ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯೂಸ್ಟನ್‌ ‘ಹೌಡಿ, ಮೋದಿ‘ ಕಾರ್ಯಕ್ರಮಕ್ಕೆ ಡೊನಾಲ್ಡ್‌ ಟ್ರಂಪ್‌: ಶ್ವೇತ ಭವನ

50 ಸಾವಿರ ಭಾರತೀಯ–ಅಮೆರಿಕನ್ನರು ಭಾಗಿ
Last Updated 16 ಸೆಪ್ಟೆಂಬರ್ 2019, 5:09 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಭಾರತ–ಅಮೆರಿಕ ಬಾಂಧವ್ಯ ವೃದ್ಧಿಯ ಸಂಕೇತವಾಗಿ ಹಾಗೂ ಉಭಯ ನಾಯಕರ ಸ್ನೇಹದ ಗುರುತಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹ್ಯೂಸ್ಟನ್‌ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಗವಹಿಸುವುದಾಗಿ ಶ್ವೇತ ಭವನ ಭಾನುವಾರ ಪ್ರಕಟಿಸಿದೆ.

ಮುಂದಿನ ಭಾನುವಾರ(ಸೆ.22) ಹ್ಯೂಸ್ಟನ್‌ನಲ್ಲಿ ಭಾರತೀಯ–ಅಮೆರಿಕನ್ನರನ್ನುಉದ್ದೇಶಿಸಿ ‘ಹೌಡಿ, ಮೋದಿ‘ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಮೋದಿ ಜತೆಗೆ ಟ್ರಂಪ್‌ ಸಹ ಭಾಗವಹಿಸುತ್ತಿದ್ದು, ಅವರೂ ಸಹ ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ. ಉಭಯ ನಾಯಕರ ಪ್ರತ್ಯೇಕ ಭೇಟಿ ಅಥವಾ ಚರ್ಚೆಗೆ ಯಾವುದೇ ಸಮಯ ನಿಗದಿಯಾಗಿಲ್ಲ. ಆದರೆ, ವಿಶ್ವಸಂಸ್ಥೆ ಶೃಂಗಸಭೆ ಚರ್ಚೆಯ ಬಳಿಕ ನ್ಯೂಯಾರ್ಕ್‌ ನಗರದಲ್ಲಿ ಇಬ್ಬರೂ ನಾಯಕರು ಭೇಟಿಯಾಗುವ ಸಾಧ್ಯತೆಯಿದೆ.

ಕಾಶ್ಮೀರ ವಿಚಾರ ಮತ್ತು ಅಫ್ಗಾನಿಸ್ತಾನ ಶಾಂತಿ ಮಾತುಕತೆಗಳಲ್ಲಿ ಅಮೆರಿಕ ಮಧ್ಯಸ್ಥಿಕೆ ವಿಚಾರವನ್ನು ಪಾಕಿಸ್ತಾನ ಮುನ್ನೆಲೆಗೆ ತರುತ್ತಿರುವ ಸಮಯದಲ್ಲಿ ಮೋದಿ–ಟ್ರಂಪ್‌ ಭೇಟಿ ಗಮನ ಸೆಳೆದಿದೆ. ಟ್ರಂಪ್ ಕಾಶ್ಮೀರದ ವಿಚಾರವಾಗಿ ಮಧ್ಯಸ್ಥಿಕೆ ವಹಿಸುವ ಕುರಿತು ಮೂರು ಭಾರಿ ಒಪ್ಪಿಗೆ ಪ್ರಕಟಿಸಿದ್ದರು.

ಉಭಯ ರಾಷ್ಟ್ರಗಳ ಜನರ ನಡುವಿನ ಬಾಂಧವ್ಯ ಹಾಗೂ ಸಹಭಾಗಿತ್ವ ಯೋಜನೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಇದೊಂದು ಉತ್ತಮ ಅವಕಾಶ ಎಂದು ಶ್ವೇತ ಭವನ ಪ್ರಕಟಣೆಯಲ್ಲಿ ತಿಳಿಸಿದೆ.‘ಹೌಡಿ, ಮೋದಿ‘ ಕಾರ್ಯಕ್ರಮದ ದಿನವೇ ಟ್ರಂಪ್‌ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಭೇಟಿ ಸಹ ನಿಗದಿಯಾಗಿದೆ.

ಏನಿದು ‘ಹೌಡಿ ಮೋದಿ‘

‘ಹೌಡಿ’ ಎನ್ನುವುದು ‘ಹೌ ಡು ಯು ಡು’ (ನೀವು ಹೇಗಿದ್ದೀರಿ?) ಎನ್ನುವುದರ ಸಂಕ್ಷಿಪ್ತ ರೂಪ. ನೈರುತ್ಯ ಅಮೆರಿಕದಲ್ಲಿ ಸ್ನೇಹಿತರನ್ನು ಭೇಟಿಯಾದಾಗ ಸಾಮಾನ್ಯವಾಗಿ ಬಳಕೆಯಾಗುವ ಪದವಿದು.

ಹ್ಯೂಸ್ಟನ್‌ನ ಎನ್‌ಆರ್‌ಜಿ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ‘ಹೌಡಿ ಮೋದಿ’ ಸಭೆಗೆ ಸುಮಾರು 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಹ್ಯೂಸ್ಟನ್‌ನಲ್ಲಿ ಅಮೆರಿಕ ಮತ್ತು ಭಾರತೀಯ ಮೂಲದ ಸುಮಾರು 5 ಲಕ್ಷ ಜನರಿದ್ದಾರೆ. ಕ್ರೀಡಾಂಗಣದ ಒಟ್ಟು ಆಸನಗಳ ಸಾಮರ್ಥ್ಯ 70 ಸಾವಿರಕ್ಕೂ ಹೆಚ್ಚು.

2014ರಲ್ಲಿ ಮೋದಿ ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಭಾಷಣ ಮಾಡಿದ್ದರು. ನಂತರ 2016ರಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ ಭಾಷಣ ಮಾಡಿದ್ದರು. ಎರಡೂ ಕಡೆ 20 ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT