ಮಂಗಳವಾರ, ನವೆಂಬರ್ 12, 2019
27 °C

ಭಾರತದ 17 ಶಾಂತಿಪಾಲಕರಿಗೆ ವಿಶ್ವಸಂಸ್ಥೆಯ ಸೇವಾ ಪದಕ

Published:
Updated:

ವಿಶ್ವಸಂಸ್ಥೆ: ದಕ್ಷಿಣ ಸುಡಾನ್‌ನಲ್ಲಿ ಶಾಂತಿಪಾಲನೆಗಾಗಿ ನಿಯೋಜಿಸಲಾಗಿದ್ದ ಭಾರತದ 17 ಪೊಲೀಸ್‌ ಅಧಿಕಾರಿಗಳಿಗೆ ವಿಶ್ವಸಂಸ್ಥೆ ‘ಸೇವಾ ಪದಕ’ ಪ್ರದಾನ ಮಾಡಿದೆ.

‘ವಿಶ್ವಸಂಸ್ಥೆಯ ಪೊಲೀಸ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಭಾರತದ 17 ಶಾಂತಿಪಾಲಕರು, ನಿರಾಶ್ರಿತರ ರಕ್ಷಣೆ, ಸ್ಥಳೀಯ ಪೊಲೀಸ್ ಕೌಶಲ ಅಭಿವೃದ್ಧಿಗಾಗಿ ಸಲ್ಲಿಸಿದ ಸೇವೆ ಗುರುತಿಸಿ ಪದಕ ಪ್ರದಾನ ಮಾಡಲಾಗಿದೆ’ ಎಂದು ವಿಶ್ವಸಂಸ್ಥೆಯ ದಕ್ಷಿಣ ಸುಡಾನ್‌ ನಿಯೋಗ (ಯುಎನ್‌ಎಂಐಎಸ್‌ಎಸ್‌) ಟ್ವೀಟ್ ಮಾಡಿದೆ.

ದಕ್ಷಿಣ ಸುಡಾನ್ ರಾಜಧಾನಿ ಜುಬಾದಲ್ಲಿನ ವಿಶ್ವಸಂಸ್ಥೆ ಕಚೇರಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ಭಾರತೀಯ ಪೊಲೀಸ್ ಅಧಿಕಾರಿಗಳಲ್ಲಿ ಮಹಿಳೆಯರು ಸಹ ಇದ್ದರು. 

‘ಈ ದೇಶದಲ್ಲಿ ಶಾಂತಿ, ಸ್ಥಿರತೆ ನೆಲೆಸುವುದಕ್ಕೆ ನೆರವಾಗುವ ಸಲುವಾಗಿ ನಾವು ಇಲ್ಲಿದ್ದೇವೆ’ ಎಂದು ದಕ್ಷಿಣ ಸುಡಾನ್‌ನಲ್ಲಿ ಭಾರತದ ರಾಯಭಾರಿ ಎಸ್‌.ಡಿ. ಮೂರ್ತಿ ಅವರು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ನಿಯೋಗಕ್ಕೆ ದೊಡ್ಡ ಮಟ್ಟದಲ್ಲಿ ಶಾಂತಿಪಾಲಕರ ಕೊಡುಗೆ ನೀಡುವ ರಾಷ್ಟ್ರಗಳಲ್ಲಿ ಪ್ರಸ್ತುತ ಭಾರತ ಎರಡನೇ ಸ್ಥಾನದಲ್ಲಿದೆ. ಈ ವರ್ಷದ ಮಾರ್ಚ್ ವೇಳೆಗೆ ಭಾರತದ 2,337 ಜನರು ಯುಎನ್‌ಎಂಐಎಸ್‌ಎಸ್‌ಗೆ ನಿಯೋಜನೆ ಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)