ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್ ಸ್ವಾಯತ್ತೆಗಾಗಿ ಸಂಘರ್ಷ

Last Updated 19 ಆಗಸ್ಟ್ 2019, 3:03 IST
ಅಕ್ಷರ ಗಾತ್ರ

ಪ್ರತಿಭಟನೆ ಆರಂಭವಾಗಿದ್ದು ಹೇಗೆ?
ಹಾಂಗ್‌ಕಾಂಗ್‌ ಸರ್ಕಾರ ಏಪ್ರಿಲ್‌ನಲ್ಲಿ ಮಂಡಿಸಿದ ಆರೋಪಿಗಳ ಹಸ್ತಾಂತರ ಮಸೂದೆಯನ್ನು ವಿರೋಧಿಸಿಪ್ರತಿಭಟನೆಗಳು ಆರಂಭವಾದವು. ಆರಂಭದಲ್ಲಿ ಮಸೂದೆಯನ್ನಷ್ಟೇ ವಿರೋಧಿಸಿದ್ದ ಜನರ ಬೇಡಿಕೆಗಳು ವಿಸ್ತರಿಸುತ್ತಾ ಹೋದವು. ಇದೀಗ ತೀವ್ರ ಸ್ವರೂಪದ ಪ್ರಜಾಪ್ರಭುತ್ವ ಸುಧಾರಣಾ ಕ್ರಾಂತಿಯಾಗಿ ಬದಲಾಗಿದೆ.

ಸತತ 10 ವಾರಗಳಿಂದ ಬೀದಿಗಿಳಿದಿರುವ ಪ್ರತಿಭಟನಕಾರರನ್ನು ಚೀನಾ ಸರ್ಕಾರ ಭಯೋತ್ಪಾದಕರಿಗೆ ಹೋಲಿಸಿದ್ದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿತು. ಗಡಿಭಾಗದಲ್ಲಿ ಚೀನಾ ಸೇನೆಯು ಸನ್ನದ್ಧ ಸ್ಥಿತಿಯಲ್ಲಿದೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿರುವ ಕಾರಣ ಯಾವುದೇ ಕ್ಷಣದಲ್ಲಿ ಹಾಂಗ್‌ಕಾಂಗ್‌ ವಿಚಾರದಲ್ಲಿಚೀನಾ ಮಧ್ಯಪ್ರವೇಶ ಮಾಡುವ ಸಾಧ್ಯತೆಯಿದೆ.

ಹಸ್ತಾಂತರ ಮಸೂದೆ ಬಗೆಗಿನ ಆಕ್ಷೇಪ?

* ಚೀನಾ ವಿರುದ್ಧ ಅಪರಾಧ ಎಸಗಿದ ಆರೋಪಿಯನ್ನು ಹಸ್ತಾಂತರ ಮಾಡಲು ಅವಕಾಶ

* ಚೀನಾಕ್ಕೆ ಹಸ್ತಾಂತರವಾದ ಆರೋಪಿಯು, ಅಲ್ಲಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಚಾರಣೆ ಎದುರಿಸಬೇಕು. ಆದರೆ, ಅಲ್ಲಿನ ನ್ಯಾಯಾಂಗ ವ್ಯವಸ್ಥೆ ನ್ಯಾಯಸಮ್ಮತವಲ್ಲ ಮತ್ತು ಹಿಂಸಾತ್ಮಕ ಎಂಬುದು ಹಾಂಗ್‌ಕಾಂಗ್‌ ಜನರ ಆರೋಪ

* ಮುಖ್ಯವಾಗಿ ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರನ್ನು ಇದು ಅಪಾಯಕ್ಕೆ ದೂಡುತ್ತದೆ

* ಹಾಂಗ್‌ಕಾಂಗ್ ಮೇಲೆ ಚೀನಾದ ಹಿಡಿತ ಮತ್ತಷ್ಟು ಹೆಚ್ಚುತ್ತದೆ

* ಈ ಮಸೂದೆಯು ಪ್ರಾದೇಶಿಕ ನ್ಯಾಯಾಂಗದ ಸ್ವಾತಂತ್ರ್ಯ ಕಸಿದುಕೊಳ್ಳುತ್ತದೆ

ಹಾಂಕ್‌ಕಾಂಗ್ ಜನರ ಆತಂಕವೇನು?
ಪ್ರತಿಭಟನೆಗೆ ಮಣಿದ ಹಾಂಗ್‌ಕಾಂಗ್ ನಾಯಕಿ ಕ್ಯಾರಿ ಲ್ಯಾಮ್, ಮಸೂದೆಯನ್ನು ಅಮಾನತಿನಲ್ಲಿಡುವುದಾಗಿ ಕಳೆದ ತಿಂಗಳು ಭರವಸೆ ನೀಡಿದ್ದರು. ಆದರೆ, ಮಸೂದೆ ಮತ್ತೊಂದು ರೂಪದಲ್ಲಿ ಜಾರಿಗೊಳ್ಳುವ ಅಪಾಯದ ಸಾಧ್ಯತೆ ಅರಿತಿರುವ ಪ್ರತಿಭಟನಕಾರರು, ಮಸೂದೆಯನ್ನು ಸಂಪೂರ್ಣ ಕೈಬಿಡುವಂತೆ ಪಟ್ಟು ಹಿಡಿದಿದ್ದಾರೆ. ಇದರ ಜೊತೆ ಐದು ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ.

ಪ್ರತಿಭಟನಕಾರರ 5 ಬೇಡಿಕೆಗಳು ಯಾವುವು?
* ಪ್ರಸ್ತಾವಿತ ಹಸ್ತಾಂತರ ಮಸೂದೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಬೇಕು

* ಜೂನ್ 12ರ ಪ್ರತಿಭಟನೆಯನ್ನು ‘ದಂಗೆ’ ಎಂಬುದಾಗಿ ಕರೆದಿದ್ದನ್ನು ವಾಪಸ್ ಪಡೆಯಬೇಕು

* ಬಂಧಿತ ಎಲ್ಲ ಪ್ರತಿಭಟನಕಾರರಿಗೆ ಕ್ಷಮಾದಾನ ನೀಡಬೇಕು

* ಪೊಲೀಸರ ಕ್ರೂರ ವರ್ತನೆ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು

* ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಯ್ಕೆ ಹಾಗೂ ಶಾಸನಸಭೆ ಚುನಾವಣೆಯಲ್ಲಿ ಸಾರ್ವತ್ರಿಕ ಮತದಾನದ ಹಕ್ಕು ನೀಡಬೇಕು

ಒಂದು ದೇಶ ಎರಡು ವ್ಯವಸ್ಥೆ
* ಚೀನಾದ ಭಾಗವಾಗಿರುವ ಹಾಂಗ್‌ಕಾಂಗ್‌ ಮೊದಲು ಬ್ರಿಟಿಷ್‌ ವಸಾಹತು ಆಗಿತ್ತು.

* ಇಲ್ಲಿ ಜಾರಿಯಲ್ಲಿರುವ ‘ಒಂದು ದೇಶ ಎರಡು ವ್ಯವಸ್ಥೆ’ ಒಪ್ಪಂದ ಹಾಂಗ್‌ಕಾಂಗ್‌ಗೆ ಸ್ವಾಯತ್ತೆಯ ಖಾತರಿ ನೀಡಿದೆ.

* ಸ್ವಂತ ನ್ಯಾಯಾಂಗ ವ್ಯವಸ್ಥೆ ಹಾಗೂ ಚೀನಾದಿಂದ ಪ್ರತ್ಯೇಕವಾದ ಕಾನೂನು ಪದ್ಧತಿಯಿದೆ.

* ವಾಕ್‌ ಸ್ವಾತಂತ್ರ್ಯ ಹಾಗೂ ಸಭೆ ಸೇರುವ ಸ್ವಾತಂತ್ರ್ಯ ಇಲ್ಲಿ ಇವೆ.

ಟಿಯಾನನ್‌ಮೆನ್ ಹತ್ಯಾಕಾಂಡ ಮರುಕಳಿಸಲಾರದು: ಚೀನಾ
30 ವರ್ಷಗಳ ಹಿಂದೆ ಚೀನಾದಟಿಯಾನನ್‌ಮೆನ್ ಚೌಕದಲ್ಲಿ ನಡೆದ ರಕ್ತಸಿಕ್ತ ಹತ್ಯಾಕಾಂಡ ಈಗ ಚರ್ಚೆಗೆ ಬಂದಿದೆ. ಚೀನಾ ಸರ್ಕಾರ ಅಂದು ಪ್ರತಿಭಟನೆಯನ್ನು ಹತ್ತಿಕ್ಕಲು ಹಿಂಸೆಯ ಮಾರ್ಗ ಹಿಡಿದಿತ್ತು. ‘ಹಾಂಗ್‌ಕಾಂಗ್ ಪ್ರತಿಭಟನೆಯನ್ನು ಹತ್ತಿಕ್ಕಲು ಚೀನಾ ಮುಂದಾದರೆ, ಅತ್ಯಾಧುನಿಕ ವಿಧಾನಗಳನ್ನು ಅನುಸರಿಸಲಿದೆ.ಟಿಯಾನನ್‌ಮೆನ್ ಹತ್ಯಾಕಾಂಡ ಮರುಕಳಿಸಲು ಬಿಡುವುದಿಲ್ಲ’ ಎಂದು ಚೀನಾದ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಸಂಪಾದಕೀಯ ಪ್ರತಿಪಾದಿಸಿದೆ.

ಹಾಂಗ್ಕಾಂಗ್: ಸ್ವಾಯತ್ತೆಯೋ, ಚೀನಾ ಹಿಡಿತವೋ?
ಹಾಂಗ್‌ಕಾಂಗ್‌ ಆಕ್ರೋಶತಕ್ಷಣಕ್ಕೆ ಹುಟ್ಟಿಕೊಂಡಿದ್ದಲ್ಲ. ಇದು ಸದ್ಯಕ್ಕೆ ಮುಗಿಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ದಶಕಗಳ ಆಕ್ರೋಶ ಈ ಚಳವಳಿಯ ಹಿಂದೆ ಇದೆ.

ಹಾಂಗ್‌ಕಾಂಗ್‌ಗೆ ವಿಶೇಷ ಸ್ಥಾನಮಾನವಿದೆ. ಚೀನಾದ ಯಾವುದೇ ನಗರಗಳಿಗೆ ಹೋಲಿಸಿದರೆ, ಇದು ಸಂಪೂರ್ಣವಾಗಿ ಭಿನ್ನವಾಗಿದೆ. ಇದು ಸುಮಾರು 150 ವರ್ಷ ಬ್ರಿಟಿಷ್ ವಸಾಹತು ಆಗಿತ್ತು. ಹಾಂಗ್‌ಕಾಂಗ್ ದ್ವೀಪವು 1842ರ ಯುದ್ಧದ ಬಳಿಕ ಬ್ರಿಟನ್ ಸರ್ಕಾರದ ವಶಕ್ಕೆ ಬಂದಿತು. ಹಾಂಗ್‌ಕಾಂಗ್‌ನ ಇನ್ನುಳಿದ ಭೂಭಾಗವನ್ನು ಚೀನಾ ದೇಶ 99 ವರ್ಷಗಳ ಕಾಲ ಬ್ರಿಟನ್‌ಗೆ ಲೀಸ್ ರೂಪದಲ್ಲಿ ನೀಡಿತ್ತು. 1950ರ ವೇಳೆಗೆ ಹಾಂಗ್‌ಕಾಂಗ್‌ ಪ್ರಸಿದ್ಧ ವ್ಯಾಪಾರ ಕೇಂದ್ರವಾಯಿತು.

1980ರಲ್ಲಿ 99 ವರ್ಷದ ಗಡುವು ಮುಗಿಯಿತು. ಹಾಂಗ್‌ಕಾಂಗ್ ತನಗೇ ಸೇರಬೇಕು ಎಂದು ಚೀನಾ ವಾದಿಸಿತು.1984ರಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದ ನಡೆಯಿತು.‘ಒಂದು ದೇಶ ಎರಡು ವ್ಯವಸ್ಥೆ’ ನಿಯಮದಡಿ 1997ರಲ್ಲಿ ಚೀನಾ ವಶಕ್ಕೆ ಹಾಂಗ್‌ಕಾಂಗ್ ಸೇರಿತು.

ಒಪ್ಪಂದದ ಪ್ರಕಾರ, ಹಾಂಗ್‌ಕಾಂಗ್ ಚೀನಾದ ಭಾಗವಾಗಿದ್ದರೂ ಸಹ, 50 ವರ್ಷಗಳ ಕಾಲ ಉನ್ನತ ಸ್ತರದ ಸ್ವಾಯತ್ತೆ ಅನುಭವಿಸಬಹುದು. ವಿದೇಶಾಂಗ ಹಾಗೂ ರಕ್ಷಣೆ ವಿಚಾರಗಳು ಇದರಲ್ಲಿ ಸೇರಿಲ್ಲ. ಪ್ರತ್ಯೇಕ ಕಾನೂನು ವ್ಯವಸ್ಥೆ, ಗಡಿಗಳು, ವಾಕ್‌ ಸ್ವಾತಂತ್ರ್ಯದ ಹಕ್ಕುಗಳನ್ನು ಖಾತರಿಪಡಿಸಲಾಯಿತು. ಚೀನಾದಲ್ಲಿ ನಿಷೇಧ ಹೇರಿರುವ ಟಿಯಾನ್‌ಮನ್ ಹತ್ಯಾಕಾಂಡದ ವಾರ್ಷಿಕೋತ್ಸವ ಇಲ್ಲಿ ನಡೆಯುತ್ತದೆ.

ಶಾಸನಸಭೆ ಹಾಗೂ ಸಂವಿಧಾನ
ಹಾಂಗ್‌ಕಾಂಗ್‌ನಲ್ಲಿ ಚೀನಾ ಮಧ್ಯಪ್ರವೇಶಕ್ಕೆ ನಿದರ್ಶನಗಳಿವೆ. ಪ್ರಜಾಪ್ರಭುತ್ವ ಪರ ಜನಪ್ರತಿನಿಧಿಗಳ ಅನರ್ಹತೆ ತೀರ್ಪು ಇಲ್ಲಿ ಉಲ್ಲೇಖಾರ್ಹ. ನಾಪತ್ತೆಯಾದ ಐವರು ಪುಸ್ತಕ ಮಾರಾಟಗಾರರು ಚೀನಾದ ವಶದಲ್ಲಿದ್ದಾರೆ. ಕಲಾವಿದರು ಹಾಗೂ ಬರಹಗಾರರಿಗೆ ನಿರ್ಬಂಧಗಳಿವೆ.

ಹಾಂಗ್‌ಕಾಂಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು 1,200 ಸದಸ್ಯರ ಚುನಾವಣಾ ಸಮಿತಿ ಆಯ್ಕೆ ಮಾಡುತ್ತದೆ. 70 ಸದಸ್ಯರ ಶಾಸನಸಭೆಯ ಎಲ್ಲ ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗುವುದಿಲ್ಲ. ಚೀನಾ ಬೆಂಬಲಿತ ಶಾಸಕರೇ ಇಲ್ಲಿ ಹೆಚ್ಚಾಗಿದ್ದಾರೆ.

ಹಾಂಗ್‌ಕಾಂಗ್‌ನ ಕಿರು ಸಂವಿಧಾನ ‘ಬೇಸಿಕ್ ಲಾ’ ಪ್ರಕಾರ, ನಾಯಕ ಹಾಗೂ ಶಾಸನಸಭೆಯ ಸದಸ್ಯರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಚುನಾಯಿತರಾಗಬೇಕು. ಆದರೆ ಇದರ ಸ್ವರೂಪ ಹೇಗೆ ಎಂಬ ಬಗ್ಗೆಯೇ ಭಿನ್ನಾಭಿಪ್ರಾಯಗಳಿವೆ.2047ರಲ್ಲಿ ಅಂದರೆ 28 ವರ್ಷಗಳ ಬಳಿಕ ಬೇಸಿಕ್ ಲಾ ಕೊನೆಗೊಳ್ಳುತ್ತದೆ. ಆ ಬಳಿಕ ಹಾಂಗ್‌ಕಾಂಗ್‌ನ ಸ್ವಾಯತ್ತೆಯ ಗತಿಯೇನು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ.

ನಾವು ಚೀನೀಯರಲ್ಲ!
ಪ್ರಾದೇಶಿಕವಾಗಿ ಚೀನಾದ ಭಾಗವಾಗಿದ್ದರೂ, ತಾವು ಚೀನೀಯರು ಎಂದು ಗುರುತಿಸಿಕೊಳ್ಳಲು ಹಾಂಗ್‌ಕಾಂಗ್ ಜನ ಇಷ್ಟಪಡುವುದಿಲ್ಲ. ಹಾಂಗ್‌ಕಾಂಗ್ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆ ಇದನ್ನ ದೃಢಪಡಿಸಿದೆ. ಬ್ರಿಟಷ್ ವಸಾಹತು ಆಗಿದ್ದ ಕಾರಣ, ಹಾಂಗ್‌ಕಾಂಗ್ ಜನರು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಚೀನಾಗಿಂತ ಭಿನ್ನವಾಗಿದ್ದಾರೆ. ಚೀನಾ ವಿರೋಧಿ ಧೋರಣೆಯು ಯುವಜನಾಂಗದಲ್ಲಿ ಮೊಳೆಯುತ್ತಿದೆ. ಹಾಂಗ್‌ಕಾಂಗ್‌ನ ಸ್ವಾತಂತ್ರ್ಯಕ್ಕಾಗಿ ಯುವಜನತೆ ಕರೆ ನೀಡಿದ್ದು, ಚೀನಾ ಸರ್ಕಾರವನ್ನು ಬಡಿದೆಚ್ಚರಿಸಿದೆ. 2014ರಲ್ಲಿ ಸ್ವಾತಂತ್ರ್ಯದ ಪರ ದನಿ ಎದ್ದಿತ್ತು.

11% –ತಾವು ‘ಚೈನೀಸ್’ ಎಂದು ಸಮೀಕ್ಷೆಯಲ್ಲಿ ಹೇಳಿಕೊಂಡವರು

71% –ತಾವು ಚೈನೀಸ್ ಎಂದು ಹೇಳಿಕೊಳ್ಳಲು ಹೆಮ್ಮೆಪಡುವುದಿಲ್ಲ ಎಂದವರು

ಅಂಬ್ರೆಲಾ ಮೂವ್‌ಮೆಂಟ್
2014ರಲ್ಲಿ ಶುರುವಾದ ರಾಜಕೀಯ ಪ್ರತಿಭಟನೆಯೇ ಅಂಬ್ರೆಲಾ ಮೂವ್‌ಮೆಂಟ್ (ಚಳವಳಿ). ಪಾದರ್ಶಕ ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆಗೆ ಇಳಿದ ಜನರು ಪೊಲೀಸರ ಪೆಪ್ಪರ್ ಸ್ಪ್ರೇ ದಾಳಿಯಿಂದ ಪಾರಾಗಲು ಛತ್ರಿಗಳ ಮೊರೆ ಹೋಗಿದ್ದರು. ಇದುಅಂಬ್ರೆಲಾ ಮೂವ್‌ಮೆಂಟ್ ಎಂದೇ ಹೆಸರಾಯಿತು. ಇದೀಗ ಹಾಂಗ್‌ಕಾಂಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲೂ ಛತ್ರಿಗಳು ರಾರಾಜಿಸುತ್ತಿವೆ. ಪೊಲೀಸರ ಅಶ್ರುವಾಯು ಪ್ರಯೋಗದಿಂದ ರಕ್ಷಣೆ ನೀಡುತ್ತಿವೆ.

ಶಾಸನಸಭೆ ಹಾಗೂ ಸಂವಿಧಾನ
ಹಾಂಗ್‌ಕಾಂಗ್‌ನಲ್ಲಿ ಚೀನಾ ಮಧ್ಯಪ್ರವೇಶಕ್ಕೆ ನಿದರ್ಶನಗಳಿವೆ. ಪ್ರಜಾಪ್ರಭುತ್ವ ಪರ ಜನಪ್ರತಿನಿಧಿಗಳ ಅನರ್ಹತೆ ತೀರ್ಪು ಇಲ್ಲಿ ಉಲ್ಲೇಖಾರ್ಹ. ನಾಪತ್ತೆಯಾದ ಐವರು ಪುಸ್ತಕ ಮಾರಾಟಗಾರರು ಚೀನಾದ ವಶದಲ್ಲಿದ್ದಾರೆ. ಕಲಾವಿದರು ಹಾಗೂ ಬರಹಗಾರರಿಗೆ ನಿರ್ಬಂಧಗಳಿವೆ.

ಹಾಂಗ್‌ಕಾಂಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು 1,200 ಸದಸ್ಯರ ಚುನಾವಣಾ ಸಮಿತಿ ಆಯ್ಕೆ ಮಾಡುತ್ತದೆ. 70 ಸದಸ್ಯರ ಶಾಸನಸಭೆಯ ಎಲ್ಲ ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗುವುದಿಲ್ಲ. ಚೀನಾ ಬೆಂಬಲಿತ ಶಾಸಕರೇ ಇಲ್ಲಿ ಹೆಚ್ಚಾಗಿದ್ದಾರೆ. ಹಾಂಗ್‌ಕಾಂಗ್‌ನ ಕಿರು ಸಂವಿಧಾನ ‘ಬೇಸಿಕ್ ಲಾ’ ಪ್ರಕಾರ, ನಾಯಕ ಹಾಗೂ ಶಾಸನಸಭೆಯ ಸದಸ್ಯರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಚುನಾಯಿತರಾಗಬೇಕು. ಆದರೆ ಇದರ ಸ್ವರೂಪ ಹೇಗೆ ಎಂಬ ಬಗ್ಗೆಯೇ ಭಿನ್ನಾಭಿಪ್ರಾಯಗಳಿವೆ.2047ರಲ್ಲಿ ಅಂದರೆ 28 ವರ್ಷಗಳ ಬಳಿಕ ಬೇಸಿಕ್ ಲಾ ಕೊನೆಗೊಳ್ಳುತ್ತದೆ. ಆ ಬಳಿಕ ಹಾಂಗ್‌ಕಾಂಗ್‌ನ ಸ್ವಾಯತ್ತೆಯ ಗತಿಯೇನು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT