ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳೇ ಉತ್ತಮ

ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಸಾಧನೆ ಪ್ರದರ್ಶಿಸಿದ ಖಾಸಗಿ ಶಾಲೆಗಳು
Last Updated 19 ಮೇ 2018, 10:10 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ತಾಲ್ಲೂಕಿನ ಸರ್ಕಾರಿ ಶಾಲೆಯ ಮಕ್ಕಳೇ ಖಾಸಗಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ಖಾಸಗಿ ಅನುದಾನಿತ ಶಾಲೆ ಮತ್ತು ಸರ್ಕಾರಿ ವಸತಿ ಶಾಲೆಗಳು ತೀರಾ ಕಡಿಮೆ ಫಲಿತಾಂಶವನ್ನು ದಾಖಲಿಸಿವೆ. ಇದರಿಂದ ತಾಲ್ಲೂಕಿನ ಫಲಿತಾಂಶ ಕುಸಿಯುವಂತಾಗಿದೆ.

ತಾಲ್ಲೂಕಿನಲ್ಲಿ 14 ಖಾಸಗಿ ಅನುದಾನಿತ ಶಾಲೆಗಳಿದ್ದು, ಸುಮಾರು 564 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 305 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಖಾಸಗಿ ಅನುದಾನಿತ ಶಾಲೆಗಳ ಒಟ್ಟು ಫಲಿತಾಂಶ ಶೇ 54 ಆಗಿದೆ. ಕೆಲ ಶಾಲೆಗಳಲ್ಲಿ ಶೇ 35ರಷ್ಟು ಫಲಿತಾಂಶವೂ ಬಂದಿದೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಕರ ಕೊರತೆ. ಬಹುತೇಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಿಲ್ಲ, ಸಹ ಶಿಕ್ಷಕರೇ ಹೆಚ್ಚುವರಿಯಾಗಿ ಮುಖ್ಯ ಶಿಕ್ಷಕರ ಕಾರ್ಯನಿರ್ವಹಿಸುತ್ತಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ವಸತಿ ಶಾಲೆಗಳಿಗೆ ಹೋಲಿಕೆ ಮಾಡಿದರೆ ಬೇರೆ ತಾಲ್ಲೂಕಿನ ವಸತಿ ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ. ಆದರೆ, ತಾಲ್ಲೂಕಿನಲ್ಲಿ 5 ವಸತಿ ಶಾಲೆಗಳಿದ್ದು ಯಾವ ವಸತಿ ಶಾಲೆಯಲ್ಲೂ ಶೇ 100ರಷ್ಟು ಫಲಿತಾಂಶ ಬಂದಿಲ್ಲ. ಇಲ್ಲಿಗೆ ಮಕ್ಕಳು ವಿವಿಧ ಶಾಲೆಗಳಿಂದ ಪ್ರವೇಶ ಪರೀಕ್ಷೆಗಳನ್ನು ಬರೆದು ಆಯ್ಕೆಯಾಗಿರುತ್ತಾರೆ. ಅಂತಹ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡದೆ ಇಲ್ಲಿನ ಸಿಬ್ಬಂದಿ ಕಾಲ ಕಳೆದಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.

ಮೇಲುಕಾಮನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿಶಾಲೆ ಜಿಲ್ಲೆಗೆ ಅತಿ ಕಡಿಮೆ ಶೇ 38ರಷ್ಟು ಫಲಿತಾಂಶ ಪಡೆದಿದೆ.

ಇಲ್ಲಿ ಕೇವಲ 21 ಮಕ್ಕಳು ಪರೀಕ್ಷೆಗೆ ಹಾಜರಾಗಿ 8 ಮಕ್ಕಳು ಮಾತ್ರ ತೆರ್ಗಡೆಯಾಗಿದ್ದಾರೆ. ಬೇಗೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಶೇ 65, ಯಡವನಹಳ್ಳಿ ಮೋರಾರ್ಜಿ ವಸತಿ ಶಾಲೆ ಶೇ 82, ವೀರನಪುರ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಶೇ 86 ಮತ್ತು ತೆರಕಣಾಂಬಿಯಲ್ಲಿರುವ ಮೋರಾರ್ಜಿ ವಸತಿ ಶಾಲೆ ಶೇ 95ರಷ್ಟು ಫಲಿತಂಶವನ್ನು ನೀಡಿದೆ. ಅತಿ ಕಡಿಮೆ ಫಲಿತಾಂಶ ಬಂದಿರುವ ಮೇಲುಕಾಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯಶಿಕ್ಷಕಿಯನ್ನು ಪ್ರಶ್ನಿಸಿದರೆ, ‘ಏಕೆ ಇಷ್ಟು ಕಡಿಮೆ ಬಂದಿದೆ ಎಂದು ಗೊತ್ತಾಗುತ್ತಿಲ್ಲ’ ಎಂದು ಪ್ರತಿಕ್ರಿಯಿಸುತ್ತಾರೆ.

ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮತ್ತು ದಿನದ 24 ಗಂಟೆಗಳ ಕಾಲ ಮಕ್ಕಳ ಜೊತೆಯಲ್ಲಿರುವ ಶಿಕ್ಷಕರುಗಳೇ ಇಷ್ಟು ಕಡಿಮೆ ಪ್ರಮಾಣದಲ್ಲಿ ಫಲಿತಾಂಶವನ್ನು ನೀಡಿದರೆ ಹೇಗೆ ತಾಲ್ಲೂಕಿನ ಫಲಿತಾಂಶ ಹೆಚ್ಚಾಗುತ್ತದೆ ಎಂಬುದು ಪ್ರಶ್ನೆಯಾಗಿದೆ. ಕೆಲ ವಸತಿ ಶಾಲೆಗಳಲ್ಲಿ ಪ್ರಾಂಶುಪಾಲರು ಮತ್ತು ವಿಷಯ ಶಿಕ್ಷಕರು ವಸತಿ ಶಾಲೆಗಳಲ್ಲಿ ಸೌಲಭ್ಯಗಳಿದ್ದರೂ ಉಳಿಯುತ್ತಿಲ್ಲ. ಅವರು ಮನೆಗಳಿಗೆ ತೆರಳುತ್ತಾರೆ, ಊಟಕ್ಕೂ ಮೊದಲು ಅಥವಾ ನಂತರ ಹೆಚ್ಚುವರಿ ತರಗತಿಗಳನ್ನು ಮಾಡುತ್ತಿಲ್ಲ ಎಂದು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಲತಿ ಸೋಮಶೇಖರ್ ಆರೋಪಿಸುತ್ತಾರೆ.

ಎಂ.ಮಲ್ಲೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT