ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಹುಟ್ಟಿದ ಊರಿನಲ್ಲಿ ಸೋಂಕು ಪರೀಕ್ಷೆ ಅಗ್ಗ, ಸರಳ, ಕ್ಷಿಪ್ರ!

Last Updated 14 ಏಪ್ರಿಲ್ 2020, 12:37 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಸೋಂಕನ್ನು ಕ್ಷಿಪ್ರವಾಗಿ ಪತ್ತೆ ಮಾಡುವಲ್ಲಿ ಅಮೆರಿಕ ಮತ್ತು ಬ್ರಿಟನ್‌ನಂಥ ದೇಶಗಳೇ ಕಷ್ಟಪಡುತ್ತಿವೆ. ಜಗತ್ತಿನ ಇತರ ದೇಶಗಳ ಮುಂದಿರುವ ಸವಾಲೂ ಇದೇ. ಆದರೆ ಸಾಂಕ್ರಾಮಿಕ ರೋಗದ ಹುಟ್ಟೂರು ಚೀನಾದ ವುಹಾನ್‌ನಲ್ಲಿ ಸೋಂಕು ಪತ್ತೆ ಪರೀಕ್ಷೆ ವೇಗವಾಗಿ, ಅಗ್ಗವಾಗಿ ಮತ್ತು ಸುಲಭವಾಗಿ ನಡೆಯುತ್ತಿವೆ.

ನಾನು (ಸುದ್ದಿ ಸಂಸ್ಥೆ ರಾಯ್ಟರ್‌ನ ವರದಿಗಾರ್ತಿ ಬ್ರೆಂಡಾ ಗೋಹ್) ನನ್ನ ಸಹೋದ್ಯೋಗಿ ಇತ್ತೀಚೆಗೆ ವುಹಾನ್‌ ನಗರಕ್ಕೆ ಹೋಗಿದ್ದೆವು. ವಿದೇಶಿಯರಾದ ಕಾರಣ ರೋಗ ಪತ್ತೆ ಮಾಡುವ ನ್ಯೂಕ್ಲಿಯಿಕ್ ಪರೀಕ್ಷೆಗೆ ನಾವು ಒಳಗಾಗಲೇಬೇಕಿದೆ ಎಂದು ನಮಗೆ ತಿಳಿಸಲಾಯಿತು.0

ಸರ್ಕಾರಿ ಅಧಿಕಾರಿಯೊಬ್ಬರು ನನ್ನನ್ನು ಪರೀಕ್ಷಾ ಸ್ಥಳಕ್ಕೆ ಕರೆದೊಯ್ದರು. ಬಂದ್‌ ಆಗಿದ್ದ ಹೋಟೆಲ್‌ನ ಪ್ರವೇಶದ್ವಾರದ ಹೊರಗೆ ಒಬ್ಬ ವೈದ್ಯಕೀಯ ಸಿಬ್ಬಂದಿ ರಕ್ಷಣಾ ಕವಚ ಧರಿಸಿ ಕುಳಿತಿದ್ದರು. ನನ್ನನ್ನು ಅವರ ಎದುರು ಕೂರಿಸಲಾಯಿತು. ಅವರು ನನ್ನ ವಿವರಗಳನ್ನು ಪಡೆದು, ಗಂಟಲು ದ್ರವವನ್ನು ಪರೀಕ್ಷೆಗಾಗಿ ಪಡೆದುಕೊಂಡರು.

‘ಒಂದು, ಒಂದೂವರೆ ದಿನದಲ್ಲಿ ನಿಮ್ಮ ಪರೀಕ್ಷೆ ವರದಿ ಸಿಗಲಿದೆ,’ ಎಂದು ಅಧಿಕಾರಿ ನನಗೆ ತಿಳಿಸಿದರು.

ರೋಗದ ಕೇಂದ್ರಬಿಂದುವಾಗಿರುವ ವುಹಾನ್‌, 76 ದಿನಗಳ ಲಾಕ್‌ಡೌನ್‌ ಅನುಭವಿಸಿ ಈಗಷ್ಟೇ ಪುಟಿದೇಳಲು ಪ್ರಯತ್ನಿಸುತ್ತಿದೆ. ಹೀಗಾಗಿ ಸೋಂಕು ಪತ್ತೆ ಪರೀಕ್ಷೆಗಳನ್ನು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ನಡೆಸಲಾಗುತ್ತಿದೆ.

‘ನ್ಯೂಕ್ಲಿಯಿಕ್ ಆಸಿಡ್ ಟೆಸ್ಟ್’ ಎಂಬ ಪದವು 1.1 ಕೋಟಿ ಜನರನ್ನು ಹೊಂದಿರುವ ವುಹಾನ್‌ ನಗರದಲ್ಲಿ ಈಗ ಜನನಿತವಾಗಿದೆ. ಅಲ್ಲಿ ಅನೇಕ ಕಂಪನಿಗಳು ಕೆಲಸಕ್ಕೆ ಮರಳುವ ತಮ್ಮ ಸಿಬ್ಬಂದಿಗೆ ನ್ಯೂಕ್ಲಿಯಿಕ್‌ ಪರೀಕ್ಷೆ ಫಲಿತಾಂಶವನ್ನು ಹಾಜರುಪಡಿಸುವಂತೆ ತಿಳಿಸುತ್ತಿವೆ. ಆದರೆ ಕಡ್ಡಾಯವೇನಲ್ಲ.

ವುಹಾನ್ನ ಒಂದು ಆಸ್ಪತ್ರೆಯಲ್ಲಂತೂ ರೋಗ ಪತ್ತೆ ಪರೀಕ್ಷೆ ಇನ್ನೂ ಸುಲಭ. ಜನ ಆಸ್ಪತ್ರೆಗೆ ಹೋಗಿ ಟೆಸ್ಟ್‌ ಟ್ಯೂಬ್‌ನಲ್ಲಿ ಒಂದು ಉಗುಳು ಉಗುಳಿ ಬಂದರಾಯಿತು. ನಂತರ ಪರೀಕ್ಷಾ ವರದಿ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಸಿಗುತ್ತದೆ. ಬೆಲೆ 260 ಯಾನ್‌ಗಳು ($37). ಫೆ .21 ರಿಂದ ಈವರೆಗೆ ವುಹಾನ್‌ನಲ್ಲಿ 930,315 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

‘ಪರೀಕ್ಷೆ ಒಳ್ಳೆಯದು’ಹೀಗೆಂದು ತುರ್ತು ಔಷಧ ವೈದ್ಯ ಮತ್ತು ವುಹಾನ್‌ನ ಝೋಂಗ್‌ನಾನ್‌ ಆಸ್ಪತ್ರೆಯ ಉಪಾಧ್ಯಕ್ಷ ಝಾವೋ ಯಾನ್ ಕಳೆದ ವಾರ ಸರ್ಕಾರಿ ಸಂಘಟಿತ ಪ್ರವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ವುಹಾನ್‌ನಲ್ಲಿ ನೀವು ಉದ್ದಿಮೆ ಹೊಂದಿದ್ದರೆ, ಅಲ್ಲಿ 500 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದಾದರೆ, ಮಾಲೀಕರು ಎಲ್ಲರ ಪರೀಕ್ಷೆ ಮಾಡಿಸುವುದು ಅಗತ್ಯ. ಹೀಗಾಗಿ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆ ಖಚಿತತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದರೂ, ಚೀನಾದಾದ್ಯಂತ, ಅಧಿಕಾರಿಗಳು ಆ ಪರೀಕ್ಷೆಯ ಪ್ರಕ್ರಿಯೆಯನ್ನು ಸರಳೀಕರಿಸುತ್ತಿದ್ದಾರೆ ಮತ್ತು ವೇಗ ನೀಡುತ್ತಿದ್ದಾರೆ. ನ್ಯೂಕ್ಲಿಯಿಕ್‌ ಆಸಿಡ್‌ ಪರೀಕ್ಷೆಯಲ್ಲಿ ಎರಡು ಬಾರಿ ನೆಗೆಟೀವ್‌ ಬಂದ ರೋಗಿಗಳನ್ನು ವುಹಾನ್‌ನ ಆಸ್ಪತ್ರೆಗಳಲ್ಲಿ ಡಿಸ್ಚಾರ್ಜ್‌ ಮಾಡಿ ಕಳುಹಿಸುತ್ತಿರುವ ದೃಶ್ಯಗಳೂ ಕಾಣುತ್ತಿವೆ.

ಇದೇ ವೇಳೆ ರಾಷ್ಟ್ರ ರಾಜಧಾನಿ ಬೀಜಿಂಗ್‌ ಸೇರಿದಂತೆ ಹಲವು ನಗರಗಳಿಗೆ ಹೊರಗಿನಿಂದ ಬರುವವರೂ ತಮ್ಮ ಪರೀಕ್ಷಾ ವರದಿಯನ್ನು ಹಾಜರುಪಡಿಸುವುದು ಕಡ್ಡಾಯವೂ ಕೂಡ.

ಇದೆಲ್ಲದರ ಮಧ್ಯೆ ನನ್ನ ಪರೀಕ್ಷಾ ವರದಿಯೂ ಬಂತು. ವರದಿ ನೆಗೇಟಿವ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT