ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್‌ನಲ್ಲಿ ಮತ್ತೆ ತಲ್ಲಣ: ಸರ್ಕಾರ ರಚನೆ ಸಾಧ್ಯವಾಗದ ಸ್ಥಿತಿ ನಿರ್ಮಾಣ

Last Updated 3 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬಾಗ್ದಾದ್‌: ಪ್ರತಿಭಟನೆಯಿಂದ ತತ್ತರಿಸಿರುವ ಇರಾಕ್‌, ಈಗ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದೆ. ನಿಯೋಜಿತ ಪ್ರಧಾನಿ ಮೊಹಮ್ಮದ್‌ ಅಲಾವಿ ಅವರು ಹುದ್ದೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಸರ್ಕಾರ ರಚಿಸುವ ತಮ್ಮ ಪ್ರಯತ್ನಕ್ಕೆ ಸಂಸದರು ಅಡ್ಡಿ ಮಾಡುತ್ತಿದ್ದಾರೆ ಎಂಬುದು ಹಿಂದೆ ಸರಿಯುವುದಕ್ಕೆ ಅವರು ನೀಡಿರುವ ಕಾರಣ.

ತೈಲ ಸಂಪನ್ನವಾದರೂ ಬಡತನದಿಂದ ಕಂಗೆಟ್ಟಿರುವ ಈ ದೇಶದಲ್ಲಿ ಸರ್ಕಾರದ ವಿರುದ್ಧ ಐದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. 2003ರಲ್ಲಿ ಸದ್ದಾಂ ಹುಸೇನ್‌ ಅವರ ಆಳ್ವಿಕೆಯನ್ನು ಅಮೆರಿಕ ನೇತೃತ್ವದಲ್ಲಿ ನಡೆದ ಯುದ್ಧವು ಕೊನೆಗೊಳಿಸಿತ್ತು. ಅದಾದ ಬಳಿಕ, ಈಗ ಅತ್ಯಂತ ತೀವ್ರವಾದ ರಾಜಕೀಯ ಬಿಕ್ಕಟ್ಟನ್ನು ಇರಾಕ್‌ ಎದುರಿಸುತ್ತಿದೆ.

ಇರಾಕ್‌ನ ಯುವ ಜನರು ಬೀದಿಗಿಳಿದಿದ್ದಾರೆ. ದೇಶದ ರಾಜಕೀಯ ವರ್ಗವನ್ನು ಪೂರ್ಣವಾಗಿ ಉಚ್ಚಾಟಿಸಬೇಕು ಎಂಬುದು ಯುವ ಜನರ ಬೇಡಿಕೆ. ರಾಜಕೀಯ ವರ್ಗವು ಅದಕ್ಷ, ಭ್ರಷ್ಟ ಮಾತ್ರವಲ್ಲದೆ, ನೆರೆಯ ಪ್ರಭಾವಿ ದೇಶ ಇರಾನ್‌ನ ಕೈಗೊಂಬೆ ಎಂದು ಇವರು ಆಪಾದಿಸುತ್ತಿದ್ದಾರೆ.

ಅಲಾವಿ ಅವರು ಹಿಂದೆ ಸರಿದಿರುವ ಕಾರಣ, ಮುಂದಿನ 15 ದಿನಗಳಲ್ಲಿ ಬೇರೊಬ್ಬ ಪ್ರಧಾನಿಯನ್ನು ಅಧ್ಯಕ್ಷ ಬರ್ಹಾಂ ಸಾಲೇಹ್‌ ಅವರು ನಿಯೋಜಿಸಬೇಕಿದೆ. ಗುಪ್ತಚರ ವಿಭಾಗದ ಮುಖ್ಯಸ್ಥ ಮುಸ್ತಫಾ ಅಲ್‌ ಕಾಜಿಮಿ ಅವರು ಈ ಹುದ್ದೆಗೆ ಬರಬಹುದು ಎಂದು ರಾಜಕೀಯ ವಲಯ ಹೇಳುತ್ತಿದೆ. ಆದರೆ, ಈ ನೇಮಕಕ್ಕೆ ತೀವ್ರವಾದ ವಿರೋಧ ಇದೆ. ಕತೀಬ್‌ ಹಿಜ್ಬುಲ್ಲಾ ಎಂಬ ತೀವ್ರವಾದಿ ಅರೆಸೇನಾ ಪಡೆಯು ಈ ನಿರ್ಧಾರದ ವಿರುದ್ಧ ಎಚ್ಚರಿಕೆ ನೀಡಿದೆ. ಈ ಪಡೆಗೆ ಇರಾನ್‌ನ ಬೆಂಬಲ ಇದೆ. ಕಾಜಿಮಿಯನ್ನು ನೇಮಿಸಿದರೆ ಅದು ಯುದ್ಧ ಘೋಷಣೆಗೆ ಸಮಾನ ಎಂದು ಕತೀಬ್‌ನ ವಕ್ತಾರರು ಸೋಮವಾರ ಹೇಳಿದ್ದಾರೆ.

ಇರಾನ್‌ನ ಜನರಲ್‌ ಖಾಸಿಂ ಸುಲೇಮಾನಿಯ ಹತ್ಯೆಗೆ ಅಮೆರಿಕಕ್ಕೆ ನೆರವಾಗಿರುವ ಆರೋಪ ಕಾಜಿಮಿಯ ಮೇಲೆ ಇದೆ. ಅಮೆರಿಕದ ಡ್ರೋನ್‌ ದಾಳಿಯಲ್ಲಿ ಖಾಸಿಂ ಮತ್ತು ಇನ್ನೊಬ್ಬರು ಎರಡು ತಿಂಗಳ ಹಿಂದೆ ಹತ್ಯೆಯಾಗಿದ್ದರು.

ಬಿಕ್ಕಟ್ಟಿನಿಂದ ಬಿಕ್ಕಟ್ಟಿನತ್ತ

ಇರಾನ್‌ನ ರಾಜಕೀಯ ಸಂಕಷ್ಟದ ಸ್ಥಿತಿ ಕಳೆದ ಡಿಸೆಂಬರ್‌ನಲ್ಲಿ ಆರಂಭವಾಗಿತ್ತು. ಪ್ರಧಾನಿ ಅದಿಲ್ ಅಬ್ದುಲ್‌ ಮಹದಿ ಅವರು ರಾಜೀನಾಮೆ ಕೊಟ್ಟ ಕಾರಣಕ್ಕೆ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ರೀತಿಯಲ್ಲಿ ರಾಜೀನಾಮೆ ನೀಡಲು ಇರಾಕ್‌ನ ಸಂವಿಧಾನದಲ್ಲಿ ಅವಕಾಶ ಇಲ್ಲ.

ನಿಯೋಜಿತ ಪ್ರಧಾನಿಯು ಹುದ್ದೆ ತೊರೆದಿರುವ ವಿದ್ಯಮಾನ ಕೂಡ ಈ ದೇಶಕ್ಕೆ ಹೊಸದು. ಈ ವರೆಗೆ ಯಾವ ನಿಯೋಜಿತ ಪ್ರಧಾನಿಯು ಸರ್ಕಾರ ರಚಿಸದೆ ಹಿಂದಕ್ಕೆ ಸರಿದದ್ದೇ ಇಲ್ಲ.

ಇರಾಕ್‌ನ ಸಂಸತ್ತು ಸ್ಪಷ್ಟವಾದ ಬಣಗಳಾಗಿ ಒಡೆದು ಹೋಗಿವೆ. ವಿಶ್ವಾಸಮತ ಪಡೆಯುವ ಅಲಾವಿ ಅವರ ಮೂರನೇ ಪ್ರಯತ್ನವೂ ವಿಫಲಗೊಂಡ ಬಳಿಕ ಅವರು ಅಂತಹ ಪ್ರಯತ್ನವನ್ನು ತೊರೆದಿದ್ದಾರೆ.

ಮಹದಿ ಅವರು ಮಾರ್ಚ್‌ 2ರಂದು ಉಸ್ತುವಾರಿ ಪ್ರಧಾನಿ ಹುದ್ದೆಯನ್ನೂ ತೊರೆಯಬೇಕಿತ್ತು. ಮಾರ್ಚ್‌ 2ರಂದು ಸರ್ಕಾರ ರಚನೆಗಿರುವ ಗಡುವು ಆಗಿತ್ತು. ಆದರೆ, ಹೊಸ ಸರ್ಕಾರ ಇಲ್ಲದ ಕಾರಣಕ್ಕೆ ಇನ್ನಷ್ಟು ಕಾಲ ಹುದ್ದೆಯಲ್ಲಿ ಮುಂದುವರಿಯುವುದಾಗಿ ಮಹದಿ ಹೇಳಿದ್ದಾರೆ.

ಸಂಪುಟ ರಚನೆಯ ಸವಾಲು

ಇರಾಕ್‌ನಲ್ಲಿ ಸಂಪುಟ ರಚನೆಯು ಶಾಂತಿಕಾಲದಲ್ಲಿಯೂ ಬಹುದೊಡ್ಡ ಸವಾಲು. ಯಾಕೆಂದರೆ, ಖುರ್ದ್‌, ಸುನ್ನಿ ಮತ್ತು ಶಿಯಾ ಸಮುದಾಯಗಳಿಗೆ ತಕ್ಕಷ್ಟು ಸ್ಥಾನಗಳನ್ನು ಸಂಪುಟದಲ್ಲಿ ನೀಡದೇ ಇದ್ದರೆ ಸರ್ಕಾರ ರಚನೆ ಸಾಧ್ಯವೇ ಇಲ್ಲ. ಈ ಬಾರಿ, ರಾಜಕೀಯ ವಿಭಜನೆ ಎಂದಿಗಿಂತಲೂ ಹೆಚ್ಚು ತೀವ್ರವಾಗಿದೆ. ಪ್ರತಿ ಸಮುದಾಯ ಕೂಡ ತನ್ನ ಪಾಲಿನ ಅಧಿಕಾರಕ್ಕೆ ಹಾತೊರೆಯುತ್ತಿದೆ.

ಈ ಬಾರಿ ಸಮಸ್ಯೆ ಇನ್ನಷ್ಟು ತೀವ್ರವಾಗಲು ಹಲವು ಕಾರಣಗಳಿವೆ. ಕೇಂದ್ರ ಬಜೆಟ್‌ ಮತ್ತು ಇರಾಕ್‌ನ ತೈಲ ವರಮಾನದಲ್ಲಿ ತಮ್ಮ ಪಾಲಿನ ಭರವಸೆ ಸಿಗುವ ತನಕ ಸರ್ಕಾರಕ್ಕೆ ಬೆಂಬಲ ನೀಡದಿರಲು ಖುರ್ದ್ ಸಮುದಾಯದ ಸಂಸದರು ನಿರ್ಧರಿಸಿದ್ದಾರೆ.

ಇರಾಕ್‌ನಲ್ಲಿರುವ ಅಮೆರಿಕದ 5,200 ಯೋಧರನ್ನು ತಕ್ಷಣವೇ ಹೊರಗೆ ಕಳುಹಿಸಬೇಕು ಎಂಬುದು ಶಿಯಾ ಸಂಸದರ ಒತ್ತಾಯ. ಆದರೆ, ಖುರ್ದ್‌ ಮತ್ತು ಸುನ್ನಿ ಸಂಸದರು ಇದನ್ನು ಒಪ್ಪುತ್ತಿಲ್ಲ. ಹೀಗಾಗಿ ಸರ್ಕಾರ ರಚನೆಯು ಮರೀಚಿಕೆಯೇ ಆಗಬಹುದು ಎನ್ನಲಾಗುತ್ತಿದೆ.

ಯುವ ಜನರ ಆಯ್ಕೆಯೇ ಬೇರೆ

ಪ್ರಧಾನಿ ಹುದ್ದೆಗೆ ಅಲಾ ಅಲ್‌ ರಿಕಬಿ ಅವರನ್ನು ನಿಯೋಜಿಸಬೇಕು ಎಂಬುದು ಪ್ರತಿಭಟನೆ ನಡೆಸುತ್ತಿರುವ ಯುವ ಜನರ ಆಗ್ರಹ. ಔಷಧಶಾಸ್ತ್ರಜ್ಞನಾಗಿರುವ ರಿಕಬಿ, ಹೋರಾಟಗಾರರ ನಾಯಕನಾಗಿ ಬೆಳೆದಿದ್ದಾರೆ.

ಅಲಾವಿಯ ನಿರ್ಗಮನ ತಮ್ಮ ವಿಜಯವೆಂದೇ ಪ್ರತಿಭಟನಕಾರರು ಹೇಳುತ್ತಿದ್ದಾರೆ. ‘ಮಹದಿ ಮತ್ತು ಅಲಾವಿಯನ್ನು ನಾವು ಈಗಾಗಲೇ ನಿರ್ಮೂಲನೆ ಮಾಡಿದ್ದೇವೆ’ ಎಂದು ಬಾಗ್ದಾದ್‌ನ ವಿದ್ಯಾರ್ಥಿನಿ ರುಖಿಯಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT