ಭ್ರಷ್ಟಾಚಾರ: ನವಾಜ್‌ ಷರೀಫ್‌ಗೆ 10 ವರ್ಷ ಜೈಲು ಶಿಕ್ಷೆ

7

ಭ್ರಷ್ಟಾಚಾರ: ನವಾಜ್‌ ಷರೀಫ್‌ಗೆ 10 ವರ್ಷ ಜೈಲು ಶಿಕ್ಷೆ

Published:
Updated:

ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣ ಸಂಬಂಧ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ಗೆ 10 ವರ್ಷ ಜೈಲು ಹಾಗೂ ಅವರ ಪುತ್ರಿ ಮರಿಯಮ್ ಷರೀಫ್ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ.

ನವಾಜ್‌ ಷರೀಫ್‌ ಎದುರಿಸುತ್ತಿರುವ ನಾಲ್ಕು ಭ್ರಷ್ಟಾಚಾರ ಪ್ರಕರಣಗಳ ಪೈಕಿ ಲಂಡನ್‌ನಲ್ಲಿನ ಅವಿನ್ಯುಫೀಲ್ಡ್‌ ಹೌಸ್‌ನಲ್ಲಿ ನಾಲ್ಕು ಐಷಾರಾಮಿ ಫ್ಲಾಟ್‌ಗಳ ಒಡೆತನಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್‌ ಅಪರಾಧಿ ಎಂದು ಹೇಳಿರುವ ನ್ಯಾಯಾಲಯ, ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಹತ್ತು ವರ್ಷ ಜೈಲು ವಿಧಿಸಿರುವ ಭ್ರಷ್ಟಾಚಾರ ತಡೆ ನ್ಯಾಯಾಲಯವು ದಂಡವನ್ನೂ ವಿಧಿಸಿದೆ.

ಜುಲೈ 25ರಂದು ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮೂರು ವಾರ ಮೊದಲು ಈ ತೀರ್ಪು ಹೊರಬಿದ್ದಿದೆ.

ತಮ್ಮ ಕೊಠಡಿಯಲ್ಲಿ ನಡೆದ ವಿಚಾರಣೆ ನಂತರ ನ್ಯಾಯಾಧೀಶ ಮೊಹಮ್ಮದ್‌ ಬಶೀರ್‌ ಈ ತೀರ್ಪು ನೀಡಿದ್ದಾರೆ. ಷರೀಪ್ ಪುತ್ರಿಗೆ ಶಿಕ್ಷೆ ವಿಧಿಸುವುದರ ಜತೆಗೆ, ಅಳಿಯ ಸಫ್ದರ್‌ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 

ನ್ಯಾಯಾಲಯದ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನ್ಯಾಯಾಲಯ ಇರುವ ಕೋರ್ಟ್‌ ಸಂಕೀರ್ಣದ ಆವರಣದೊಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್‌ ಷರೀಫ್‌ ಹೆಸರು ಪನಾಮಾ ಪೇಪರ್ಸ್‌ ಹಗರಣದಲ್ಲಿ ಕೇಳಿಬಂದಾಗ, ಸುಪ್ರೀಂ ಕೋರ್ಟ್‌ ಅವರನ್ನು ಪದಚ್ಯುತಗೊಳಿಸಿ ಆದೇಶಿಸಿತ್ತು. ಅಲ್ಲದೆ, ಅವರ ಮಕ್ಕಳ ವಿರುದ್ಧವೂ ಭ್ರಷ್ಟಾಚಾರದ ಪ್ರಕರಣ ದಾಖಲಿಸಲಾಗಿತ್ತು. 

ಪದಚ್ಯುತಗೊಂಡ ನಂತರ ಲಂಡನ್‌ಗೆ ತೆರಳಿದ್ದ ಷರೀಫ್‌ ಮತ್ತು ಅವರ ಮಗಳು ಈ ಪ್ರಕರಣದ ವಿಚಾರಣೆಗೆಂದು ಪಾಕಿಸ್ತಾನಕ್ಕೆ ಬಂದು ಹೋಗುತ್ತಿದ್ದರು. ಷರೀಫ್‌ ಪುತ್ರರಾದ ಹಸನ್‌ ಮತ್ತು ಹುಸೇನ್‌ ಕೂಡ ಈ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದಾರೆ. 
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !