ಮಾನವ ಕಳ್ಳಸಾಗಣೆ: ನಿಯಂತ್ರಣ ಕ್ರಮದಲ್ಲಿ ಭಾರತ ಹಿಂದೆ

7
ಅಮೆರಿಕದ ವಾರ್ಷಿಕ ವರದಿಯಲ್ಲಿ ಉಲ್ಲೇಖ

ಮಾನವ ಕಳ್ಳಸಾಗಣೆ: ನಿಯಂತ್ರಣ ಕ್ರಮದಲ್ಲಿ ಭಾರತ ಹಿಂದೆ

Published:
Updated:

ವಾಷಿಂಗ್ಟನ್ (ಪಿಟಿಐ): ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಭಾರತದಲ್ಲಿ ಶಿಕ್ಷೆಯ ಪ್ರಮಾಣ, ತನಿಖೆ ಮತ್ತು ವಿಚಾರಣೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಇದೆ ಎಂದು ಅಮೆರಿಕದ ವರದಿಯೊಂದು ತಿಳಿಸಿದೆ.

ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಇರಿಸಿಕೊಂಡವರು ಮತ್ತು ಜೀತ ಪದ್ಧತಿ ಸೇರಿದಂತೆ ಎಲ್ಲಾ ರೀತಿಯ ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಭಾಗಿಯಾದವರಿಗೂ ಶಿಕ್ಷೆಯಾಗುವಂತೆ ಭಾರತ ಕ್ರಮ ಕೈಗೊಳ್ಳಬೇಕು ಎಂದು ‘ಮಾನವ ಕಳ್ಳಸಾಗಣೆ 2018’ರ ವಾರ್ಷಿಕ ವರದಿಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಒತ್ತಾಯಿಸಿದೆ.

ಈ ಪಿಡುಗಿನ ನಿವಾರಣೆಗೆ ಭಾರತ ಸರ್ಕಾರ ಕನಿಷ್ಠ ಮಾನದಂಡಗಳನ್ನೂ ಪೂರೈಸುತ್ತಿಲ್ಲ. ಆದರೂ ಈ ವಿಷಯದಲ್ಲಿ ಕೆಲವು ಪ್ರಯತ್ನಗಳನ್ನು ಮಾಡುತ್ತಿದೆ. ಸಂತ್ರಸ್ತರ ಗುರುತು ಪತ್ತೆ, ಸಂತ್ರಸ್ತ ಮಹಿಳೆಯರು ಮತ್ತು ಮಕ್ಕಳ ಪುನರ್ವಸತಿಗಾಗಿ ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಮೀಸಲಿಡುತ್ತಿದೆ. ಆದರೆ, ಒಟ್ಟಾರೆ ಪ್ರಯತ್ನ ಮಾತ್ರ ಅಸಮರ್ಪಕವಾಗಿದೆ ಎಂದು ಹೇಳಿದೆ.

ಒತ್ತಾಯದಿಂದ ದುಡಿಮೆಗೆ ಹಾಕುವುದು ಭಾರತದಲ್ಲಿ ಅತಿದೊಡ್ಡ ಸಮಸ್ಯೆಯಾಗಿದೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸಾಲದ ಶೂಲದಲ್ಲಿ ಸಿಲುಕಿರುತ್ತಾರೆ. ಕೆಲವರು ತಮ್ಮ ಹಿಂದಿನ ತಲೆಮಾರಿನಿಂದಲೂ ಈ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ಇಂತಹವರನ್ನು ಇಟ್ಟಿಗೆಗೂಡುಗಳು, ಅಕ್ಕಿ ಗಿರಣಿಗಳು, ಎಂಬ್ರಾಯಿಡರಿ ಕಾರ್ಖಾನೆಗಳು ಮತ್ತು ಕೃಷಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ.

ದಲಿತರು, ಬುಡಕಟ್ಟು ಸಮುದಾಯಗಳು, ಧಾರ್ಮಿಕ ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಬಾಲಕಿಯರು ಹೆಚ್ಚಿನ ತೊಂದರೆಗೆ ಸಿಲುಕಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಲಕ್ಷಾಂತರ ಮಹಿಳೆಯರು ಮತ್ತು ಮಕ್ಕಳನ್ನು ಸಣ್ಣ ಹೋಟೆಲುಗಳು, ವಾಹನಗಳು, ಗುಡಿಸಿಲುಗಳಂತಹ ಸ್ಥಳಗಳಲ್ಲೂ ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ. ದೇಶದ ಒಳಗೆ ಅಥವಾ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದ ಆಮಿಷ ಒಡ್ಡಿ, ಕಪಟ ಮದುವೆಗಳನ್ನು ಮಾಡಿಕೊಂಡು, ಬಳಿಕ ಅವರನ್ನು ಅನೈತಿಕ ಚಟುವಟಿಕೆಗಳಿಗೆ ದೂಡಲಾಗುತ್ತಿದೆ. ಇದಕ್ಕಾಗಿ ವೆಬ್‌ಸೈಟ್‌ಗಳು, ಮೊಬೈಲ್‌ ಆ್ಯಪ್‌ಗಳನ್ನೂ ಕಳ್ಳಸಾಗಣೆದಾರರು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವರದಿ ವಿವರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !