ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಅಂತರರಾಷ್ಟ್ರೀಯ ಪ್ರವಾಸೋದ್ಯಮ ಶೇ 80ರಷ್ಟು ಕುಸಿಯುವ ಆತಂಕ

Last Updated 11 ಮೇ 2020, 11:37 IST
ಅಕ್ಷರ ಗಾತ್ರ

ವಿಶ್ವ ಸಂಸ್ಥೆ: ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಶೇ 60ರಿಂದ 80ರಷ್ಟು ಕುಸಿತ ಕಾಣಲಿದೆ. ಇದರಿಂದಾಗಿ 910 ಬಿಲಿಯನ್‌ ಡಾಲರ್‌ನಿಂದ (₹69 ಲಕ್ಷ ಕೋಟಿ)1.2 ಟ್ರಿಲಿಯನ್‌ ಡಾಲರ್‌ನಷ್ಟು(₹90.9 ಲಕ್ಷ ಕೋಟಿ) ಆದಾಯ ನಷ್ಟವಾಗಲಿದ್ದು, ಲಕ್ಷಾಂತರ ಜನರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) ಹೇಳಿದೆ.

ಜಗತ್ತಿನಾದ್ಯಂತ 41 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದೆ ಹಾಗೂ 2,82,719 ಮಂದಿ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 13 ಲಕ್ಷ ದಾಟಿದ್ದು, ಸೋಂಕಿನಿಂದ 80,000 ಜನ ಮೃತಪಟ್ಟಿದ್ದಾರೆ.

2020ರ ಮೊದಲ ತ್ರೈಮಾಸಿಕದಲ್ಲೇ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಶೇ 22ರಷ್ಟು ಕುಸಿತ ಕಂಡಿದೆ. 2019ರ ಪ್ರವಾಸೋದ್ಯಮ ಪ್ರಮಾಣಕ್ಕೆ ಹೋಲಿಸಿದರೆ, ಜಾಗತಿಕ ಆರೋಗ್ಯ ಬಿಕ್ಕಟ್ಟು ವಾರ್ಷಿಕ ಪ್ರವಾಸೋದ್ಯಮ ಶೇ 60ರಿಂದ 80ರಷ್ಟು ಇಳಿಕೆಯಾಗಲಿದೆ ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ಹೇಳಿದೆ.

ಹೆಚ್ಚಿನವರಿಗೆ ಜೀವನಾಧಾರವಾಗಿರುವ ಪ್ರವಾಸೋದ್ಯಮ, ಈಗ ಕುಸಿತದ ಹಾದಿಯಲ್ಲಿರುವುದರಿಂದ ಲಕ್ಷಾಂತರ ಜನರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಬಹುತೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್‌ ಜಾರಿಯಾದ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಶೇ 57ರಷ್ಟು ಇಳಿಕೆಯಾಗಿದೆ. ಸಂಚಾರ ನಿರ್ಬಂಧ, ವಿದೇಶ ಪ್ರಯಾಣ ಹಾಗೂ ವಿಮಾನ ಹಾರಾಟಗಳ ನಿಷೇಧದಿಂದ ಪ್ರವಾಸೋದ್ಯಮ ತತ್ತರಿಸಿದೆ. ವಿದೇಶ ಪ್ರಯಾಣಗಳ ನಿರ್ಬಂಧದಿಂದಾಗಿ 80 ಬಿಲಿಯನ್‌ ಡಾಲರ್‌ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ಕೊರೊನಾ ಬಿಕ್ಕಟ್ಟು ಹಾಗೂ ಲಾಕ್‌ಡೌನ್‌ ಆಧರಿಸಿ ಮೂರು ರೀತಿಯ ಚಿತ್ರಣಗಳನ್ನು ಸಂಸ್ಥೆ ನೀಡಿದೆ. ಮೊದಲನೆಯದು, ಜುಲೈನಿಂದ ಅಂತರರಾಷ್ಟ್ರೀಯ ಗಡಿಗಳು ಸಂಚಾರಕ್ಕೆ ಮುಕ್ತವಾಗಿ, ಪ್ರಯಾಣದ ನಿರ್ಬಂಧಗಳು ಸಡಿಲಗೊಂಡರೆ; ಶೇ 58ರಷ್ಟು ಪ್ರವಾಸೋದ್ಯಮ ಇಳಿಕೆಯಾಗಲಿದೆ. ಎರಡನೆಯದು, ಸೆಪ್ಟೆಂಬರ್‌ನಿಂದ ನಿರ್ಬಂಧ ಸಡಿಲಗೊಂಡರೆ ಶೇ 70ರಷ್ಟು ಕಡಿಮೆಯಾಗಲಿದೆ. ಮೂರನೇಯದು, ನವೆಂಬರ್‌ ವರೆಗೂ ನಿರ್ಬಂಧ ಮುಂದುವರಿದು ಡಿಸೆಂಬರ್‌ನಿಂದ ಸಡಿಲಗೊಂಡರೆ, ಶೇ 78ರಷ್ಟು ಅಂತರರಾಷ್ಟ್ರೀಯ ಪ್ರವಾಸಕ್ಕೆ ಹೊಡೆತ ಬೀಳಲಿದೆ.

2020ರ ಅಂತ್ಯಕ್ಕೆ ಏಷ್ಯಾ, ಯುರೋಪ್‌, ಮಧ್ಯ ಪ್ರಾಚ್ಯ ಹಾಗೂ ಆಫ್ರಿಕಾದಲ್ಲಿ ಚೇತರಿಕೆ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಅಮೆರಿಕದಲ್ಲಿ ಈ ವರ್ಷವೇ ಚೇತರಿಕೆ ಕಾಣುವ ಸಂಭವ ಕಡಿಮೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT