ಯಾದಗಿರಿ: ‘ಶಾಸಕನಾಗಿದ್ದ ಎರಡು ಅವಧಿಯಲ್ಲಿ ಗುರುಮಠಕಲ್ ಮತಕ್ಷೇತ್ರದ 70 ತಾಂಡಾಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿದ್ದೇನೆ’ ಎಂದು ಗುರುಮಠಕಲ್ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ ಹೇಳಿದರು.
ಸಮೀಪದ ಹೊಸಳ್ಳಿ ತಾಂಡಾದಲ್ಲಿ ಸೋಮವಾರ ಚುನಾವಣಾ ಏರ್ಪಡಿಸಿದ್ದ ಪ್ರಚಾರಸಭೆಯಲ್ಲಿ ಅವರು ಮಾತನಾಡಿದರು. ‘ಕಾಂಗ್ರೆಸ್ ಸರ್ಕಾರ ಎಲ್ಲಾ ವರ್ಗದ ಜನರ ಕಲ್ಯಾಣಕ್ಕೆ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ವಿಶೇಷವಾಗಿ ಬಂಜಾರ ಸಮಾಜದ ಪ್ರಗತಿಗೆ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಿದೆ’ ಎಂದರು.
‘ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜನರಿಗೆ ಯಾವುದೇ ರೀತಿ ಸಹಾಯ ಸಹಕಾರ ನೀಡದೆ ಚುನಾವಣೆ ಸಂದರ್ಭದಲ್ಲಿ ಮಾತ್ರ ತಮ್ಮ ಹತ್ತಿರ ಬಂದು ಸುಳ್ಳು ಭರವಸೆ ನೀಡುತ್ತಾರೆ. ಅದಕ್ಕೆ ನೀವು ಕಿವಿಗೊಡಬಾರದು’ ಎಂದರು.
ಮುಖಂಡ ನರೇಂದ್ರ ರಾಠೋಡ್ ಮಾತನಾಡಿ,‘ಸಮಾಜದ ಬಗ್ಗೆ ಕಾಳಜಿ ಹಾಗೂ ಅಭಿವೃದ್ಧಿ ಚಿಂತನೆ ಹೊಂದಿರುವ ಬಾಬುರಾವ್ ಚಿಂಚನಸೂರ ಅವರಿಗೆ ಎಲ್ಲರೂ ಚುನಾವಣೆಯಲ್ಲಿ ಮತ ನೀಡುವ ಮೂಲಕ ಶಕ್ತಿ ತುಂಬಬೇಕು’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಷು ರಾಠೋಡ, ಕಿಶನ ಚವ್ಹಾಣ, ಚಂದ್ರಕಾಂತ ಕವಲ್ದಾರ, ಪರಶುರಾಮ ಚವ್ಹಾಣ, ಅರ್ಜುನಪ್ಪ ಬಾಚವಾರ, ತಿಪ್ಪಣ್ಣ ಯಾದವ, ಶಾಂತಪ್ಪ ರಾಠೋಡ, ಮನು ಚವ್ಹಾಣ, ಜಯರಾಮ ದೇವಜೀ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.