ಗುರುವಾರ , ನವೆಂಬರ್ 21, 2019
20 °C

ಇಸ್ರೇಲ್‌: ಸರ್ಕಾರ ರಚನೆ ಕಸರತ್ತು ಆರಂಭ

Published:
Updated:

ಜೆರುಸಲೆಂ: ಚುನಾವಣಾ ನಂತರದ ರಾಜಕೀಯ ಅನಿಶ್ಚಿತತೆಯನ್ನು ಕೊನೆಗಾಣಿಸುವುದು ಮತ್ತು ಪ್ರಧಾನಿ ಅಭ್ಯರ್ಥಿಯ ಆಯ್ಕೆಗಾಗಿ ಇಸ್ರೇಲ್‌ ಅಧ್ಯಕ್ಷ ರುವೆನ್‌ ರಿವ್ಲಿನ್‌ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆಗೆ ಭಾನುವಾರ ತಮ್ಮ ನಿವಾಸದಲ್ಲಿ ಚರ್ಚೆ ಆರಂಭಿಸಿದರು.

ಪ್ರಸ್ತುತ ಸ್ಥಿರ ಸರ್ಕಾರವನ್ನು ರಚಿಸಲು ಅತ್ಯುತ್ತಮ ಅವಕಾಶವಿರುವುದರಿಂದ ಆಯ್ಕೆಯ ಪ್ರಶ್ನೆ ಪಕ್ಷದ ಅಧ್ಯಕ್ಷರ ಮುಂದಿದೆ. ಸಾಮಾನ್ಯವಾಗಿ ಇದು ಔಪಚಾರಿಕವಾದ ಕ್ರಮವಾಗಿದೆ. ಆದರೆ, ಪ್ರಸ್ತುತ ಹೊರಬಿದ್ದಿರುವ ಅನಿಶ್ಚಿತ ಫಲಿತಾಂಶದ ಹಿನ್ನೆಲೆಯಲ್ಲಿ ಅಧ್ಯಕ್ಷರ ಪಾತ್ರ ಮಹತ್ವ ಪಡೆದುಕೊಂಡಿದೆ.

ಕಳೆದ ವಾರ ಪ್ರಕಟವಾದ ಫಲಿತಾಂಶದ ಅನುಸಾರ, 120 ಸದಸ್ಯ ಬಲದ ಸಂಸತ್ತಿನಲ್ಲಿ ಬೆನ್ನಿ ಗಾಂಟ್ಜ್‌ ನೇತೃತ್ವದ ಬ್ಲೂ ಅಂಡ್‌ ವೈಟ್‌ ಪಕ್ಷವು 33 ಸ್ಥಾನಗಳನ್ನು ಗೆದ್ದರೆ, ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್‌ ಪಕ್ಷವು 31 ಸ್ಥಾನ ಗೆದ್ದಿದೆ.

ಸಣ್ಣ ಪಕ್ಷಗಳ ಜೊತೆಗಿನ ಮೈತ್ರಿ ನಂತರವೂ ಯಾವುದೇ ಪಕ್ಷಕ್ಕೆ ಸರಳ ಬಹುಮತ ಲಭಿಸಿಲ್ಲ. ಸದ್ಯ, ಪ್ರಮುಖ ಎರಡು ಪಕ್ಷಗಳು ಒಗ್ಗೂಡಿ ಸರ್ವಸಮ್ಮತ ಸರ್ಕಾರ ರಚನೆ ಸಾಧ್ಯತೆ ಕುರಿತು ಚರ್ಚೆ ನಡೆದಿದೆ. ಆದರೆ, ಉಭಯ ಪಕ್ಷಗಳು ಅದರ ನೇತೃತ್ವ ವಹಿಸಬೇಕು ಎಂದು ಪ‍ಟ್ಟುಹಿಡಿದಿವೆ. ಹೀಗಾಗಿ, ಅನಿಶ್ಚಿತತೆ ತಲೆದೋರಿದೆ.

‘ಪ್ರಸ್ತುತ ಸ್ಥಿತಿಯಲ್ಲಿ ಅಧ್ಯಕ್ಷರು ರಾಜಕೀಯ ಪಕ್ಷಗಳ ಮುಖಂಡರಿಗೆ, ಪರ್ಯಾಯ ಸಾಧ್ಯತೆಗಳನ್ನು ನಿಭಾಯಸಬಹುದಾದ ಸಾಮರ್ಥ್ಯವನ್ನು ಒಳಗೊಂಡಂತೆ ನಿರ್ದಿಷ್ಟ ಉತ್ತರಗಳನ್ನು ಬಯಸಿ ಪ್ರಶ್ನಿಸುವ ಸಾಧ್ಯತೆಗಳಿವೆ’ ಎಂದು ಅಧ್ಯಕ್ಷರ ಆಪ್ತರಾದ ಹರೇಲ್‌ ಟುಬಿ ಅವರು ಇಸ್ರೇಲ್‌ನ ಸೇನಾ ರೇಡಿಯೊಗೆ ಪ್ರತಿಕ್ರಿಯಿಸಿದ್ದಾರೆ.

ಅರಬ್‌ ಪಕ್ಷಗಳ ಒಕ್ಕೂಟವು 13 ಸ್ಥಾನಗಳಿಸಿದ್ದು, ಯಿಸ್ರೇಲ್‌ ಬಿಟೆನು ಪಕ್ಷ 8 ಸ್ಥಾನಗಳಿಸಿದೆ. ಸರ್ಕಾರ ರಚನೆಯಲ್ಲಿ ಈ ಪಕ್ಷಗಳು ನಿರ್ಣಾಯಕ ಪಾತ್ರವನ್ನು ವಹಿಸಲಿವೆ.

ಪ್ರತಿಕ್ರಿಯಿಸಿ (+)