ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಫಲಿತಾಂಶ ಪ್ರಕಟ : ಸಾವಿರದೊಳಗೆ ರ್‍ಯಾಂಕ್‌ ಗಳಿಸಿದ 26 ಕನ್ನಡಿಗರು

Last Updated 27 ಏಪ್ರಿಲ್ 2018, 20:13 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ್ದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ರಾಜ್ಯದ 26 ಅಭ್ಯರ್ಥಿಗಳು ವಿವಿಧ ರ್‍ಯಾಂಕ್‌ ಪಡೆದಿದ್ದಾರೆ. ಬೀದರ್‌ನ ರಾಹುಲ್‌ ಶಿಂಧೆ ಅವರು 95ನೇ ರ‍್ಯಾಂಕ್ ಗಳಿಸಿದ್ದಾರೆ.

ಕೀರ್ತಿ ಕಿರಣ್‌ ಪೂಜಾರ್‌ (115 ರ್‍ಯಾಂಕ್‌), ಟಿ.ಶುಭಮಂಗಳಾ (147), ಎಂ.ಶ್ವೇತಾ (119), ಸಿ. ವಿಂಧ್ಯಾ (160), ಕೃತಿಕಾ (194), ಪೃಥ್ವಿಕ್‌ ಶಂಕರ್‌ (211), ಬಿ.ಗೋಪಾಲಕೃಷ್ಣ (265), ಎಚ್‌.ವಿನೋದ್‌ ಪಾಟೀಲ್‌ (294), ಎಂ.ಪುನೀತ್‌ ಕುಟ್ಟಯ್ಯ (324), ಸಿದ್ದಲಿಂಗ ರೆಡ್ಡಿ (346), ಸುದರ್ಶನ ಭಟ್‌ (434) ಎನ್‌.ವೈ. ವೃಶಾಂಕ್‌ (478), ಅಭಿಲಾಷ್‌ ಶಶಿಕಾಂತ್‌ ಬದ್ದೂರ್‌ (531), ನಿಖಿಲ್‌ ನಿಪ್ಪಾಣಿಕರ್‌ (563), ಟಿ.ಎನ್‌. ನಿಥನ್‌ರಾಜ್‌ (575), ಕೆ. ಸಚಿನ್‌ (652), ಎಸ್‌. ಪ್ರೀತಮ್‌ (654), ಬಿ.ಸಿ. ಹರೀಶ್‌ (657), ಆರ್‌.ವಿಜಯೇಂದ್ರ (666), ಶಿವರಾಜ್‌ ಸಾಯಿಬಣ್ಣ ಮನಗಿರಿ (784), ಸ್ಪರ್ಶ ನೀಲಾಂಗಿ (805), ಆರ್‌.ಸಿ. ಹರ್ಷವರ್ಧನ (913), ವೆಂಕಟೇಶ ನಾಯಕ್‌ (930), ಪಿ.ಪವನ್‌ (933), ಮಹೇಶ (958).
****

95ನೇ ರ‍್ಯಾಂಕ್ ಗಳಿಸಿದ ಐಎಫ್‌ಎಸ್‌ ಅಧಿಕಾರಿ ರಾಹುಲ್‌ ಶಿಂಧೆ

ಬೀದರ್‌: ಇಲ್ಲಿಯ ಗುರುನಾನಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಓದಿದ ರಾಹುಲ್‌ ಶಿಂಧೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ 95ನೇ ರ‍್ಯಾಂಕ್ ಜತೆಗೆ ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಕಳೆದ ವರ್ಷ ಇಂಡಿಯನ್‌ ಫಾರೆಸ್ಟ್‌ ಸರ್ವಿಸ್‌ ಪರೀಕ್ಷೆಯಲ್ಲಿ 59 ರ‍್ಯಾಂಕ್ ಪಡೆದುಕೊಂಡಿದ್ದು, ಸದ್ಯ ಡೆಹರಾಡೂನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬೀದರ್‌ನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ ನಂತರ ಹೈದರಾಬಾದ್‌ನ ಸಿಟ್ಜಿ ಕಾಲೇಜಿನಲ್ಲಿ 12ನೇ ತರಗತಿ ಪಾಸಾಗಿ ಮುಂಬೈನ ಐಐಟಿಯಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ.

ದೆಹಲಿಯಲ್ಲಿ ತರಬೇತಿ ಪಡೆದಿರುವ ರಾಹುಲ್‌ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿದ್ದಾರೆ. ಶಿಂಧೆ ಅವರ ತಂದೆಗೆ ಒಟ್ಟು ನಾಲ್ಕು ಮಕ್ಕಳು ಇದ್ದಾರೆ. ಅವರಲ್ಲಿ ಮೂವರು ಹೆಣ್ಣು ಮಕ್ಕಳು.

ದೆಹಲಿಯಲ್ಲಿ ವೈದ್ಯೆಯಾಗಿರುವ ಸಹೋದರಿ ರೂಪಾ ಅವರ ಮನೆಯಲ್ಲಿ ಉಳಿದುಕೊಂಡು ಯುಪಿಎಸ್‌ ಪರೀಕ್ಷೆ ತಯಾರಿ ನಡೆಸಿದ್ದರು. ತಂದೆ ಬೀದರ್‌ನಲ್ಲಿ ಜಿಲ್ಲಾ ಸಾಕ್ಷರತಾ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಇನ್ನಿಬ್ಬರು ಸಹೋದರಿಯರು ಎಂಜಿನಿಯರಿಂಗ್ ಹಾಗೂ ಎಂ.ಟೆಕ್‌ ಪದವಿ ಪಡೆದಿದ್ದಾರೆ.

‘ರಾಷ್ಟ್ರಮಟ್ಟದಲ್ಲಿ 95ನೇ ರ‍್ಯಾಂಕ್ ಬಂದಿರುವುದು ಗೊತ್ತಾಗಿದೆ. ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ಮಾಹಿತಿ ಇಲ್ಲ. ರ‍್ಯಾಂಕ್ ಬಂದಿರುವುದು ಖುಷಿ ತಂದಿದೆ’ ಎಂದು ರಾಹುಲ್‌ ಶಿಂಧೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
****


ಟಿ.ಶುಭಮಂಗಳಾ (147 ರ‍್ಯಾಂಕ್‌)

‘147ನೇ ರ‍್ಯಾಂಕ್‌ ಬಂದಿರುವುದು ಖುಷಿ ಎನಿಸಿದೆ. 2010ರಿಂದಲೇ ಪ್ರಸೂತಿ ತಜ್ಞೆ ಆಗಿ ಕೆಲಸ ಮಾಡುತ್ತಿದ್ದೇನೆ. ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸೆ ಕೊಡುವುದಕ್ಕಿಂತ ಹೆಚ್ಚಿನದ್ದೇನಾದರೂ ಮಾಡಬೇಕು ಎನಿಸಿತು.ಆಗ ನನ್ನ ಮನಸಿಗೆ ಯುಪಿಎಸ್‌ಸಿ ಬರೆಯುವ ಯೋಚನೆ ಬಂತು. ನನ್ನ ನೆಚ್ಚಿನ ಮೆಡಿಕಲ್‌ ಸೈನ್ಸ್‌ ವಿಷಯವನ್ನು ಆಯ್ದುಕೊಂಡಿದ್ದೆ. ಕೆಲಸದ ಮಧ್ಯೆ ಮಧ್ಯೆಯೇ ಓದಿಕೊಳ್ಳುತ್ತಿದ್ದೆ. ಒಂದು ಕ್ಷಣವನ್ನೂ ಹಾಳು ಮಾಡದೆ ಅಭ್ಯಾಸ ಮಾಡಿದ್ದೇನೆ. ಯುಟ್ಯೂಬ್‌ನಲ್ಲಿ ಪಾಠ ಕೇಳಿಸಿಕೊಳ್ಳುತ್ತಿದ್ದೆ’ ಎಂದು ಶುಭಮಂಗಳಾ ಖುಷಿ ಹಂಚಿಕೊಂಡರು.

‘ನಾನು ಗ್ರಾಮೀಣ ಪ್ರದೇಶದಿಂದ ಬಂದವನು. ಅವರ ನೋವುಗಳಿಗೆ ಸ್ಪಂದಿಸುವುದು ನನ್ನ ಗುರಿ’ ಎಂದು 657ನೇ ರ‍್ಯಾಂಕ್‌ ಪಡೆದ ತುಮಕೂರಿನ ಬೈಚನಹಳ್ಳಿಯ, ಹೆಬ್ಬೂರು ಗ್ರಾಮದ ಹರೀಶ್‌ ಬಿ.ಸಿ. ಹೇಳಿದರು.

ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಪೂರೈಸಿರುವ ಅವರು ಬಿ.ಇ (ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯೂನಿಕೇಶನ್‌) ಮುಗಿಸಿದ ಬಳಿಕ ದೇಶದ ಸೇವೆ ಮಾಡಬೇಕು ಎಂದು ಕನಸು ಕಂಡಿದ್ದರು. ಅದು ಈಗ ನಿಜವಾಗಿದೆ.


ಬಿ.ಸಿ. ಹರೀಶ್‌ (657 ರ‍್ಯಾಂಕ್‌)


**

ಭೂಗೋಳವಿಜ್ಞಾನ ವಿಷಯ ತೆಗೆದುಕೊಂಡು ಪಾಸ್‌ ಮಾಡಿದ ಎಂಜಿನಿಯರ್‌!

ಬೆಳಗಾವಿಯ ನಿಖಿಲ್‌ಗೆ 563ನೇ ರ‍್ಯಾಂಕ್‌

ಬೆಳಗಾವಿ: ಇಲ್ಲಿನ ಕ್ಯಾಂಪ್‌ ನಿವಾಸಿ, 24 ವರ್ಷದ ನಿಖಿಲ್‌ ಧನರಾಜ್‌ ನಿಪ್ಪಾಣಿಕರ ಯುಪಿಎಸ್‌ಸಿ ಈಚೆಗೆ ನಡೆಸಿದ ಪರೀಕ್ಷೆಯಲ್ಲಿ 563ನೇ ರ‍್ಯಾಂಕ್‌ ಗಳಿಸಿ ಸಾಧನೆ ತೋರಿದ್ದಾರೆ. ಮೊದಲ ಯತ್ನದಲ್ಲೇ ಅವರು ಯಶಸ್ಸು ಕಂಡಿರುವುದು ವಿಶೇಷ.

ದಿ.ಧನರಾಜ್‌ ನಿಪ್ಪಾಣಿಕರ–ಮೀನಾಕ್ಷಿ ದಂಪತಿಯ ಪುತ್ರ ಅವರು. ಕ್ಯಾಂಪ್‌ನ ಸೇಂಟ್‌ ಪಾಲ್ಸ್‌ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 86 ಅಂಕಳೊಂದಿಗೆ ತೇರ್ಗಡೆಯಾಗಿದ್ದರು. ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾದಲ್ಲಿ ಶೇ. 91ರಷ್ಟು ಅಂಕಗಳನ್ನು ಪಡೆದು ಕಾಲೇಜಿಗೆ ಟಾಪರ್ ಎನಿಸಿದ್ದರು. 2013ರಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು. ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪ‍ದವಿಯಲ್ಲಿ 3ನೇ ರ‍್ಯಾಂಕ್‌ ಪಡೆದಿದ್ದರು. ಯುಪಿಎಸ್‌ಸಿಯಲ್ಲಿ ಭೂಗೋಳವಿಜ್ಞಾನ ವಿಷಯದಲ್ಲಿ ಪರೀಕ್ಷೆ ತೆಗೆದುಕೊಂಡು ಒಳ್ಳೆಯ ಅಂಕ ಗಳಿಸಿದ್ದಾರೆ.

‘ಮೊದಲಿನಿಂದಲೂ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬೇಕು ಎನ್ನುವ ಉದ್ದೇಶವಿತ್ತು. ಇದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದೆ. ಎಂಜಿನಿಯರಿಂಗ್‌ ಮುಗಿಯುತ್ತಿದ್ದಂತೆಯೇ, 2016ರಲ್ಲಿ ನವದೆಹಲಿಯ ವಾಜಿರಾಂ ಇನ್‌ಸ್ಟಿಟ್ಯೂಟ್‌ ಫಾರ್‌ ಐಎಎಸ್‌ ಕೋಚಿಂಗ್‌ಗೆ ಸೇರಿದ್ದೆ. ಆಡಳಿತ ನಡೆಸುವವರಿಗೆ ಭೂಗೋಳವಿಜ್ಞಾನದ ಅರಿವಿರಬೇಕು. ಇದಕ್ಕಾಗಿಯೇ ನಾನು ಆ ವಿಷಯದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದೆ. ಅದರ ಆಸಕ್ತಿಯೂ ಇತ್ತು. ಮೊದಲ ಪ್ರಯತ್ನದಲ್ಲೇ ಪರೀಕ್ಷೆಯನ್ನು ಉತ್ತಮ ರ‍್ಯಾಂಕ್‌ನೊಂದಿಗೆ ಪಾಸ್‌ ಮಾಡಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ನಿಖಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರೀಕ್ಷೆಗಾಗಿ ಬಹಳ ಶ್ರಮ ಪಟ್ಟಿದ್ದೆ. 2 ವರ್ಷಗಳವರೆಗೆ ಸಾಮಾಜಿಕ ಜೀವನದಿಂದ ದೂರವೇ ಉಳಿದಿದ್ದೆ. ಓದುವುದೊಂದೇ ಕೆಲಸವಾಗಿತ್ತು. ಬೆಳಗಾವಿಗೂ ಒಮ್ಮೆ ಮಾತ್ರವೇ ಬಂದು ಹೋಗಿದ್ದೆ. ಏ. 3ರಂದು ಸಂದರ್ಶನ ಎದುರಿಸಿದ್ದೆ. ಕೆಲವು ದಿನಗಳ ಹಿಂದಷ್ಟೇ ಬೆಳಗಾವಿಗೆ ಬಂದೆ. ಒಳ್ಳೆಯ ಫಲಿತಾಂಶ ಬಂದಿರುವುದರಿಂದ ನನ್ನ ಶ್ರಮ ಸಾರ್ಥಕವಾದಂತಾಗಿದೆ’ ಎಂದು ಹೇಳಿದರು.

‘ತಂದೆ ಧನರಾಜ್‌ 2013ರಲ್ಲಿ ನಿಧನರಾದರು. ತಾಯಿ ಗೃಹಿಣಿ. ನನಗೆ ಚಿಕ್ಕಪ್ಪ ಕಿರಣ್‌ ನಿಪ್ಪಾಣಿಕರ, ಮಾವ ಮಿಲಿಂದ್‌ ಸುಳಗೇಕರ ಹಾಗೂ ಅತ್ತೆ ಲಕ್ಷ್ಮಿ ಸುಳಗೇಕರ ಬಹಳಷ್ಟು ಪ್ರೋತ್ಸಾಹ ಹಾಗೂ ನೆರವು ನೀಡಿದರು. ಯಾವುದೇ ತೊಂದರೆಯಾಗದಂತೆ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದರಿಂದ ಸಾಧನೆ ಸಾಧ್ಯವಾಯಿತು. ಓದಿನತ್ತ ಗಮನ ನೀಡುವುದಕ್ಕೆ ಸಹಕಾರಿಯಾಯಿತು’ ಎಂದು ನೆನದರು.

‘ಜನ ಸೇವೆ ಮಾಡಬೇಕು, ಕಷ್ಟದಲ್ಲಿರುವವರಿಗೆ ನೆರವಾಗಬೇಕು ಎನ್ನುವ ಗುರಿ ಇದೆ. ಯಾವ ಹುದ್ದೆ ಸಿಗುತ್ತದೆ ಎನ್ನುವುದನ್ನು ನೋಡಬೇಕು’ ಎಂದು ಅನಿಸಿಕೆ ಹಂಚಿಕೊಂಡರು.


ಸಂಬಂಧಿಕರೊಂದಿಗೆ ಸಂತಸ ಹಂಚಿಕೊಳ್ಳುತ್ತಿರುವ ನಿಖಿಲ್‌ ಧನರಾಜ್‌ ನಿಪ್ಪಾಣಿಕರ (ಎಡದಿಂದ ಮೂರನೆಯವರು)

‘ಪುತ್ರನ ಸಾಧನೆ ನೋಡಿ ತುಂಬಾ ಖುಷಿಯಾಗುತ್ತಿದೆ. ಚಿಕ್ಕವನಾಗಿದ್ದಾಗಿನಿಂದಲೂ ಚೆನ್ನಾಗಿ ಓದುತ್ತಾ ಬಂದಿದ್ದಾನೆ. ಈಗ ದೊಡ್ಡ ಅಧಿಕಾರಿಯಾಗುತ್ತಿದ್ದಾನೆ ಎನ್ನುವುದನ್ನು ನೆನೆದರೆ ಹೆಮ್ಮೆಯಾಗುತ್ತದೆ’ ಎಂದು ತಾಯಿ ಮೀನಾಕ್ಷಿ ಪ್ರತಿಕ್ರಿಯಿಸಿದರು.

ನಿಖಿಲ್‌ಗೆ ಅತ್ತೆ, ನಗರಪಾಲಿಕೆ ಎಂಜಿನಿಯರ್‌ ಲಕ್ಷ್ಮಿ ನಿಪ್ಪಾಣಿಕರ ಕುಟುಂಬ ಆಸರೆಯಾಗಿತ್ತು. ‘ನಾವು ಪ್ರೀತಿಯಿಂದ ಸಾಕಿದ ಹುಡುಗನ ಸಾಧನೆ ಕಂಡು ಹೆಮ್ಮೆಯಾಗುತ್ತದೆ. ಖುಷಿ ವರ್ಣಿಸಲು ಪದಗಳು ಸಿಗುತ್ತಿಲ್ಲ. ಚಿಕ್ಕಂದಿನಿಂದಲೂ ಬಹಳ ಬುದ್ಧಿವಂತ ಅವನು. ಮನೆಯವರು ಹಾಗೂ ಶಾಲೆಯ ಕೆಲವೇ ಸ್ನೇಹಿತರೊಂದಿಗೆ ಆಡುತ್ತಿದ್ದ. ಓದಿನತ್ತ ಹೆಚ್ಚಿನ ಗಮನ ಕೊಡುತ್ತಿದ್ದ. ನನಗಿಂತಲೂ ಹೆಚ್ಚಿನದ್ದನ್ನು ಸಾಧಿಸಬೇಕು ಎಂದು ಹೇಳುತ್ತಿದ್ದೆ. ಹಾಗೆಯೇ ಮಾಡಿದ್ದಾನೆ’ ಎಂದು ಸಂತಸ ಹಂಚಿಕೊಂಡರು.
**
ಚಿಕ್ಕಮಗಳೂರು: ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಕಡೂರು ತಾಲ್ಲೂಕಿನ ಸಖರಾಯಪಟ್ಟಣದ ಪ್ರೀತಂ ಎಸ್. ಅವರು 654ನೇ ರ‍್ಯಾಂಕ್‌ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಪ್ರೀತಂ ಅವರು ಕಾಫಿ ಮಂಡಳಿ ಉದ್ಯೋಗಿ ಶಿವಮೂರ್ತಿ ಮತ್ತು ಯಶೋಧಾ ದಂಪತಿ ಮಗ.


ಪ್ರೀತಂ ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT