ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈನಲ್ಲಿ ಭಾರತೀಯ ಮೂಲದ ಬಾಲಕಿಗೆ ಲೈಂಗಿಕ ಕಿರುಕುಳ

ಲಿಫ್ಟ್‌ನಲ್ಲಿ ಕೊರಿಯರ್ ವ್ಯಕ್ತಿಯಿಂದ ಕೃತ್ಯ
Last Updated 6 ಸೆಪ್ಟೆಂಬರ್ 2019, 12:34 IST
ಅಕ್ಷರ ಗಾತ್ರ

ದುಬೈ(ಪಿಟಿಐ): ಲಿಫ್ಟ್‌‌ನಲ್ಲಿ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬ ದುಬೈ ಹೈಕೋರ್ಟ್‌ನ ಶಿಕ್ಷೆಗೆ ಗುರಿಯಾಗಿದ್ದಾನೆ.

ದುಬೈ ಸರ್ಕಾರಿ ವಕೀಲರ ಪ್ರಕಾರ, ಯಾವ ಪ್ರಕಾರದ ಶಿಕ್ಷೆಗೆ ಒಳಪಡುತ್ತಾನೆ ಎಂಬುದನ್ನು ದುಬೈ ಹೈಕೋರ್ಟ್ ಸೆಪ್ಟೆಂಬರ್ 16ರಂದು ಪ್ರಕಟಿಸಲಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೊರಿಯರ್ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ 35 ವರ್ಷದವನು. ಈತ ಜೂನ್ 16ರಂದು ಅಪಾರ್ಟ್‌ಮೆಂಟ್‌ನ ಲಿಫ್ಟ್ ಒಂದರಲ್ಲಿಭಾರತೀಯ ಮೂಲದ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಅಸಭ್ಯವಾಗಿ ವರ್ತಿಸಿದ್ದ. ಈ ಘಟನೆಯಿಂದಾಗಿ ಬಾಲಕಿ ಗಾಬರಿಗೊಂಡು ಅಳುತ್ತಾ, ಭಯದಿಂದ ನಡುಗುತ್ತಿದ್ದಳು. ತಕ್ಷಣಕ್ಕೆ ಹತ್ತಿರದಲ್ಲಿಯೇ ಭೇಟಿಯಾದ ಗೃಹಿಣಿಗೆ ಆತ ಎಸಗಿದ ಕೃತ್ಯವನ್ನು ಬಾಲಕಿ ವಿವರಿಸಿದ್ದಳು. ಆಗ ಗೃಹಿಣಿ ಅಪಾರ್ಟ್‌ಮೆಂಟ್‌ ಭದ್ರತಾ ಸಿಬ್ಬಂದಿ ಬಳಿ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಕೋರಿದರು. ಸಿಬ್ಬಂದಿ ಪರಿಶೀಲಿಸಿದಾಗ ಆ ವ್ಯಕ್ತಿ 5ನೇ ಅಂತಸ್ತಿನಲ್ಲಿ ತನ್ನ ಕೆಲಸ ಇದ್ದರೂ ಆ ಭಾಗದ ಲಿಫ್ಟ್‌ನಲ್ಲಿ ಹೋಗದೆ, ಬಾಲಕಿಯನ್ನೇ ಹಿಂಬಾಲಿಸಿ ಹೋಗುತ್ತಿರುವ ದೃಶ್ಯಾವಳಿಗಳು ಕಂಡು ಬಂದವು. ಕೂಡಲೆ ಬಾಲಕಿಯ ಪೋಷಕರಿಗೆ ವಿಷಯ ತಿಳಿಸಲಾಯಿತು. ನಂತರ ವ್ಯಕ್ತಿ ವಿರುದ್ಧ ಅಲ್ -ರಫಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು.

ಪೊಲೀಸರು ಕೂಡಲೆ ಆ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ದುಬೈ ಹೈಕೋರ್ಟ್ ಶಿಕ್ಷೆ ವಿಧಿಸುವುದಾಗಿ ತಿಳಿಸಿದೆ.

ಬಾಲಕಿ ಮನೆ ಪಾಠಕ್ಕೆಂದು ಅಪಾರ್ಟ್‌ಮೆಂಟ್‌ಗೆ ಬಂದಿದ್ದಳು. ಪಾಠ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭದಲ್ಲಿ ಪುಸ್ತಕವೊಂದನ್ನು ಮರೆತಿದ್ದರಿಂದ ಶಿಕ್ಷಕಿಯ ಮನೆಗೆ ವಾಪಸ್ ಹೋಗಲು ಲಿಫ್ಟ್‌ ಏರಿದ್ದಳು. ಈ ಸಮಯದಲ್ಲಿ ಈ ಕೃತ್ಯ ನಡೆದಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT