ಮಂಗಳವಾರ, ನವೆಂಬರ್ 12, 2019
19 °C

ಇರಾಕ್‌: ಮೂವರು ಪ್ರತಿಭಟನಕಾರರು ಬಲಿ

Published:
Updated:
Prajavani

ಬಾಗ್ದಾದ್‌: ಇರಾಕ್‌ನ ಪ್ರಮುಖ ಬಂದರು ಉಮ್ ಖಸ್ರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಭದ್ರತಾ ಪಡೆಗಳು ನಡೆಸಿದ ಗೋಲಿಬಾರ್‌ಗೆ ಮೂವರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ. ‌

ಉಮ್‌ ಖಸ್ರ್‌, ತೈಲ ರಫ್ತು ಮಾಡುವ ಇರಾಕ್‌ನ ಪ್ರಮುಖ ಬಂದರಾಗಿದ್ದು, ನಾಗರಿಕರು ಸರ್ಕಾರದ ನೀತಿಗಳನ್ನು ಖಂಡಿಸಿ ಬಂದರಿಗೆ ಮುತ್ತಿಗೆ ಹಾಕಿದ್ದರು. ಮೂರು ದಿನಗಳಿಂದ ವಹಿವಾಟಿಗೆ ತೊಂದರೆ ಆಗಿತ್ತು. ಹೀಗಾಗಿ ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದ್ದವು. ಶಸ್ತ್ರಾಸ್ತ್ರಗಳಿದ್ದ ವಾಹನವನ್ನು ವಶಪಡಿಸಿಕೊಳ್ಳಲು ಪ್ರತಿಭಟನಕಾರರು ಯತ್ನಿಸಿದಾಗ ಗೋಲಿಬಾರ್ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದಲ್ಲದೆ, ನಝರಿಯ ಪಟ್ಟಣದಲ್ಲಿ ನಡೆದ ಸಂಘರ್ಷದಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು, 23 ಮಂದಿ ಗಾಯಗೊಂಡಿದ್ದಾರೆ ಎಂದು ಇರಾಕ್‌ನ ಮಾನವ ಹಕ್ಕುಗಳ ಆಯೋಗ ತಿಳಿಸಿದೆ. 

ಇರಾಕ್‌ನಲ್ಲಿ ಆಡಳಿತ ವಿರೋಧಿ ಅಲೆಯಿದ್ದು, ಬಾಗ್ದಾದ್‌ ಸೇರಿದಂತೆ ದಕ್ಷಿಣ ಇರಾಕ್‌ನಲ್ಲಿ ಅಕ್ಟೋಬರ್‌ನಿಂದ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಅಮೆರಿಕ– ಇರಾಕ್‌ ಯುದ್ಧದ ನಂತರ 2003ರಿಂದ ಆಡಳಿತವನ್ನು ನಡೆಸಿದ ಎಲ್ಲ ಸರ್ಕಾರಗಳು ಭ್ರಷ್ಟಾಚಾರ ನಡೆಸಿವೆ ಎಂದು ಪ್ರತಿಭಟನಕಾರರು ಆರೋಪಿಸಿದ್ದು, ರಾಜಕೀಯ ಸುಧಾರಣೆ ಮತ್ತು ಆಡಳಿತಾತ್ಮಕ ಬದಲಾವಣೆಯನ್ನು ಬಯಸಿದ್ದಾರೆ. 

 

ಪ್ರತಿಕ್ರಿಯಿಸಿ (+)