ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳಿಗೆ ಮತ್ತೆ ಬಂತು ಜೀವ..!

ಅರಣ್ಯ ಇಲಾಖೆ ಮಾದರಿ ಕಾರ್ಯ: ಹೆದ್ದಾರಿ ಬದಿಯ ಮರಗಳ ಸ್ಥಳಾಂತರ
Last Updated 15 ಜೂನ್ 2018, 13:04 IST
ಅಕ್ಷರ ಗಾತ್ರ

ಕೊಪ್ಪಳ: ರಸ್ತೆ ವಿಸ್ತರಣೆಗೆ ಸಾವಿರಾರು ಮರಗಳ ಮಾರಣಹೋಮ ನಡೆಯುವುದು ಪರಿಸರವಾದಿಗಳನ್ನು ಒಂದೆಡೆ ಚಿಂತೆಗೀಡು ಮಾಡಿದರೆ, ಮತ್ತೊಂದೆಡೆ ಮರಗಳನ್ನು ಕಡಿಯದೆ ಸ್ಥಳಾಂತರಗೊಳಿಸಿ ಮರುಜೀವ ನೀಡುತ್ತಿರುವುದಕ್ಕೆ ಜಿಲ್ಲೆಯಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ–63ರಲ್ಲಿ ಹೊಸಪೇಟೆಯಿಂದ-ಹುಬ್ಬಳ್ಳಿ ವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ರಸ್ತೆ ಬದಿ ಇರುವ ಮರಗಳನ್ನು ಬೃಹತ್ ಯಂತ್ರಗಳ ಮೂಲಕ ನೆಲಸಮ ಮಾಡುವ ಕೆಲಸ ನಡೆದದಿತ್ತು.

ಆದರೆ, ಸಕಾಲದಲ್ಲಿ ಅರಣ್ಯ ಇಲಾಖೆಯು ಮಧ್ಯಪ್ರವೇಶಿಸಿತು. ಮರಗಳ ರಕ್ಷಣಾ ಪ್ರಕ್ರಿಯೆಗೆ ಚಾಲನೆ ನೀಡಿತು. ಮರಗಳನ್ನು ಸ್ಥಳಾಂತರಗೊಳಿಸಿ, ಮರುಜೀವ ನೀಡಲು ಪ್ರಯತ್ನಿಸಲಾಯಿತು.

ಕೊಪ್ಪಳ ಹೊರವಲಯದ ಮುನಿರಾಬಾದ್ ರಸ್ತೆಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ಕಡ್ಡಾಯವಾಗಿತ್ತು. 'ಈಗ ನೆರಳು ನೀಡುವ ಮರಗಳನ್ನು ಕಡಿದು ಹಾಕದೆ, ಪರ್ಯಾಯ ವ್ಯವಸ್ಥೆ ಮಾಡಿದರೆ ಮಾತ್ರ ಅನುಮತಿ ಕೊಡಲಾಗುವುದು’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಯಿತು. ಇದರಿಂದಾಗಿ ಸುಮಾರು 50 ಮರಗಳು ಜೀವ ಉಳಿಸಿಕೊಂಡಿವೆ.

ಏನಿದು ಟ್ರೀ ಟ್ರಾನ್ಸ್‌ಪ್ಲಾಂಟೇಶನ್: ರಸ್ತೆ ಬದಿಯ ಹಾಗೂ ಬಹು ಉಪಯೋಗಿ ಮರಗಳನ್ನು ಕಡಿಯದೇ ಯಥಾಸ್ಥಿತಿಯಲ್ಲಿ ಕಿತ್ತು ಬೇರೆಡೆ ಸ್ಥಳಾಂತರಿಸಿ, ಬೆಳೆಸುವುದೇ ಟ್ರೀ ಟ್ರಾನ್ಸ್‌ಪ್ಲಾಂಟೇಶನ್.

ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಶೇ 90ರಷ್ಟು ಕಾರ್ಯ ಯಶಸ್ಸಿಯಾಗಿರುವುದು ಹಸಿರು ವಾತಾವರಣ ನಿರ್ಮಾಣಗೊಂಡಿದೆ. ಇದೇ ಮಾದರಿಯಲ್ಲಿ ಅರಣ್ಯ ಇಲಾಖೆ ಸೂಚನೆ ಮೇರೆಗೆ ಹೆದ್ದಾರಿ ಪ್ರಾಧಿಕಾರದ ಸಂಪನ್ಮೂಲ ಬಳಸಿಕೊಂಡು 50 ಮರಗಳನ್ನು ಸ್ಥಳಾಂತರಿಸಿ ನೆಡಲಾಗಿದೆ. 30ಕ್ಕೂ ಹೆಚ್ಚು ಮರಗಳು ಚಿಗುರೊಡೆದಿವೆ.

‘ಬೇರು ಸಹಿತ ಮರವನ್ನು ಕಿತ್ತು, ನಿಗದಿತ ಜಾಗದಲ್ಲಿ ಗುಂಡಿ ತೋಡಿ, ಗೊಬ್ಬರ ಹಾಗೂ ರೂಟ್ ಪ್ಲಾಂಟೇಶನ್ ಮಾಡಿ ನೆಡಲಾಯಿತು. ನಂತರ ತೀವ್ರ ನಿಗಾವಹಿಸಿ, ನೀರು ಹಾಕಿ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿ ಕೆಲಸ ನಿರ್ವಹಿಸಿದರು’ ಎಂದು ಕೊಪ್ಪಳ, ಯಲಬುರ್ಗಾ ಅರಣ್ಯ ಇಲಾಖೆಯ ವಲಯ ಅಧಿಕಾರಿ ಎ.ಎಚ್.ಮುಲ್ಲಾ ಹೇಳಿದರು.

‘ಮೊದಲೇ ನಮ್ಮ ಜಿಲ್ಲೆ ಬರಗಾಲಕ್ಕೆ ಹೆಸರುವಾಸಿ. ಪರಿಸರ ಪ್ರಜ್ಞೆಯೂ ಕಡಿಮೆ. ಅಂತರ್ಜಲ ಸಮಸ್ಯೆ ಕೂಡ ಹೆಚ್ಚುತ್ತಲೇ ಇದೆ. ಹೀಗಾಗಿ ಮರಗಳನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯ. ಇದರಿಂದ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದು ಮುಲ್ಲಾ ತಿಳಿಸಿದರು.

ನಳನಳಿಸತ್ತಿರುವ ಮರ...

ಸಸಿ ನೆಡುವುದು ಸಾಮಾನ್ಯ, ಮರ ನೆಡುವುದು ಸಾಧ್ಯವಿಲ್ಲದ ಮಾತು ಎಂಬುವುದನ್ನು ಆಧುನಿಕ ತಂತ್ರಜ್ಞಾನ ಸುಳ್ಳಾಗಿಸಿದೆ. ಪಾಶ್ಚಾತ್ಯರಲ್ಲಿ ಜನಪ್ರಿಯಗೊಂಡ ಟ್ರೀ ಟ್ರಾನ್ಸ್‌ಪ್ಲಾಂಟೇಶನ್ ವಿಧಾನವನ್ನು ದೇಶದ ವಿವಿಧ ಭಾಗಗಳಲ್ಲಿ ಅಳವಡಿಸಿಕೊಳ್ಳಲಾಗಿತ್ತು.

ರಾಜ್ಯದಲ್ಲಿ ಇಂತಹ ಪ್ರಯತ್ನ ಬಳ್ಳಾರಿ, ಗದಗ, ಹುಬ್ಬಳ್ಳಿ, ಕೊಪ್ಪಳದಲ್ಲಿಯೂ ನಡೆದಿದೆ. ಮರಗಳನ್ನು ನೆಡಲು ಈಗ ಬೃಹತ್ ಯಂತ್ರಗಳೇ ಬಂದಿವೆ. ಅವುಗಳನ್ನು ಬೃಹತ್ ಕಾಮಗಾರಿ ಮಾಡುವ ಕಂಪೆನಿಗಳು ಬಳಸಿಕೊಂಡು ಪರಿಸರವನ್ನು ಉಳಿಸಬೇಕು ಎಂಬುದು ಪರಿಸರಪ್ರಿಯರ ವಾದವಾಗಿದೆ.

ಈಗ ಇಲ್ಲಿ ಸ್ಥಳಾಂತರಿಸಿ ನೆಟ್ಟಿರುವ ಮರಗಳಿಗೆ ಮತ್ತೆ ಜೀವ ಬಂದಿದೆ. ಚಿಗುರೆಲೆ ಒಡೆದಿದ್ದು, ಹಸಿರಿನಿಂದ ನಳನಳಿಸುತ್ತಿವೆ. ರಸ್ತೆಯ ಇಕ್ಕೆಲದಲ್ಲಿ ಬಿಸಿಲಿನ ದಾಹದಿಂದ ಬಳಲಿದ ಜೀವಸಂಕುಲಕ್ಕೆ ತಂಪನ್ನೆರುವ ಕಾರ್ಯಕ್ಕೆ ಶಿಸ್ತಿನ ಸಿಪಾಯಿಗಳಂತೆ ತಲೆ ಎತ್ತಿ ನಿಂತು ನೋಡುಗರಲ್ಲಿ ಸಂತೃಪ್ತಿ ಮೂಡಿಸಿವೆ.

ವಿವಿಧ ಇಲಾಖೆಯ ಸಹಯೋಗದೊಂದಿಗೆ ಅರಣ್ಯ ಪ್ರದೇಶ ವೃದ್ಧಿಸುವ ಗುರಿ ಹಂದಿದ್ದೇವೆ. ಗಿಡಮರಗಳನ್ನು ರಕ್ಷಿಸುವ ಪ್ರಕ್ರಿಯೆಯಲ್ಲಿ ವಿವಿಧ ಪ್ರಯೋಗಗಳನ್ನು ಮಾಡುತ್ತೇವೆ.
ಎ..ಎಚ್.ಮುಲ್ಲಾ, ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT