ಗುರುವಾರ , ಅಕ್ಟೋಬರ್ 17, 2019
24 °C
ಜಾಗತಿಕ ಮಟ್ಟದಲ್ಲಿ ರ‍್ಯಾಲಿಗೆ ಕರೆ

ಚೀನಾದ ‘ನಿರಂಕುಶ ಪ್ರಭುತ್ವ’ಕ್ಕೆ ಖಂಡನೆ: ಹಾಂಗ್‌ಕಾಂಗ್‌ನಲ್ಲಿ ಮತ್ತೆ ಪ್ರತಿಭಟನೆ

Published:
Updated:
Prajavani

ಹಾಂಗ್‌ಕಾಂಗ್‌: ಪ್ರಜಾಪ್ರಭುತ್ವ ಪರ ಹೋರಾಟಗಾರರು ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ರ್‍ಯಾಲಿ ಹಿಂಸೆಗೆ ತಿರುಗಿದ್ದು, ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮತ್ತೆ ಘರ್ಷಣೆ ನಡೆದಿದೆ.

ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ್ದಾರೆ. ಕೆಲವೆಡೆ ಪೊಲೀಸರ ಪ್ರತಿಭಟನಕಾರರು ಮೇಲೆ ಪೆಟ್ರೋಲ್‌ ಬಾಂಬ್‌ ಹಾಗೂ ಕಲ್ಲುಗಳನ್ನು ಎಸೆದಿದ್ದಾರೆ. ಹಲವರನ್ನು ಬಂಧಿಸಲಾಗಿದೆ.

‘ನಿರಂಕುಶ ಪ್ರಭುತ್ವ‘ ವಿರೋಧಿಸಿ ಜಾಗತಿಕ ಮಟ್ಟದಲ್ಲಿ ಪ್ರತಿಭಟನೆ ನಡೆಸುವಂತೆ ಇಲ್ಲಿನ ಹೋರಾಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಿದ್ದರು.

ಚೀನಾದಲ್ಲಿ ಕಮ್ಯುನಿಸ್ಟ್‌ ಆಡಳಿತಕ್ಕೆ 70 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೂ ಮುನ್ನ ಹಾಂಗ್‌ಕಾಂಗ್‌ನ ಹೋರಾಟಗಾರರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಮಂಗಳವಾರ ‘ದುಃಖದ ದಿನ‘ ಆಚರಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಯೂರೋಪ್‌ ಮತ್ತು ಉತ್ತರ ಅಮೆರಿಕದ 40 ಸ್ಥಳಗಳಲ್ಲಿ ರ‍್ಯಾಲಿ ನಡೆಸಲು ಚಿಂತನೆ ನಡೆಸಲಾಗಿದೆ.

ಸಿಡ್ನಿ, ತೈಪೆಯಲ್ಲೂ ರ್‍ಯಾಲಿ

ಹಾಂಗ್‌ಕಾಂಗ್‌ ಹೋರಾಟಗಾರರಿಗೆ ಬೆಂಬಲ ಸೂಚಿಸಿ ಆಸ್ಟ್ರೇಲಿಯಾದ ಸಿಡ್ನಿ ಮತ್ತು ತೈವಾನ್‌ನ ತೈಪೆಯಲ್ಲೂ ಸಾವಿರಾರು ಮಂದಿ ಭಾನುವಾರ ರ‍್ಯಾಲಿ ನಡೆಸಿದರು.

ಸಿಡ್ನಿಯಲ್ಲಿ ನಡೆದ ರ್‍ಯಾಲಿಯಲ್ಲಿ ಕಪ್ಪು ಬಟ್ಟೆ ಧರಿಸಿ ಪಾಲ್ಗೊಂಡಿದ್ದ ಜನರು, ’ಹಾಂಗ್‌ಕಾಂಗ್‌ ಉಳಿಸಿ‘, ‘ದಬ್ಬಾಳಿಕೆ ಅಳಿಸಿ‘ ಎಂದು ಘೋಷಣೆ ಕೂಗಿದರು.

ತೈಪೆಯ ಸಂಸತ್‌ ಕಟ್ಟಡದ ಮುಂಭಾಗದಲ್ಲಿ ಜನರು, ಹಾಂಗ್‌ಕಾಂಗ್‌ ಪ್ರತಿಭಟನಕಾರರಿಗೆ ಬೆಂಬಲ ಸೂಚಿಸಿ ರ‍್ಯಾಲಿ ನಡೆಸಿದರು.

‘ತೈವಾನ್‌ ಮತ್ತು ಹಾಂಗ್‌ಕಾಂಗ್‌ನ ಮೇಲೆ ಚೀನಾದ ಹಸ್ತಕ್ಷೇ‍ಪ ಹೆಚ್ಚುತ್ತಿದೆ. ಸ್ವತಂತ್ರ ತೈವಾನ್‌ನ ಪ್ರಜಾಪ್ರಭುತ್ವ ರಕ್ಷಣೆಗಾಗಿ ನಾವು ಹಾಂಗ್‌ಕಾಂಗ್‌ ಹೋರಾಟಗಾರರಿಗೆ ಬೆಂಬಲ ಸೂಚಿಸುತ್ತೇವೆ‘ ಎಂದು ತೈವಾನ್‌ನ ಪ್ರತಿಭಟನಕಾರರು ತಿಳಿಸಿದ್ದಾರೆ.

Post Comments (+)