದೆಗೇಡು ಹತ್ಯೆಗಳು, ಆಸಿಡ್‌ ದಾಳಿ, ಒತ್ತಾಯದ ಮತಾಂತರಗಳು, ಒತ್ತಾಯಪೂರ್ವಕ ಮದುವೆ ಮತ್ತು ಬಾಲ್ಯ ವಿವಾಹ ಸೇರಿದಂತೆ ಹಲವು ದಟ್ಟ ಸಮಸ್ಯೆಗಳನ್ನು ಪಾಕಿಸ್ತಾನ ಹೊದ್ದಿದೆ. ತನ್ನ ರಾಷ್ಟ್ರದ ಕರುಣಾಜನಕ ಸ್ಥಿತಿಯನ್ನು ಮರೆಮಾಚಲು ಭಾರತದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದೆ ಎಂದು ತೀಕ್ಷ್ಣ ಪ್ರತಿರೋಧ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT