ಇದು ಒಂದು ಬಟ್ಟಲಿನ ಕತೆ: ಹರಾಜಿಗಿಟ್ಟಾಗಲೇ ಗೊತ್ತಾಗಿದ್ದು ಅದರ ಬೆಲೆ!

ಭಾನುವಾರ, ಜೂಲೈ 21, 2019
22 °C

ಇದು ಒಂದು ಬಟ್ಟಲಿನ ಕತೆ: ಹರಾಜಿಗಿಟ್ಟಾಗಲೇ ಗೊತ್ತಾಗಿದ್ದು ಅದರ ಬೆಲೆ!

Published:
Updated:

ಜುರಿಚ್‌ (ಸ್ವಿಡ್ಜರ್‌ಲೆಂಡ್‌): ರಾಜ್‌ಕುಮಾರ್‌ ಅವರ ಅಭಿನಯದ ‘ಒಂದು ಮುತ್ತಿನ ಕತೆ’ ಸಿನಿಮಾವನ್ನು ಬಹುತೇಕರು ನೋಡಿದ್ದಾರೆ. ಸಿನಿಮಾದಲ್ಲಿ ಐತುಗೆ(ರಾಜ್‌ಕುಮಾರ್‌) ಸಿಗುವ ದೊಡ್ಡದೊಂದು ಮುತ್ತಿನ ಹರಳು ಅಮೂಲ್ಯವೆಂದು ಗೊತ್ತಾಗುವುದು ಅದರ ಸುತ್ತ ನಡೆಯುವ ಘಟನಾವಳಿಗಳ ನಂತರ. ಸ್ವಿಡ್ಜರ್‌ಲೆಂಡ್‌ನಲ್ಲೂ ಅಂಥದ್ದೇ ಒಂದು ಪ್ರಸಂಗ ನಡೆದಿದೆ. ಆದರೆ, ಅದು ಒಂದು ಮುತ್ತಿನ ಕತೆಯಲ್ಲ... ಬದಲಿಗೆ ಒಂದು ಕಂಚಿನ ಬಟ್ಟಲಿನ ಕತೆ.   

ಸರಿಸುಮಾರು ಮೂರು ತಲೆಮಾರುಗಳ ಕಾಲ ಕಾಲ ಬಟ್ಟಲನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದ ಆ ಕುಟುಂಬ, ಅದರಲ್ಲಿ ಅಗತ್ಯವಿಲ್ಲದ ವಸ್ತುಗಳನ್ನು, ಚೆಂಡನ್ನು ತುಂಬಿಡುತ್ತಿತ್ತು. ಅದೃಷ್ಟವೋ ಎಂಬಂತೆ ಆ ಕುಟುಂಬಸ್ಥರು ತಮಗೆ ಗೊತ್ತಿಲ್ಲದೇ ಅದನ್ನು ಭದ್ರವಾಗಿ ಕಾಪಾಡಿಕೊಂಡು ಬಂದಿದ್ದರು. ಆದರೆ, ಅದು ಸ್ವಿಸ್‌ನ ಖ್ಯಾತ ಹರಾಜು ಸಂಸ್ಥೆ ‘ಕೊಲ್ಲರ್ ಆಕ್ಷನ್ಸ್‌’ ಸಂಸ್ಥೆ ಕಣ್ಣಿಗೆ ಬಿದ್ದಾಗ ಅದರ ಹಿನ್ನೆಲೆ, ಬೆಲೆ ಎಲ್ಲವೂ ಬಹಿರಂಗವಾಗಿದೆ. ಆ ಬಟ್ಟಲು ಹರಾಜಾದಾಗ ಆ ಕುಟುಂಬಕ್ಕೆ ಸಿಕ್ಕಿದ್ದು ಬರೋಬ್ಬರಿ ₹34 ಕೋಟಿ ಎಂದು ಸಿಎನ್‌ಎನ್‌ ವರದಿ ಮಾಡಿದೆ.  

ಚೀನಾ ಮೂಲದ, 17ನೇ ಶತಮಾನದ್ದು ಎನ್ನಲಾದ ಕಂಚಿನ ಬಟ್ಟಲಿಗೆ ಫಿನಿಕ್ಸ್‌ ಪಕ್ಷಿಯ ರೂಪದ ಹಿಡಿಕೆಗಳಿದ್ದವು. ಅದರ ಮೇಲೆ ದೂಪದ ಹೊಗೆ ಮೇಲೇಳುತ್ತಿರುವಂತೆ ಚಿನ್ನದಲ್ಲಿ ರಚಿಸಲಾಗಿತ್ತು. 

‘ಬಟ್ಟಲನ್ನು ಮೊದಲ ಬಾರಿಗೆ ನೋಡಿದಾಗ ನಾವು ಆಶ್ಚರ್ಯಗೊಂಡಿದ್ದೆವು. ಅ ರೀತಿಯ ವಸ್ತುವನ್ನು ನಾವು ನೋಡಿದ್ದೇ ಇಲ್ಲ,’ ಎಂದಿದ್ದಾರೆ ‘ಕೊಲ್ಲರ್‌ ಆಕ್ಷನ್ಸ್‌ನ ಮಾಧ್ಯಮ ಸಮನ್ವಯಾಧಿಕಾರಿ ಮತ್ತು ಮಾರ್ಕೆಟಿಂಗ್‌ ವಿಭಾಗದ ಕಾರ್ಲ್‌ ಗ್ರೀನ್‌. 

ಚೀನಾಕ್ಕೆ ಪ್ರವಾಸಕ್ಕೆಂದು ತೆರಳಿದ್ದಾಗ ಸ್ವಿಸ್‌ನ ಆ ಕುಟುಂಬ ಬಟ್ಟಲನ್ನು ಖರೀದಿಸಿ ತಂದಿತ್ತು. ಅದು ಪುರಾತನದ್ದು ಎಂದು ಭಾವಿಸಿದ ಕುಟುಂಬ ಬರ್ಲಿನ್‌ನ ವಸ್ತು ಸಂಗ್ರಹಾಲಕ್ಕೆ ತೆರಳಿ, ಅದನ್ನು ಪ್ರದರ್ಶನಕ್ಕೆ ಇಡುವಂತೆ ಮನವಿ ಮಾಡಿತ್ತು. ಆದರೆ, ಅವರು ಅದನ್ನು ನಿರಾಕರಿಸಿದ್ದರು. ಬ್ರಿಟನ್‌ ಮೂಲದ ಹರಾಜು ಸಂಸ್ಥೆಯೂ ಅದನ್ನು ಹರಾಜು ಹಾಕಲು ಆಸಕ್ತಿ ತೋರಿರಲಿಲ್ಲ. ಹೀಗಾಗಿ ಬಟ್ಟಲಿಗೆ ಹೆಚ್ಚಿನ ಮೌಲ್ಯವಿಲ್ಲ ಎಂದು ತಿಳಿದುಕೊಂಡ ಕುಟುಂಬವು ಅದನ್ನು ಮನೆಯಲ್ಲೇ ಇಟ್ಟುಕೊಂಡಿದೆ. ಕಾಲ ಕ್ರಮೇಣ ಅದರಲ್ಲಿ ಬೇಡದ ವಸ್ತುಗಳನ್ನು ತುಂಬಿಡಲಾರಂಭಿಸಿತ್ತು,’ ಎಂದು ಕಾರ್ಲ್‌ ಗ್ರೀನ್‌ ಹೇಳಿದ್ದಾರೆ. 

ಈ ನಡುವೆ ಬಟ್ಟಲು ಕೊಲ್ಲರ್‌ ಆಕ್ಷನ್ಸ್‌ ಸಂಸ್ಥೆ ಕಣ್ಣಿಗೆ ಬಿದ್ದಿತ್ತು. ಸಂಸ್ಥೆ ಅದನ್ನು ಹಾಂಗ್‌ಕಾಂಗ್‌ನಲ್ಲಿ ಹರಾಜಿಗಿಟ್ಟಿತು. ಅಂತಿಮವಾಗಿ ಅದು 4.8 ಮಿಲಿಯನ್‌ ಸ್ವಿಸ್‌ ಫ್ರಾಂಕ್‌ಗಳಿಗೆ (₹34 ಕೋಟಿ) ಮಾರಾಟವಾಯಿತು.  

ಅದನ್ನು ಚೀನಾದ ವ್ಯಕ್ತಿಯೊಬ್ಬರು ಖರೀದಿ ಮಾಡಿದ್ದರು. 1700ರಲ್ಲಿ ಚೀನಾದ ಸಾಮ್ರಾಜ್ಞೆಯೊಬ್ಬರಿಗೆ ಈ ಬಟ್ಟಲನ್ನು ತಯಾರಿಸಿ ಕೊಡಲಾಗಿತ್ತು ಎಂದು ಅಭಿಪ್ರಾಯಪಡಲಾಗಿದೆ. 

ಇದೇ ರೀತಿಯ ಪ್ರಕರಣವೊಂದು ಕಳೆದ ವರ್ಷ ಮಿಚಿಗನ್‌ನಲ್ಲಿ ನಡೆದಿತ್ತು. ವ್ಯಕ್ತಿಯೊಬ್ಬರು ತಮ್ಮ ಮನೆಯ ಬಾಗಿಲ ಬಳಿಯ ಮೆಟ್ಟಿಲಾಗಿ ಬಳಸುತ್ತಿದ್ದ ಕಲ್ಲು ಕೋಟ್ಯಂತರ ರುಪಾಯಿಗಳಿಗೆ ಮಾರಾಟವಾಗಿತ್ತು. ಅದು ಅಂತರಿಕ್ಷದಿಂದ ಭೂಮಿಗೆ ಬಿದ್ದಿದ್ದ ಉಲ್ಕಾಶಿಲೆಯಾಗಿತ್ತು. 

ಬರಹ ಇಷ್ಟವಾಯಿತೆ?

 • 50

  Happy
 • 3

  Amused
 • 0

  Sad
 • 3

  Frustrated
 • 4

  Angry

Comments:

0 comments

Write the first review for this !