ಸೋಮವಾರ, ಅಕ್ಟೋಬರ್ 21, 2019
22 °C

ನ್ಯಾಯಾಧೀಶರೇ, ನನ್ನ ಸಹೋದರನ ಕೊಂದ ಪೊಲೀಸ್‌ ಅಧಿಕಾರಿಯನ್ನು ತಬ್ಬಿಕೊಳ್ಳಲೇ...

Published:
Updated:
ಅಂಬರ್‌ ಗೈಂಗರ್‌ ಮತ್ತು ಬ್ರಾಂಟ್‌ ಜೀನ್‌ ತಬ್ಬಿಕೊಂಡ ಕ್ಷಣ

ವಾಷಿಂಗ್ಟನ್‌: ನ್ಯಾಯಾಧೀಶರೇ, ನನ್ನ ಸಹೋದರನನ್ನು ಗುಂಡಿಕ್ಕಿಕೊಂದು ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಮಹಿಳಾ ಪೊಲೀಸ್‌ ಅಧಿಕಾರಿಯನ್ನು ತಬ್ಬಿಕೊಳ್ಳಲು ದಯವಿಟ್ಟು ಅವಕಾಶ ಕೊಡಿ ಎಂದು ಯುವಕ ಬ್ರಾಂಟ್‌ ಜೀನ್‌ ಕೇಳಿದಾಗ ಇಡೀ ಕೋರ್ಟ್‌ ಕೆಲ ಹೊತ್ತು ಭಾವುಕತೆಗೆ ಜಾರಿತು.

ಈ ಮನಕಲಕುವ ಘಟನೆ ನಡೆದಿರುವುದ ಅಮೆರಿಕದ ಟೆಕ್ಸಾಸ್‌ನ ಸ್ಥಳೀಯ ನ್ಯಾಯಾಲಯದಲ್ಲಿ. ಅಪರಾಧಿ ಅಧಿಕಾರಿಯನ್ನು ತಬ್ಬಿಕೊಂಡ ಬ್ರಾಂಟ್‌ ಜೀನ್‌ ವರ್ಣಭೇದ ಮರೆತು ನಾವು ಮಾನವೀಯತೆಯ ಜೀವನ ನಡೆಸಬೇಕು ಎಂದು ಹೇಳಿದ್ದಾರೆ. ಜೈಲು ಶಿಕ್ಷೆಗೆ ಗುರಿಯಾಗಿರುವ ಶ್ವೇತ ವರ್ಣಿಯ ಪೊಲೀಸ್‌ ಅಧಿಕಾರಿ ಅಂಬರ್‌ ಗೈಂಗರ್‌ ಕಪ್ಪು ವರ್ಣಿಯ ಬ್ರಾಂಟ್‌ ಜೀನ್‌ ಸಹೋದರ ಬೋಥಮ್‌ ಜೀನ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. 

ನ್ಯಾಯಾಲಯದಲ್ಲಿ ತೀರ್ಪು ಹೊರ ಬಿದ್ದ ಬಳಿಕ ಅಂಬರ್‌ ಗೈಂಗರ್‌ ಮತ್ತು ಬ್ರಾಂಟ್‌ ಜೀನ್‌ ತಬ್ಬಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

2018ರ ಸೆಪ್ಟೆಂಬರ್‌ ತಿಂಗಳಲ್ಲಿ ಡಲ್ಲಾಸ್‌ನಲ್ಲಿ ಕಪ್ಪು ವರ್ಣಿಯರು ಪೊಲೀಸ್‌ ದೌರ್ಜನ್ಯ ಖಂಡಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಅಂಬರ್‌ ಗೈಂಗರ್‌ ಡಲ್ಲಾಸ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ತಾವು ತಂಗಿದ್ದ ಅಪಾರ್ಟ್‌ಮೆಂಟ್‌ ಎದುರೇ ಕಪ್ಪು ವರ್ಣಿಯರು ಪ್ರತಿಭಟನೆ ನಡೆಸುತ್ತಿದ್ದರು. ಇದರ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಬೋಥಮ್‌ ಜೀನ್‌ ಹಾಗೂ ಬ್ರಾಂಟ್‌ ಜೀನ್‌ ಅವರ ಕುಟುಂಬ ನೆಲೆಸಿತ್ತು.  

 ಒಂದು ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಅಂಬರ್‌ ಗೈಂಗರ್‌ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ವೇಳೆ ಕೆಲ ಪ್ರತಿಭಟನಾ ನಿರತರು ಅಪಾರ್ಟ್‌ಮೆಂಟ್‌ ಪ್ರವೇಶಿಸಲು ಯತ್ನಿಸಿದ್ದರು. ಇದನ್ನು ತಡೆಯಲು ಅಂಬರ್‌ ಗೈಂಗರ್‌ ಪಕ್ಕದ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸಿದ್ದರು. ಫ್ಲ್ಯಾಟ್‌ನಲ್ಲಿ ಐಸ್‌ ಕ್ರೀಮ್‌ ತಿನ್ನುತ್ತ  ಟಿ.ವಿ ನೋಡುತ್ತಿದ್ದ ಬೋಥಮ್‌ ಜೀನ್‌ ಕೂಡ ಪ್ರತಿಭಟನಾಕಾರನಿರಬೇಕು ಎಂದು ತಪ್ಪಾಗಿ ತಿಳಿದು ಗುಂಡು ಹಾರಿಸಿದ್ದರು. ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದ ಅಂಬರ್‌ ಗೈಂಗರ್‌ಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 

ಕೋರ್ಟ್‌ ಹಾಲ್‌ನಲ್ಲಿ ನ್ಯಾಯಾಧೀಶರು ತೀರ್ಪು ಓದಿದ ಬಳಿಕ ಬ್ರಾಂಟ್‌ ಜೀನ್‌, ನ್ಯಾಯಾಧೀಶರೇ, ನನ್ನ ಸಹೋದರನ ಕೊಂದ ಆಪೊಲೀಸ್‌ ಅಧಿಕಾರಿಯನ್ನು ತಬ್ಬಿಕೊಳ್ಳಲು ಅನುಮತಿ ನೀಡಿ ಎಂದಿದ್ದರು. ನಂತರ ಮಾತನಾಡಿದ್ದ ಬ್ರಾಂಟ್‌ ಜೀನ್‌ ‘ನೀವು ಜೈಲಿಗೆ ಹೋಗುವುದನ್ನು ಸಹ ನಾನು ಬಯಸುವುದಿಲ್ಲ… ಒಬ್ಬ ವ್ಯಕ್ತಿಯಂತೆ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಾನು ನಿಮ್ಮ ಮೇಲೆ ಕೆಟ್ಟದ್ದನ್ನು ಬಯಸುವುದಿಲ್ಲ ಎಂದಿದ್ದರು. ಬಳಿಕ ನ್ಯಾಯಾಧೀಶರನ್ನು ಉದ್ದೇಶಿಸಿ, ಇದು ಸಾಧ್ಯವೇ ಎಂಬುದು ನನಗೆ ಗೊತ್ತಿಲ್ಲ, ಆದರೆ ನಾನು ಅವರನ್ನು ತಬ್ಬಿಕೊಳ್ಳಬಹುದೇ, ದಯವಿಟ್ಟು, ದಯವಿಟ್ಟು‘ ಎಂದು ಕೇಳಿದ್ದರು.

ನ್ಯಾಯಾಧೀಶರು ಪರಸ್ಪರರಿಗೆ ತಬ್ಬಿಕೊಳ್ಳಲು ಅನುಮತಿ ನೀಡಿದ್ದರು. ಕಂಬನಿ ಮಿಡಿಯುತ್ತಲ್ಲೇ ಓಡಿ ಬಂದ ಅಂಬರ್‌ ಗೈಂಗರ್‌ ಅವರು ಬ್ರಾಂಟ್‌ ಜೀನ್‌ನನ್ನು ತಬ್ಬಿಕೊಂಡರು. ಈ ವೇಳೆ ನ್ಯಾಯಾಲಯವೇ ಕೆಲ ಕ್ಷಣ ಸ್ತಬ್ಧವಾಗಿತ್ತು, ಅಲ್ಲಿ ಇದ್ದವರು ಭಾವುಕರಾಗಿದ್ದರು. ನ್ಯಾಯಾಧೀಶರ ಕಣ್ಣಂಚಿನಲ್ಲೂ ನೀರು ಜಿನುಗುತ್ತಿತ್ತು.  

ಈ ಘಟನೆ ನಡೆದ ಬಳಿಕ ಡಲ್ಲಾಸ್‌ನಲ್ಲಿ ಜನಾಂಗೀಯ ದ್ವೇಷ ಹೆಚ್ಚಾಗಿತ್ತು. ಈ ಘಟನೆ ಕುರಿತಂತೆ ಅಮೆರಿಕದಲ್ಲಿ ಕಪ್ಪು ಯುವಕರಿಗೆ ಸುರಕ್ಷಿತವಾದ ಸ್ಥಳ ಇದೆಯೇ ಎಂದು ಪ್ರಶ್ನೆ ಮಾಡುವ ಮೂಲಕ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಈ ಘಟನೆಯನ್ನು ಖಂಡಿಸಿತ್ತು. 

ಬ್ರಾಂಟ್‌ ಜೀನ್‌ ಅವರ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಅನುವಾದ: ಪೃಥ್ವಿರಾಜ್‌ ಎಂ.ಎಚ್‌

ಆಧಾರ: ವಿವಿಧ ಮೂಲಗಳು 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)