ಶುಕ್ರವಾರ, ಡಿಸೆಂಬರ್ 13, 2019
26 °C
ಸುಳ್ಳು ಮಾಹಿತಿ ನೀಡಿದರೆ ನಿಷೇಧ: ನೀತಿಯಲ್ಲಿ ಹಲವು ಬದಲಾವಣೆ

ರಾಜಕೀಯ ಜಾಹೀರಾತುಗಳ ಮೇಲೆ ನಿಗಾ: ಗೂಗಲ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸ್ಯಾನ್‌ ಫ್ರಾನ್ಸಿಸ್ಕೊ : ರಾಜಕೀಯ ಜಾಹೀರಾತುಗಳ ಬಗ್ಗೆ ಗೂಗಲ್‌ ಮತ್ತಷ್ಟು ಕಟ್ಟೆಚ್ಚರವಹಿಸಲು ಮುಂದಾಗಿದೆ. ಇದಕ್ಕಾಗಿ ಜಾಹೀರಾತು ನೀತಿಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತರಲಿದೆ.

ತಪ್ಪು ಮಾಹಿತಿಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸುವ ಉದ್ದೇಶದಿಂದ ಗೂಗಲ್‌ ಈ ಕ್ರಮಕೈಗೊಂಡಿದೆ.

ಜಾಹೀರಾತುಗಳಲ್ಲಿ ಸುಳ್ಳು ಮಾಹಿತಿ ನೀಡುವ ಜಾಹೀರಾತುದಾರರನ್ನು ನಿಷೇಧಿಸುವ ನಿಯಮಾವಳಿ ಈಗಾಗಲೇ ಜಾರಿಯಲ್ಲಿದೆ. ಇದು ರಾಜಕೀಯ ವಿಷಯಕ್ಕೂ ಅನ್ವಯಿಸುತ್ತದೆ. ಆದರೆ, ಈಗ ಈ ನೀತಿಯನ್ನು ಇನ್ನಷ್ಟು ಸ್ಪಷ್ಟಪಡಿಸಲಾಗುತ್ತಿದೆ ಎಂದು ತಿಳಿಸಿದೆ.

ತಿರುಚಿದ ವಿಷಯಗಳು ಅಥವಾ ಚಿತ್ರಗಳನ್ನು ಬಳಸಿದರೆ ಯಾವ ರೀತಿ ನಿರ್ಬಂಧಿಸಲಾಗುತ್ತಿದೆ ಎನ್ನುವುದನ್ನು ಉದಾಹರಣೆಗಳ ಸಮೇತ ಉಲ್ಲೇಖಿಸಲಾಗುತ್ತಿದೆ ಎಂದು ಗೂಗಲ್‌ ವಿವರಿಸಿದೆ.

ಜಾಹೀರಾತು ನೀತಿಯ ಬದಲಾವಣೆಗಳು ಬ್ರಿಟನ್‌ನಲ್ಲಿ ಇನ್ನೊಂದು ವಾರದಲ್ಲಿ ಜಾರಿಯಾಗಲಿವೆ. ಈ ವರ್ಷಾಂತ್ಯದಲ್ಲಿ ಐರೋಪ್ಯ ಒಕ್ಕೂಟ ರಾಷ್ಟ್ರಗಳಲ್ಲಿ ಜಾರಿಯಾಗಲಿದೆ. ಬಳಿಕ, ಉಳಿದ ರಾಷ್ಟ್ರಗಳಲ್ಲಿ ಜಾರಿಗೆ ಬರಲಿದೆ‘ ಎಂದು ತಿಳಿಸಿದೆ.  ‘ಒಂದು ಕುರ್ಚಿಯ ಬೆಲೆ ಅಥವಾ ಮತದಾರರಿಗೆ ನೀಡುವ ಸಂದೇಶ ಇರಬಹುದು. ಯಾವುದೇ ಸಂದೇಶಗಳಲ್ಲಿ ಸುಳ್ಳು ಮಾಹಿತಿ ನೀಡುವುದು ನಮ್ಮ ನೀತಿಗೆ ವಿರುದ್ಧವಾಗಿದೆ’ ಎಂದು ಗೂಗಲ್‌ ಜಾಹೀರಾತು ವಿಭಾಗದ ಉಪಾಧ್ಯಕ್ಷ ಸ್ಕಾಟ್‌ ಸ್ಪೆನ್ಸರ್‌ ತಿಳಿಸಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಚರ್ಚೆಗಳು ಮಹತ್ವದ ಪಾತ್ರವಹಿಸುತ್ತವೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

‘ಮಾನವ ಹಕ್ಕುಗಳಿಗೆ ಧಕ್ಕೆ’

ಗೂಗಲ್‌, ಫೇಸ್‌ಬುಕ್‌ನ ದತ್ತಾಂಶ ಸಂಗ್ರಹ ವ್ಯವಸ್ಥೆಯಿಂದ ಮಾನವ ಹಕ್ಕುಗಳಿಗೂ ಧಕ್ಕೆಯಾಗುತ್ತಿದೆ ಎಂದು ಅಮ್ನೆಸ್ಟಿ ಅಂತರರಾಷ್ಟ್ರೀಯ ಸಂಸ್ಥೆ ವರದಿ ತಿಳಿಸಿದೆ.

‘ಗೂಗಲ್‌ ಮತ್ತು ಫೇಸ್‌ಬುಕ್‌ ನಮ್ಮ ಆಧುನಿಕ ಬದುಕಿನಲ್ಲಿ ಅಪಾರ ಪ್ರಭಾವ ಬೀರುತ್ತಿವೆ. ಡಿಜಿಟಲ್‌ ಜಗತ್ತಿನಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿವೆ. ಕೋಟ್ಯಂತರ ಜನರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿವೆ. ಉಚಿತ ಆನ್‌ಲೈನ್‌ ಸೇವೆಗಳನ್ನು ಮೊದಲು ಒದಗಿಸಲಾಗುತ್ತಿದೆ. ಬಳಿಕ, ಹಣ ಮಾಡಲು ಜಾಹೀರಾತುಗಳನ್ನು ಪಡೆಯಲಾಗುತ್ತಿದೆ’ ಎಂದು ಅಮ್ನೆಸ್ಟಿ ಅಂತರರಾಷ್ಟ್ರೀಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕುಮಿ ನೈಡೂ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು