ಹಾಂಗ್‌ಕಾಂಗ್‌: ‘ನಾಯಕರಹಿತ ಹೋರಾಟ ಸೂಕ್ತ ಮಾರ್ಗದಲ್ಲಿ’

ಮಂಗಳವಾರ, ಜೂಲೈ 16, 2019
23 °C

ಹಾಂಗ್‌ಕಾಂಗ್‌: ‘ನಾಯಕರಹಿತ ಹೋರಾಟ ಸೂಕ್ತ ಮಾರ್ಗದಲ್ಲಿ’

Published:
Updated:

ಹಾಂಗ್‌ಕಾಂಗ್‌: ‘ಬೀಜಿಂಗ್‌ ಜನರ ಈ ಹೋರಾಟ ಯಶಸ್ಸಿನತ್ತ ದಾಪುಗಾಲು ಹಾಕಿರುವುದಕ್ಕೆ ‘ನಾಯಕರಹಿತ’ ಹೋರಾಟವೇ ಪ್ರಮುಖ ಕಾರಣ. ಹೋರಾಟದ ಮುಂಚೂಣಿಯಲ್ಲಿ ಯಾವುದೇ ನಾಯಕರು ಇಲ್ಲದ ಕಾರಣ ಆಡಳಿತ ನಡೆಸುವವರಿಗೆ ಹೋರಾಟ ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ’ ಎಂದು ಹಾಂಗ್‌ಕಾಂಗ್‌ನ 2014ರ ಪ್ರಜಾಪ್ರಭುತ್ವ ಪರವಾದ ‘ಅಂಬ್ರೆಲಾ ಮೂವ್‌ಮೆಂಟ್‌’ನ ಪ್ರಮುಖ ಕಾರ್ಯಕರ್ತ ಜೋಶುವಾ ವಾಂಗ್ ಹೇಳಿದ್ದಾರೆ.

‘2014ರಲ್ಲಿ ನಾವು ಸಂಘಟಿಸಿದ್ದ ಹೋರಾಟದ ವೇಳೆ ಅದರ ನಾಯಕರನ್ನು ಆಡಳಿತ ವರ್ಗ ಗುರಿಯಾಗಿಸಿತ್ತು. ಇದರಿಂದ ಆ ಚಳವಳಿ ವಿಫಲವಾಗಿತ್ತು’ ಎಂದು ಅವರು ವಿವರಿಸಿದ್ದಾರೆ.

ಸೋಮವಾರ ಜೈಲಿನಿಂದ ಬಿಡುಗಡೆಯಾಗಿರುವ ವಾಂಗ್‌, ‘ಹೋರಾಟವನ್ನು ಮತ್ತಷ್ಟು ಸುಧಾರಿಸಿ, ಪ್ರಗತಿಶೀಲಗೊಳಿಸುವುದಾಗಿ’ ಸುದ್ದಿ ಸಂಸ್ಥೆಗೆ ತಿಳಿಸಿದ್ದರು. ಭಾನುವಾರದ ನಂತರ ಬೃಹತ್‌ ಪ್ರತಿಭಟನೆ ಕುರಿತು ಯಾವುದೇ ಘೋಷಣೆಯಾಗದಿದ್ದರೂ, ನಗರದ ವಿವಿಧೆಡೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಜನ ಸೇರಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

‘ಗೌರವದ ಅರ್ಥ ಏನು ಎಂಬುದು ಕ್ಯಾರಿ ಲ್ಯಾಮ್‌ ಅವರಿಗೆ ತಿಳಿದಿಲ್ಲದಿದ್ದರೆ ಶೀಘ್ರದಲ್ಲಿಯೇ ಇನ್ನಷ್ಟು ಪ್ರತಿರೋಧಗಳು ವ್ಯಕ್ತವಾಗುತ್ತವೆ’ ಎಂದು ವಾಂಗ್‌ ಪ್ರತಿಕ್ರಿಯಿಸಿದ್ದಾರೆ.

‘ವಿವಾದಾತ್ಮಕ ಮಸೂದೆಯನ್ನು ಚೀನಾ ಹಿಂಪಡೆಯುವವರೆಗೆ ಹಾಗೂ ಕ್ಯಾರಿ ಲ್ಯಾಮ್‌ ಹುದ್ದೆ ತ್ಯಜಿಸುವವರೆಗೆ ಹಾಂಗ್‌ಕಾಂಗ್‌ ಜನರು ವಿರಮಿಸುವುದಿಲ್ಲ. ಈ ನಿಟ್ಟಿನಲ್ಲಿ ಅವರು ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ರಸ್ತೆಗಿಳಿದು ಪ್ರತಿಭಟನೆ ದಾಖಲಿಸಲಿದ್ದಾರೆ’ ಎಂದು ವಿರೋಧ ಪಕ್ಷದ ಮುಖಂಡ ರೇ ಚಾನ್‌ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.

ಶಂಕಿತ ಅಪರಾಧಿಗಳನ್ನು ವಿಚಾರಣೆಗಾಗಿ ಚೀನಾ ಮೇನ್‌ಲ್ಯಾಂಡ್‌ಗೆ ಹಸ್ತಾಂತರಿಸುವ ವಿವಾದಾತ್ಮಕ ಮಸೂದೆಯನ್ನು ವಿರೋಧಿಸುವುದರ ಜತೆಗೆ ಬೀಜಿಂಗ್‌ ಪರವಿರುವ ಆಡಳಿತದ ವಿರುದ್ಧ ಧ್ವನಿಯೆತ್ತಿ ಅಲ್ಲಿನ ಲಕ್ಷಾಂತರ ಜನರು ನಡೆಸುತ್ತಿರುವ ಪ್ರತಿಭಟನೆ ‘ನಾಯಕರಹಿತ’ವಾದದ್ದು.

ಆದರೆ, ಯಾರ ನಿರ್ದೇಶನವೂ ಇಲ್ಲದ ಈ ಹೋರಾಟದ ಗತಿ ಏನು? ಎಂಬ ಪ್ರಶ್ನೆ ಚಿಂತಕರನ್ನು ಕಾಡುತ್ತಿದೆ. ಜನ ಸಮೂಹದ ಭಾರಿ ಪ್ರತಿಭಟನೆ ಕಾರಣ ಈ ಮಸೂದೆಯನ್ನು ಅಮಾನತಿನಲ್ಲಿಡಲಾಗಿದೆ. ಆದರೆ ಮಸೂದೆಯನ್ನು ಪೂರ್ಣವಾಗಿ ಹಿಂಪಡೆಯಬೇಕು ಮತ್ತು ಬೀಜಿಂಗ್‌ ಪರ ಇರುವ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ಯಾರಿ ಲ್ಯಾಮ್‌ ಹುದ್ದೆ ತ್ಯಜಿಸಬೇಕು ಎಂಬುದು ಪ್ರತಿಭಟನಾಕಾರರ ಬಲವಾದ ಆಗ್ರಹ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !