ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ತಂದ ಸಂಕಷ್ಟ | ಕ್ಷಾಮ ಭೀತಿ: ವಿಶ್ವಸಂಸ್ಥೆ ಎಚ್ಚರಿಕೆ

Last Updated 22 ಏಪ್ರಿಲ್ 2020, 20:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕೋವಿಡ್‌–19ನಿಂದ ಜಗತ್ತಿನಲ್ಲಿ ಹಲವು ಬಾರಿ ಕ್ಷಾಮ ಸಂಭವಿಸಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

ಎಲ್ಲ ರಾಷ್ಟ್ರಗಳು ಈಗಲೇ ಎಚ್ಚೆತ್ತುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ‘ಹಸಿವಿನ ಸಾಂಕ್ರಾಮಿಕ ಸಮಸ್ಯೆ’ ತಲೆದೋರಬಹುದು ಎಂದು ತಿಳಿಸಿದೆ.

ಮಂಗಳವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘ವರ್ಚುವಲ್‌’ ಅಧಿವೇಶನದಲ್ಲಿ ಈ ಬಗ್ಗೆ ವಿವರ ನೀಡಿದ ವಿಶ್ವ ಆಹಾರ ಯೋಜನೆಗಳ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬಿಯಾಸ್ಲಿ, ‘ಇದುವರೆಗೆ ಕ್ಷಾಮಗಳು ಎದುರಾಗಿಲ್ಲ. ಕ್ಷಾಮ ಎದುರಾಗದಂತೆ ಈಗಿನಿಂದಲೇ ನಾವು ಸಿದ್ಧತೆಗಳನ್ನು ಕೈಗೊಳ್ಳಬೇಕಾಗಿದೆ. ವ್ಯಾಪಾರ ವಹಿವಾಟಿಗೆ ತೊಡಕುಗಳಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ’ ಎಂದರು.

‘ಸಂಘರ್ಷದಿಂದ ವಿವಿಧ ರೀತಿಯ ಬಿಕ್ಕಟ್ಟುಗಳಿಗೆ ಸಿಲುಕಿರುವ ರಾಷ್ಟ್ರಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಹಸಿವಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷಾಮದಿಂದ ಮತ್ತಷ್ಟು ಅತ್ಯಂತ ಭೀಕರ ಪರಿಸ್ಥಿತಿಗೆ ತಲುಪಲಿದ್ದಾರೆ. ಜಗತ್ತಿನಾದ್ಯಂತ 82.1 ಕೋಟಿ ಜನ ಪ್ರತಿ ರಾತ್ರಿ ಹಸಿವಿನಿಂದಲೇ ಮಲಗುತ್ತಿದ್ದಾರೆ. ಜತೆಗೆ, ಪ್ರಸ್ತುತ 13.5ಕೋಟಿ ಮಂದಿಗೂ ಸಮರ್ಪಕ ಆಹಾರ ದೊರೆಯುತ್ತಿಲ್ಲ’ ಎಂದು ವಿವರಿಸಿದ್ದಾರೆ.

‘ಕೊರೊನಾ ವೈರಸ್‌ನಿಂದಾಗಿ 2020ರ ಅಂತ್ಯಕ್ಕೆ ಹೆಚ್ಚುವರಿಯಾಗಿ 13 ಕೋಟಿ ಮಂದಿ ಹಸಿವಿನಿಂದ ಬಳಲಬಹುದು ಎಂದು ವಿಶ್ವ ಆಹಾರ ಯೋಜನೆ ಸಂಸ್ಥೆ ವಿಶ್ಲೇಷಿಸಿದೆ’ ಎಂದು ತಿಳಿಸಿದರು.

‘ಎರಡನೇ ವಿಶ್ವ ಯುದ್ಧದ ಬಳಿಕ ಕೊರೊನಾ ವೈರಸ್ ಅತ್ಯಂತ ದೊಡ್ಡ ಬಿಕ್ಕಟ್ಟನ್ನು ಜಗತ್ತಿನಾದ್ಯಂತ ಸೃಷ್ಟಿಸಿದೆ. ಹೀಗಾಗಿ, ಅತಿ ಕಡಿಮೆ ಅವಧಿಯಲ್ಲಿ ತ್ವರಿತ ಕ್ರಮಗಳನ್ನು ಕೈಗೊಂಡು ಪರಿಹಾರಗಳನ್ನು ರೂಪಿಸುವುದು ಅಗತ್ಯವಿದೆ. ಇಲ್ಲದಿದ್ದರೆ ಮತ್ತೊಂದು ವಿಪತ್ತು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT