ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾಗೆ ಇಟಲಿ ಲಸಿಕೆ ನಿಯಂತ್ರಣ: ಇಲಿಗಳ ಮೇಲೆ ಯಶಸ್ವಿ ಪ್ರಯೋಗ

Last Updated 6 ಮೇ 2020, 1:47 IST
ಅಕ್ಷರ ಗಾತ್ರ

ರೋಮ್: ಕೋವಿಡ್–19 (ಕೊರೊನಾ ವೈರಸ್ ಸೋಂಕು) ಕಾಯಿಲೆಗೆ ಇಟಲಿ ಅಭಿವೃದ್ಧಿಪಡಿಸಿರುವ ಲಸಿಕೆಯು ಇಲಿಗಳಲ್ಲಿ ರೋಗನಿರೋಧಕ ಕಣಗಳನ್ನು ಉತ್ಪತ್ತಿ ಮಾಡಿದೆ. ಈ ಕಣಗಳು ಮನುಷ್ಯನ ಜೀವಕೋಶದಲ್ಲಿಯೂ ಕೊರೊನಾ ವೈರಾಣುಗಳನ್ನು ಕೊಲ್ಲಬಲ್ಲದು ಎನ್ನಲಾಗಿದೆ. ರೋಮ್‌ನ ಸ್ಪಲ್ಲಾಂಝಾನಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಪ್ರಯೋಗಗಳನ್ನು ನಡೆಸಲಾಗಿದೆ.

‘ಮನುಷ್ಯನ ಜೀವಕೋಶಗಳಲ್ಲಿ ಈ ಔಷಧಿಯು ಕೊರೊನಾ ವೈರಾಸ್ ರೋಗಾಣುಗಳನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ ಎಂದು ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಟಕೀಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲ್ಯುಗಿ ಔರಿಸಿಚಿಯೊ ಹೇಳಿದ್ದಾರೆ.

ಇಟಲಿಯಲ್ಲಿ ತಯಾರಾದ ಲಸಿಕೆಯೊಂದರ ಅತ್ಯುನ್ನತ ಹಂತದ ಪರೀಕ್ಷೆಯಿದು. ಬೇಸಿಗೆಯಲ್ಲಿ ಈ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗಿಸಲಾಗುವುದು ಎಂದು ಔರಿಸಿಚಿಯೊ ಎಎನ್‌ಎಸ್‌ಎ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಲಸಿಕೆಯೊಂದು ಕೊರಾನಾ ವೈರಾಣುವನ್ನು ಕೊಂದಿದ್ದು ಇದೇ ಮೊದಲು. ಇಲಿಗಳ ಮೇಲೆ ನಡೆದ ಪ್ರಯೋಗ ಯಶಸ್ವಿಯಾದಂತೆ, ಮನುಷ್ಯರ ಮೇಲೆ ನಡೆಯುವ ಪ್ರಯೋಗವು ಯಶಸ್ವಿಯಾಗಲಿದೆ ಎಂದು ಸ್ಪಲ್ಲಂಝಾನಿ ಆಸ್ಪತ್ರೆಯ ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಔಷಧ ತಯಾರಿಕಾ ಕಂಪನಿ ಲಿನಿಯಾಆರ್‌ಎಕ್ಸ್‌ ಜೊತೆಗೂಡಿ ಟಕೀಸ್ ಕಂಪನಿಯು ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಔರಿಸಿಚಿಯೊ ಹೇಳಿದ್ದಾರೆ.

‘ಹೊಸ ತಂತ್ರಜ್ಞಾನದ ಸಹಾಯದಿಂದ ಲಸಿಕೆ ಸಿದ್ಧಪಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇಟಲಿಯಲ್ಲಿ ಪ್ರಯೋಗವಾದ ಲಸಿಕೆ ಎಲ್ಲರಿಗೂ ಸಿಗುವಂತಾಗಬೇಕು. ಈ ಗುರಿ ತಲುಪಲು ಹಾಗೂ ಪ್ರಯೋಗದ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ದೇಶದ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳ, ಸಹಭಾಗಿತ್ವ ಹೊಂದಿರುವವರ ನೆರವು ಬೇಕು’ ಎಂದು ಅವರು ಹೇಳಿದ್ದಾರೆ.

‘ಇದು ಸ್ಪರ್ಧೆಯಲ್ಲ. ನಾವೆಲ್ಲರೂ ಶಕ್ತಿ ಮತ್ತು ಕೌಶಲವನ್ನು ಒಗ್ಗೂಡಿಸಿದರೆ ಕೊರೊನಾ ವಿರುದ್ಧ ಜಯಶಾಲಿಗಳಾಗಬಹುದು’ ಎಂದೂ ಅವರು ಹೇಳಿದ್ದಾರೆ.

ಪ್ರಯೋಗದ ಫಲಿತಾಂಶ ನಿರೀಕ್ಷೆಗೂ ಮೀರಿದೆ ಎಂದು ಇಟಲಿಯ ಸಂಶೋಧಕರು ಬಣ್ಣಿಸಿದ್ದಾರೆ.

ಒಂದು ಬಾರಿ ಲಸಿಕೆ ನೀಡಿದಾಗಲೇ ಸೋಂಕು ಹರಡಬಲ್ಲ ವೈರಸ್‌ಗಳನ್ನು ತಡೆಯುವ ರೋಗನಿರೋಧಕ ಕಣಗಳು ಇಲಿಗಳಲ್ಲಿ ವೃದ್ಧಿಯಾಗಿದ್ದವು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT