ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕನಾಗಿ ಮಾಡಿದ ದೊಡ್ಡಗೌಡರ ಭಾಷಣ

ಎಚ್‌.ಎಸ್.ಪ್ರಕಾಶ್‌ಗೆ ನೆಲೆ ನೀಡಿದ ಜೆಡಿಎಸ್‌
Last Updated 7 ಮಾರ್ಚ್ 2018, 10:31 IST
ಅಕ್ಷರ ಗಾತ್ರ

ಹಾಸನ: ‘ರಾಜಕೀಯ ಪ್ರವೇಶಕ್ಕೆ ದೊಡ್ಡಗೌಡರ (ಎಚ್‌.ಡಿ.ದೇವೇಗೌಡ) ಭಾಷಣಗಳೇ ಪ್ರೇರಣೆ. ಮೊದಲ ಪ್ರಯತ್ನದಲ್ಲಿಯೇ ಶಾಸಕನಾದಾಗ ಜಿಲ್ಲೆಯವರೇ ಮುಖ್ಯಮಂತ್ರಿ ಮತ್ತು ಪ್ರಧಾನಿ ಆಗಿದ್ದರು. ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದು ನನ್ನ ಸೌಭಾಗ್ಯ..’ ಎಂದು ಶಾಸಕ ಎಚ್‌.ಎಸ್‌.ಪ್ರಕಾಶ್‌ ಸ್ಮರಿಸಿದರು.

ಹಿರಿಯ ರಾಜಕೀಯ ಮುತ್ಸದ್ಧಿ ಎಚ್‌.ಡಿ.ದೇವೇಗೌಡರ ಗರಡಿಯಲ್ಲಿ ಪಳಗಿದ ಎಚ್‌.ಎಸ್‌.ಪ್ರಕಾಶ್‌, ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.

ತಂದೆ ಸಣ್ಣಯ್ಯ ಅವರು ಪುರಸಭೆ ಸದಸ್ಯರಾಗಿದ್ದರು. ಸ್ನೇಹಿತರ ಸಲಹೆಯಂತೆ 1983ರಲ್ಲಿ ನಗರಸಭೆಗೆ ಸ್ಪರ್ಧಿಸಿ ಆಯ್ಕೆ ಆದರು. 1985ರಲ್ಲಿ ಅಧ್ಯಕ್ಷ ಗಾದಿಯೂ ಒಲಿದು ಬಂತು. 1994ರಲ್ಲಿ ಮೊದಲ ಪ್ರಯತ್ನದಲ್ಲಿಯೇ ವಿಧಾನಸಭೆ ಪ್ರವೇಶಿಸಿದರು.

1999ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಕಾಶ್‌ ಸೋಲುತ್ತಾರೆ. ಮತ್ತೆ 2000 ರಿಂದ ಈಚೆಗೆ ನಡೆದ ಮೂರು ಚುನಾವಣೆಯಲ್ಲಿ ಸತತವಾಗಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.

ನಾಲ್ಕು ಚುನಾವಣೆಯಲ್ಲಿ ಗೆಲುವು ಸಾಧಿಸಿ ಕ್ಷೇತ್ರದ ಹಿಡಿತವನ್ನು ಇನ್ನಷ್ಟು ಬಲ ಪಡಿಸಿಕೊಂಡರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಗ್ರೀನ್ ಸಿಗ್ನಲ್‌ ನೀಡಿದೆ.

‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇವೇಗೌಡರು ಭಾಷಣ ಮಾಡುತ್ತಿದ್ದರು. ಅವರ ಭಾಷಣವೇ ನನ್ನನ್ನು ರಾಜಕೀಯದತ್ತ ಆಕರ್ಷಿಸಿತು. ವಿದ್ಯಾರ್ಥಿ ದೆಸೆಯಿರುವಾಗಲೇ ಹೋರಾಟದಲ್ಲಿ ಭಾಗವಹಿಸುತ್ತಿದ್ದೆ. ಮುನಿವೆಂಕಟೇಗೌಡರು ವಿಧಾನಸಭೆಗೆ ಸ್ಪರ್ಧಿಸಿದಾಗ ಅವರ ಪರವಾಗಿ ಮತಯಾಚಿಸಿದೆ. 1994ರಲ್ಲಿ ಅದೃಷ್ಟ ನನ್ನ ಮನೆ ಬಾಗಿಲಿಗೆ ಬಂತು. ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದರೂ, ಅವರ ಮನವೊಲಿಸಿ, ಗೌಡರೇ ನನ್ನ ಮನೆಗೆ ಬಂದು ಬಿ.ಫಾರಂ ನೀಡಿದರು. ಆಗ ಪ್ರತಿ ಗ್ರಾಮದಲ್ಲೂ ಜನರೇ ಹಣ ಸಂಗ್ರಹಿಸಿ ಚುನಾವಣೆ ವೆಚ್ಚಕ್ಕೆ ನೀಡಿದರು. ಮೊದಲ ಪ್ರಯತ್ನದಲ್ಲಿಯೇ ಗೆಲುವು ಸಾಧಿಸಿದೆ’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

‘ಶಾಸಕನಾದಾಗ ದೇವೇಗೌಡರು ಮುಖ್ಯಮಂತ್ರಿ, ನಂತರ ಪ್ರಧಾನಿ ಹುದ್ದೆ ಅಲಂಕರಿಸಿದರು. ಇದಕ್ಕೂ ಮುನ್ನ ದೆಹಲಿ ನೋಡಿರಲಿಲ್ಲ. ನಂತರ ದೇಶ, ವಿದೇಶಗಳಿಗೆ ಅಧ್ಯಯನ ಪ್ರವಾಸ ಹೋಗುವ ಅವಕಾಶ ದೊರೆಯಿತು. ಐದು ಚುನಾವಣೆಯಲ್ಲಿ ನಾಲ್ಕು ಗೆಲುವು, ಒಂದು ಸೋಲು. ಮುಂದಿನ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಶಕ್ತಿ ಇದೆ’ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

‘ಕುಮಾರಸ್ವಾಮಿ ಸರ್ಕಾರದಲ್ಲಿ ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆಗ ಕ್ಷೇತ್ರದಲ್ಲಿ ವೈದ್ಯಕೀಯ ಕಾಲೇಜು, ಎಂಜಿನಿಯರ್‌ ಕಾಲೇಜು, ಕಾನೂನು ಕಾಲೇಜು, ಪಶುವೈದ್ಯಕೀಯ ಕಾಲೇಜು ಸ್ಥಾಪನೆ ಆಯಿತು. ಕುಡಿಯುವ ನೀರು, ಒಳಚರಂಡಿಗೂ ಆದ್ಯತೆ ನೀಡಲಾಯಿತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT