ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಟೀಲರಿಗೆ ಸಿಂಹಸ್ವಪ್ನ...

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

–ಆರ್‌.ಜಿ. ಹಳ್ಳಿ ನಾಗರಾಜ

1967ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಧುರೀಣ ಎಸ್‌. ನಿಜಲಿಂಗಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಹೊಸದಾಗಿ ಹುಟ್ಟಿದ್ದ ಪ್ರಾದೇಶಿಕ ಪಕ್ಷ ‘ಜನತಾ ಪಕ್ಷ’ ಎರಡನೇ ಅಧಿಕ ಶಾಸಕರನ್ನು ಪಡೆದ ಪಕ್ಷವಾಗಿತ್ತು. ಹೀಗಾಗಿ ವಿರೋಧ ಪಕ್ಷದ ಸ್ಥಾನ ಸಹಜವಾಗಿ ಆ ‍ಪಕ್ಷದ ಬಾಗಿಲು ತಟ್ಟಿತು. ಜನತಾ ಪಕ್ಷದಿಂದ ಆಯ್ಕೆಯಾದವರಲ್ಲಿ ಅನೇಕ ಪ್ರಮುಖರು ರಾಜಕಾರಣ ಹಾಗೂ ಆಡಳಿತದಲ್ಲಿ ಅನುಭವ ಪಡೆದವರೇ ಆಗಿದ್ದರು. ಉತ್ತಮ ವಾಕ್ಪಟು, ನಿಷ್ಠುರ ರಾಜಕಾರಣಿ ಎಂದೇ ಹೆಸರಾಗಿದ್ದ ಎಚ್‌. ಸಿದ್ದವೀರಪ್ಪ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರು. ಇದರಿಂದಾಗಿ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಿತು. ಸರ್ಕಾರದ ಕಾರ್ಯವೈಖರಿಗೆ ವಿರೋಧ ಪಕ್ಷ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಜನತೆಯಲ್ಲಿ ಕುತೂಹಲ ಹುಟ್ಟಿಸಿತು.

ಆಡಳಿತಾರೂಢ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಅನೇಕ ಸಂಗತಿಗಳು ಘಟಿಸಿದವು. ನಿಜಲಿಂಗಪ್ಪನವರ ಹಾದಿ ತಪ್ಪಿದ ಆಡಳಿತಕ್ಕೆ ಕಡಿವಾಣ ಹಾಕುವ ಮಾರ್ಗಗಳನ್ನು ಸಿದ್ದವೀರಪ್ಪ ಹುಡುಕಿದ್ದರು. ಹಿಂದೆ ತಾವು ಹೊಂದಿದ್ದ ಅಧಿಕಾರಾವಧಿಯಿಂದಾಗಿ ವಿವಿಧ ಸಚಿವ ಹುದ್ದೆಯ ಅನುಭವ ಹೇಗೆ? ಏನು ಎಂಬ ಬಗ್ಗೆ ಮಾಹಿತಿ ಇತ್ತು. ಯಾವುದೇ ವಿಷಯದ ಪ್ರಸ್ತಾಪ ಬಂದರೂ ಅದಕ್ಕೆ ಅಧ್ಯಯನಪೂರ್ಣ ವಿಷಯ ಸಂಗ್ರಹ ಇದ್ದೇ ಇರುತ್ತಿತ್ತು. ಸರ್ಕಾರದ ಮುನ್ನಡೆಗೆ ಆರ್ಥಿಕ ವಿಚಾರಗಳು ಮುಖ್ಯವಾಗುತ್ತವೆ, ಇಲ್ಲಿ ಯಾವುದೂ ಗೌಣವಲ್ಲ, ಜನರ ತೆರಿಗೆ ಹಣ ಪೋಲಾಗದಂತೆ ಸರ್ಕಾರ ಎಚ್ಚರ ವಹಿಸಬೇಕು, ಜತೆಗೆ ಜನೋಪಯೋಗಿ ಯೋಜನೆ ರೂಪಿಸಬೇಕು– ಇಂಥವುಗಳಲ್ಲಿ ಆಡಳಿತಾರೂಢ ಪಕ್ಷ ಎಡವಿದ್ದನ್ನು ಎತ್ತಿ ತೋರಿದರು.

ಮುಖ್ಯಮಂತ್ರಿಯಾಗಿದ್ದ ಎಸ್‌. ನಿಜಲಿಂಗಪ್ಪನವರು ಕೆಲ ಕಾಲದ ನಂತರ ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ರಾಜ್ಯದ ಒಬ್ಬರು ರಾಷ್ಟ್ರೀಯ ಪಕ್ಷದ ದೊಡ್ಡ ಹುದ್ದೆಗೆ ಹೋಗಿದ್ದೇ ಅಪರೂಪದ ಸಂಗತಿ. ರಾಜ್ಯದಲ್ಲಿ ಖಾಲಿಯಾದ ಮುಖ್ಯಮಂತ್ರಿ ಸ್ಥಾನದ ಅದೃಷ್ಟ ನಿಜಲಿಂಗಪ್ಪನವರ ಶಿಷ್ಯ/ ಸ್ನೇಹಿತ ವೀರೇಂದ್ರ ಪಾಟೀಲರನ್ನು ಹುಡುಕಿ ಬಂತು.

ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದವೀರಪ್ಪನವರು ವೀರೇಂದ್ರ ಪಾಟೀಲರ ಆಡಳಿತಕ್ಕಂತೂ ಸಿಂಹಸ್ವಪ್ನವಾದವರು. ಹೆಜ್ಜೆ ಹೆಜ್ಜೆಗೂ ಪಾಟೀಲರ ಆಡಳಿತದ ತಪ್ಪನ್ನು ಎತ್ತಿ ಹಿಡಿದು ವಿಧಾನಸಭೆಯಲ್ಲಿ ಸಮರ್ಥವಾಗಿ ವಾಸ್ತವವನ್ನು ಬಿಚ್ಚಿಟ್ಟರು. ಪಾಟೀಲರು ಮುಖ್ಯಮಂತ್ರಿಯಾಗಿ ನೆಮ್ಮದಿಯಿಂದಂತೂ ಅಧಿಕಾರ ನಡೆಸಲಿಲ್ಲ. ವಿದ್ಯಾರ್ಥಿ ಮುಷ್ಕರ, ‘ಎಕ್ಸ್‌ಪೋ–70’ ಗಲಾಟೆಗಳು ರಾಜ್ಯದಾದ್ಯಂತ ಹಬ್ಬಿದವು. ಸರ್ಕಾರದ ವೈಫಲ್ಯದಿಂದಾಗಿ ಅವರು ಆಡಳಿತದಲ್ಲಿ ಬಿಗಿ ಕಳೆದುಕೊಂಡರು. ಸಿದ್ದವೀರಪ್ಪನವರು ಇದನ್ನು ಸರ್ಕಾರದ ವಿರುದ್ಧ ತಿರುಗಿಸಿದ್ದಷ್ಟೇ ಅಲ್ಲ, ತಮ್ಮ ಸ್ಥಾನಕ್ಕೆ ತಕ್ಕುದಾಗಿ ನಡೆದುಕೊಂಡರು. ಸರ್ಕಾರದ ವಿರುದ್ಧ ತೆಗೆದುಕೊಂಡ ಅವಿಶ್ವಾಸ ನಿರ್ಣಯದಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಸರ್ಕಾರ ಮುನ್ನಡೆಸಲು ಬೇಕಾದ ಬಹುಮತ ಸಾಬೀತಿನಲ್ಲಿ ಪಾಟೀಲರು ಸೋತರು. ಸರ್ಕಾರ ಪತನವಾಯಿತು. ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಪದವಿ ತ್ಯಜಿಸಿದರು.

ಒಂದು ಸರ್ಕಾರವನ್ನೇ ಉರುಳಿಸುವಷ್ಟು ಶಕ್ತಿಶಾಲಿಗಳಾಗಿ ಎಚ್‌. ಸಿದ್ದವೀರಪ್ಪನವರು ವಿರೋಧ ಪಕ್ಷದ ನಾಯಕರಾಗಿ ಮಿಂಚಿದರು. ಕಾಂಗ್ರೆಸ್‌ ಪಾಲಿಗೆ ಇವರು ಖಳರಾದರು. ಆದರೆ, ರಾಜ್ಯದ ಮುಂದಿನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ಆಸೆಗಳು, ಕನಸುಗಳು ಚಿಗುರಲು ದಾರಿಯಂತೂ ಸುಗಮವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT