ಗುರುವಾರ , ನವೆಂಬರ್ 21, 2019
27 °C

ಪಾಕ್‌ನ ಗುರುದ್ವಾರಕ್ಕೆ ಭಾರತದ ಸಿಖ್ ಯಾತ್ರಾರ್ಥಿಗಳ ಭೇಟಿ

Published:
Updated:

ಇಸ್ಲಾಮಾಬಾದ್: ಪಾಕಿಸ್ತಾನದ ಹಸನಬ್‌ದಲ್ ನಗರದ ಗುರುದ್ವಾರ ಪೂಂಜಾ ಸಾಹಿಬ್‌ಗೆ ಭಾನುವಾರ ಭಾರತದ ಸಾವಿರಕ್ಕೂ ಹೆಚ್ಚು ಸಿಖ್ ಯಾತ್ರಾರ್ಥಿಗಳು ಭೇಟಿ ನೀಡಿದರು.

ಗುರುನಾನಕ್ ದೇವ್ ಅವರ 550ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ನಗರ್ ಕೀರ್ತನ್‌ ಮೆರವಣಿಗೆಯಲ್ಲಿ ಯಾತ್ರಾರ್ಥಿಗಳು ಪಾಲ್ಗೊಂಡರು. 

ಪಂಜಾಬ್ ಪ್ರಾಂತ್ಯದ ಗುರುದ್ವಾರವನ್ನು ವಿವಿಧ ಬಣ್ಣದ ದೀಪಗಳಿಂದ ಅಲಂಕರಿಸಲಾಗಿದ್ದು, ಯಾತ್ರಾರ್ಥಿಗಳು ವಿವಿಧ ಧಾರ್ಮಿಕ ವಿಧಿ–ವಿಧಾನಗಳನ್ನು ನೆರವೇರಿಸಿದರು.  

ಅಕ್ಟೋಬರ್ 31ರಂದು ಲೂಧಿಯಾನ ಮತ್ತು ಅಮೃತಸರದ ಮೂಲಕ 1,100ಕ್ಕೂ ಹೆಚ್ಚು ಸಿಖ್ ಯಾತ್ರಾರ್ಥಿಗಳು ವಾಘಾ ಗಡಿ ದಾಟಿದ್ದಾರೆ ಎಂದು ಇವಾಕ್ಯೂ ಟ್ರಸ್ಟ್‌ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಉಪಕಾರ್ಯದರ್ಶಿ ಇಮ್ರಾನ್ ಗೊಂಡಾಲ್ ಮಾಹಿತಿ ನೀಡಿದ್ದಾರೆ. 

ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧ್ ಸಮಿತಿ ಮತ್ತು ಸ್ಥಳೀಯ ಜಿಲ್ಲಾಡಳಿತದ ಸಹಯೋಗದಲ್ಲಿ ಭಾರತೀಯ ಮತ್ತು ಸ್ಥಳೀಯ ಸಿಖ್ ಯಾತ್ರಾರ್ಥಿಗಳಿಗೆ ಭದ್ರತೆ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು. 

ಸಿಖ್ ಯಾತ್ರಾರ್ಥಿಗಳು ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು. ಕರ್ತಾರಪುರದ ಗುರುದ್ವಾರ ದರ್ಬಾರ್ ಸಾಹಿಬ್‌ನಲ್ಲಿ ಯಾತ್ರೆ ಮುಕ್ತಾಯವಾಗಲಿದೆ.

ನ. 9ರಂದು ಕರ್ತಾರಪುರ ಕಾರಿಡಾರ್ ಉದ್ಘಾಟನೆಯಾಗಲಿದೆ.

ಪ್ರತಿಕ್ರಿಯಿಸಿ (+)