ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಫಾ ವೈರಸ್: ಮುಂಜಾಗ್ರತೆ ವಹಿಸಿ

ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಸೂಚನೆ
Last Updated 26 ಮೇ 2018, 10:11 IST
ಅಕ್ಷರ ಗಾತ್ರ

ಚಿತ್ರದುರ್ಗ: ನಿಫಾ ವೈರಾಣು ಕೇರಳದಲ್ಲಿ ವ್ಯಾಪಕವಾಗಿ ಹರಡಿದ್ದು, 12 ಮಂದಿ ಈ ಕಾಯಿಲೆಯಿಂದ ಮೃತಪಟ್ಟಿರುವ ಕಾರಣ ಜಿಲ್ಲೆಯಲ್ಲಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.

ಕೇರಳ ರಾಜ್ಯದ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಪ್ರಮುಖ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು, ಚಾಮರಾಜನಗರ  ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಸೂಚಿಸಿರುವ ಕಾರಣ ಶುಕ್ರವಾರ ಇಲ್ಲಿ ತುರ್ತು ಸಭೆ ನಡೆಯಿತು.

ರೋಗ ಹರಡುವ ವಿಧಾನ: ಈ ವೈರಾಣು ಬಾವಲಿ, ಹಂದಿ, ನಾಯಿ, ಕುರಿ ಹಾಗೂ ಮನುಷ್ಯರಿಗೆ ಬಾಧಿಸುತ್ತದೆ. ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ, ಬಾವಲಿಗಳು ಕಚ್ಚಿದ ಹಣ್ಣು, ಹಂಪಲು ಸೇವಿಸುವುದರ ಮೂಲಕ ಇತರೆ ಪ್ರಾಣಿಗಳಿಗೆ ಹರಡುವುದು. ಇದು ಸೋಂಕಿತ ಪ್ರಾಣಿಗಳ ಮಲ, ಮೂತ್ರ, ಜೊಲ್ಲು, ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಹರಡಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ರೋಗ ಲಕ್ಷಣಗಳು: ಜ್ವರ, ತಲೆನೋವು, ಮೈಕೈ ನೋವು, ವಾಂತಿ, ನಡುಕ, ತೊದಲುವಿಕೆ, ಪ್ರಜ್ಞಾ ಹೀನತೆಯಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಸಭೆಗೆ ತಿಳಿಸಿದರು.

ರೋಗ ತಡೆಗಟ್ಟುವ ವಿಧಾನ: ಪ್ರಾಣಿ, ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು. ಬಾವಲಿಗಳು ಹೆಚ್ಚಾಗಿ
ರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ, ನೀರಾ ಕುಡಿಯಬಾರದು. ತಾಳೆ ಬೆಳೆಯುವ ಪ್ರದೇಶಗಳಲ್ಲಿ ತಾಜಾ ತಾಳೆಹಣ್ಣಿನ ರಸ ಸೇವಿಸಬಾರದು. ಹಣ್ಣು ಮತ್ತು ಒಣ ಖರ್ಜೂರ ಇವುಗಳನ್ನು ಸೇವಿಸುವ ಮೊದಲು ಸ್ವಚ್ಛಗೊಳಿಸಬೇಕು ಎಂದು ಮಾಹಿತಿ ನೀಡಿದರು.

ಇಲಾಖೆ ಕೈಗೊಂಡಿರುವ ಕ್ರಮಗಳು: ನಗರದಲ್ಲಿ ತೆರೆದ ಬಾವಿಗಳಿಗೆ ಮೆಷ್ ಅಳವಡಿಕೆ, ಓವರ್‌ಹೆಡ್ ಟ್ಯಾಂಕ್ ಬಳಿ ಸೋಂಕಿನಿಂದ ಸಾವು ಸಂಭವಿಸಿದ ಬಾವಲಿಗಳ ಮಾಹಿತಿ ಪಡೆಯಲು, ಟ್ಯಾಂಕ್‌ಗೆ ಮುಚ್ಚಳ ಹಾಕುವಂತೆ ನಗರಸಭೆ ಪೌರಾಯುಕ್ತರಿಗೆ, ಎಲ್ಲಾ ತಾಲ್ಲೂಕಿನ ಮುಖ್ಯ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ರಸ್ತೆ ಬದಿ ಕತ್ತರಿಸಿದ ಹಣ್ಣು, ಹಂಪಲು ಮಾರಾಟಗಾರರಿಗೆ ಸ್ವಚ್ಛ ಮತ್ತು ಶುದ್ಧ ಹಣ್ಣು ಉಪಯೋಗಿಸಲು ತಿಳಿವಳಿಕೆ ನೀಡಲು ಪೌರಾಯುಕ್ತರು, ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಸಾಕು ಹಂದಿಗಳ ಮಾಲೀಕರಿಗೆ ನಿಫಾ ವೈರಸ್ ಮಾಹಿತಿ ನೀಡುವಂತೆ ಪಶುಸಂಗೋಪನಾ ಇಲಾಖೆಗೆ ಜಿಲ್ಲಾಡಳಿತ ಸೂಚಿಸಿದೆ.

ಬಾವಲಿಗಳ ವಾಸತಾಣ ಗುರುತಿಸಿ, ಸಾವಿಗೊಳಗಾದ ಬಾವಲಿಗಳ ಮಾಹಿತಿ ನೀಡಲು ಅರಣ್ಯ ಇಲಾಖೆಗೆ ಸೂಚಿಸಲಾಗಿದ್ದು, ಕೇರಳದಿಂದ ಇಲ್ಲಿಗೆ ಬರುವಂಥ ನರ್ಸಿಂಗ್ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ಇರಿಸಲು ನರ್ಸಿಂಗ್ ಕಾಲೇಜು ಪ್ರಾಚಾರ್ಯರಿಗೆ ತಿಳಿಸಲಾಗಿದೆ.

ಖಾಸಗಿ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕ ತೆರೆದು ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ತಾಲ್ಲೂಕು ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ ನಡೆಸಿ ಕೈಗೊಳ್ಳಲಾದ ಕ್ರಮದ ಬಗ್ಗೆ ಮಾಹಿತಿ ನೀಡಲು ಮತ್ತು ಆಸ್ಪತ್ರೆಯಲ್ಲಿ ಪ್ರತ್ಯೇಕ  ಕೊಠಡಿ ತೆರೆಯಲು ಸೂಚಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿಇಒ ಪಿ.ಎನ್.ರವೀಂದ್ರ ಇದ್ದರು.

**
ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ. ಔಷಧಿಗಳ ದಾಸ್ತಾನು ಇರಿಸಲಾಗಿದೆ. ತೆರೆದ ಬಾವಿಗಳಿಗೆ ಮೆಷ್ ಅಳವಡಿಸಲು ಸೂಚಿಸಲಾಗಿದೆ
ವಿ.ವಿ.ಜ್ಯೋತ್ಸ್ನಾ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT