ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿ | ಪಾಕ್‌ ಕಟ್ಟುಕತೆಗೆ ಭಾರತ ತಿರುಗೇಟು

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 42ನೇ ಸಭೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪ
Last Updated 10 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಜಿನೀವಾ: ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿ ವಿಚಾರದಲ್ಲಿಭಾರತ ಮತ್ತು ಪಾಕಿಸ್ತಾನದ ನಡುವೆ ವಾಗ್ವಾದಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (ಯುಎನ್‌ಎಚ್‌ಆರ್‌ಸಿ) 42ನೇ ಸಭೆಯು ಮಂಗಳವಾರ ಸಾಕ್ಷಿಯಾಯಿತು.

ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಹೇಳುತ್ತಿರುವುದು ‘ಆಕ್ರಮಣಕಾರಿಯಾದ ಹುಸಿಮಾತು. ಅಷ್ಟೇ ಅಲ್ಲ, ಆ ದೇಶ ಹೇಳುತ್ತಿರುವುದೆಲ್ಲ ಕಟ್ಟುಕತೆ’ ಎಂದು ಭಾರತದ ನಿಯೋಗದ ನೇತೃತ್ವ ವಹಿಸಿದ್ದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪೂರ್ವ ವಿಭಾಗ) ವಿಜಯಾ ಠಾಕೂರ್‌ ಸಿಂಗ್‌ ಬಲವಾಗಿ ಪ್ರತಿಪಾದಿಸಿದ್ದಾರೆ.

ಪ್ರತಿಯೊಂದು ಜಾಗತಿಕ ವೇದಿಕೆಯಲ್ಲಿಯೂ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸುವುದಾಗಿ ಪ್ರತಿಜ್ಞೆ ಮಾಡಿರುವ ಪಾಕಿಸ್ತಾನವು ಯುಎನ್‌ಎಚ್‌ಆರ್‌ಸಿಯಲ್ಲಿಯೂ ಆ ಕೆಲಸ ಮಾಡಿತು. ‘ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದತಿ ವಿಚಾರದಲ್ಲಿ ಅಸಡ್ಡೆ ತೋರಬಾರದು. ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಅಂತರ ರಾಷ್ಟ್ರೀಯ ತನಿಖೆ ನಡೆಸಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಒತ್ತಾಯಿಸಿದರು.

ಈ ಒತ್ತಾಯಕ್ಕೆ ಭಾರತವು ಬಲವಾದ ತಿರುಗೇಟು ನೀಡಿತು. ‘ಜಾಗತಿಕ ಭಯೋತ್ಪಾದನೆಯ ಕೇಂದ್ರವು ಈ ಕಟ್ಟುಕತೆಯನ್ನು ಪಸರಿಸುತ್ತಿದೆ ಎಂಬುದು ಜಗತ್ತಿಗೇ ಗೊತ್ತಿದೆ. ಸಂಚುಕೋರರಿಗೆ ವರ್ಷಾನುಗಟ್ಟಲೆಯಿಂದ ಅಲ್ಲಿ ನೆಲೆ ಕಲ್ಪಿಸಲಾಗಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಆ ದೇಶವು ಒಂದು ರಾಜತಾಂತ್ರಿಕ ನಡೆ ಎಂದೇ ಪರಿಗಣಿಸುತ್ತಿದೆ’ ಎಂದು ವಿಜಯಾ ಹೇಳಿದರು. ಆದರೆ, ಅವರು ಪಾಕಿಸ್ತಾನದ ಹೆಸರು ಉಲ್ಲೇಖಿಸಲಿಲ್ಲ.

ಮಾನವ ಹಕ್ಕುಗಳ ಮುಖವಾಡದಲ್ಲಿ ಈ ವೇದಿಕೆಯನ್ನು ದುರುದ್ದೇಶಪೂರಿತ ರಾಜಕೀಯ ಕಾರ್ಯಸೂಚಿಗೆ ಬಳಸುವವರನ್ನು ಗುರುತಿಸುವ ಅಗತ್ಯ ಇದೆ ಎಂದು ಅವರು ಹೇಳಿದರು.

ಕಾಶ್ಮೀರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸಂಸತ್ತಿನಲ್ಲಿ ಚರ್ಚಿಸಿಯೇ ಕೈಗೊಳ್ಳಲಾಗಿದೆ. ಈ ಪೂರ್ಣ ಚರ್ಚೆಯು ಸುದ್ದಿ ವಾಹಿನಿಗಳ ಮೂಲಕ ಪ್ರಸಾರವಾಗಿದೆ. ಸಂಸತ್ತಿನಲ್ಲಿ ಕೈಗೊಂಡ ನಿರ್ಧಾರಕ್ಕೆ ಇಡೀ ದೇಶ ಬೆಂಬಲ ನೀಡಿದೆ. ಸಾರ್ವಭೌಮ ದೇಶವೊಂದು ಕೈಗೊಂಡ ನಿರ್ಧಾರ ಇದು. ಭಾರತದ ಸಂಸತ್ತು ಕೈಗೊಳ್ಳುವ ಇತರ ನಿರ್ಧಾರಗಳ ಹಾಗೆಯೇ ಈ ನಿರ್ಧಾರವೂ ಭಾರತದ ಆಂತರಿಕ ವಿಚಾರ. ಆಂತರಿಕ ವಿಚಾರಗಳಲ್ಲಿ ಬಾಹ್ಯ ಹಸ್ತಕ್ಷೇಪವನ್ನು ಯಾವ ದೇಶವೂ ಒಪ್ಪುವುದಿಲ್ಲ. ಭಾರತವಂತೂ ಖಂಡಿತಾ ಒಪ್ಪುವುದಿಲ್ಲ ಎಂದು ವಿಜಯಾ ಸ್ಪಷ್ಟವಾಗಿ ಹೇಳಿದರು.

ಜನರ ಜೀವಿಸುವ ಹಕ್ಕು ಮತ್ತು ಭದ್ರತೆಗೆ ಅಂತರರಾಷ್ಟ್ರೀಯ ಸಮುದಾಯವು ಹೊಂದಿರುವ ಬದ್ಧತೆಗೆ ಭಯೋತ್ಪಾದನೆಯು ದೊಡ್ಡ ಸವಾಲಾಗಿದೆ. ಭಯೋತ್ಪಾದನೆಗೆ ಕುಮ್ಮಕ್ಕು, ಬೆಂಬಲ ಮತ್ತು ಆರ್ಥಿಕ ನೆರವು ನೀಡುವವರು, ತಮ್ಮ ನೆಲವನ್ನು ಭಯೋತ್ಪಾದನೆಗೆ ಬಳಸಲು ಅವಕಾಶ ಕೊಡುವವರೇ ನಿಜ ಅರ್ಥದಲ್ಲಿ ಅತಿ ದೊಡ್ಡ ರೀತಿಯಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸುವವರು ಎಂದು ಅವರು ಟೀಕಿಸಿದರು.

‘ನಾವು ಈಗ ಮಾತನಾಡಲೇಬೇಕು. ಯಾಕೆಂದರೆ, ಮೌನವು ಭಯೋತ್ಪಾದಕರನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇದು ಭೀತಿ ಹುಟ್ಟಿಸುವ ತಂತ್ರಗಳನ್ನು ಉತ್ತೇಜಿಸುತ್ತದೆ. ಹಾಗಾಗಿ, ಭಯೋತ್ಪಾದಕರು ಮತ್ತು ಅವರ ಪ್ರಾಯೋಜಕರ ವಿರುದ್ಧ ಇಡೀ ಜಗತ್ತು ಒಂದಾಗಬೇಕು ಎಂಬುದು ಭಾರತದ ಮನವಿ’ ಎಂದು ಅವರು ಹೇಳಿದರು.

ಭಾರತ ಮತ್ತು ಇಡೀ ಜಗತ್ತು ರಾಷ್ಟ್ರ ಪ್ರಾಯೋಜಿತ ಉಗ್ರರಿಂದ ಭಾರಿ ನೋವು ಅನುಭವಿಸಿವೆ. ಈಗ ಇದರ ವಿರುದ್ಧ ಸಾಮೂಹಿಕ ಕ್ರಮ ಕೈಗೊಳ್ಳುವ ಕಾಲ ಸನ್ನಿಹಿತವಾಗಿದೆ. ಮಾನವ ಹಕ್ಕುಗಳಿಗೆ ಬೆದರಿಕೆಯಾಗಿರುವ ಈ ಉಗ್ರರು ಮತ್ತು ಅವರ ಪ್ರಾಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ಪಾಕ್‌ ವಾದ

* ಕಾಶ್ಮೀರ ವಿಚಾರದಲ್ಲಿ ನಿಷ್ಕ್ರಿಯವಾಗಿ ಜಾಗತಿಕ ಮಟ್ಟದಲ್ಲಿ ಯುಎನ್‌ಎಚ್‌ಆರ್‌ಸಿ ಮುಜುಗರಕ್ಕೆ ಈಡಾಗಬಾರದು

* ಪೆಲೆಟ್‌ ಬಂದೂಕು ಬಳಕೆ ನಿಲ್ಲಿಸಿ, ಕರ್ಫ್ಯೂ ತೆಗೆಯಬೇಕು, ಸಂವಹನ ನಿಷೇಧ ರದ್ದು ಮಾಡಬೇಕು ಎಂದು ಭಾರತಕ್ಕೆ ಸೂಚಿಸಬೇಕು

* ಕಾಶ್ಮೀರದ ಸ್ಥಿತಿಗತಿಯ ತನಿಖೆಗೆ ಸಮಿತಿಯೊಂದನ್ನು ರಚಿಸಬೇಕು

* ಈಗ ಇರುವ ನಿರ್ಬಂಧ ಸ್ಥಿತಿಯನ್ನು ಸಡಿಲಿಸಿ ಜನರು ಮೂಲಭೂತ ಅಗತ್ಯಗಳನ್ನು ಪಡೆಯುವಂತೆ ಮಾಡಬೇಕು

ಕಾಶ್ಮೀರ ಭಾರತದ ರಾಜ್ಯ ಎಂದ ಪಾಕ್‌

ಜಮ್ಮು–ಕಾಶ್ಮೀರವು ಭಾರತದ ರಾಜ್ಯ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಹೇಳಿದ್ದಾರೆ. ಈವರೆಗೆ ಜಮ್ಮು–ಕಾಶ್ಮೀರವನ್ನು ‘ಭಾರತ ಆಳ್ವಿಕೆಯ ಕಾಶ್ಮೀರ’ ಎಂದೇ ಪಾಕಿಸ್ತಾನವು ಉಲ್ಲೇಖಿಸುತ್ತಿತ್ತು.

ಅಂತರರಾಷ್ಟ್ರೀಯ ಮಾಧ್ಯಮ ಮತ್ತು ಸಂಘಟನೆಗಳನ್ನು ‘ಭಾರತದ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರ’ಕ್ಕೆ ಹೋಗಲು ಭಾರತ ಸರ್ಕಾರ ಯಾಕೆ ಅವಕಾಶ ಕೊಡುತ್ತಿಲ್ಲ ಎಂದು ಮಾನವ ಹಕ್ಕುಗಳು ಸಮಿತಿಯ ಸಭೆಯಲ್ಲಿ ಖುರೇಷಿ ಪ್ರಶ್ನಿಸಿದರು.

ಭಾರತದ ಪ್ರತಿವಾದ

* ಜಮ್ಮು–ಕಾಶ್ಮೀರದಲ್ಲಿ ಕೈಗೊಂಡ ಶಾಸನಾತ್ಮಕ ಬದಲಾವಣೆಗಳು ಭಾರತದ ಸಂವಿಧಾನದ ಚೌಕಟ್ಟಿನೊಳಗೇ ಇವೆ

* ಗಡಿಯಾಚಿನ ಭಯೋತ್ಪಾದನೆಯ ಬೆದರಿಕೆಯಿಂದ ಕಾಶ್ಮೀರದ ಜನರನ್ನು ರಕ್ಷಿಸುವುದಕ್ಕಾಗಿಯೇ ತಾತ್ಕಾಲಿಕ ನಿರ್ಬಂಧಗಳನ್ನು ಹೇರಲಾಗಿದೆ

* ಮೂಲಭೂತ ಸೇವೆಗಳು, ಅಗತ್ಯ ವಸ್ತು ಪೂರೈಕೆಗಳು, ಸಂಚಾರ ಮತ್ತು ಬಹುತೇಕ ಪೂರ್ಣ ಸಂಪರ್ಕ ವ್ಯವಸ್ಥೆ ಒದಗಿಸಲು ಜಮ್ಮು–ಕಾಶ್ಮೀರ ಆಡಳಿತ ಯತ್ನಿಸುತ್ತಿದೆ. ಅಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ

* ರಾಷ್ಟ್ರ, ಜನಾಂಗ ಮತ್ತು ಧಾರ್ಮಿಕ ನೆಲೆಯಲ್ಲಿ ಕಾಶ್ಮೀರದ ಜನರ ಜೀವ, ಜೀವನ ಶೈಲಿ ಮತ್ತು ಜೀವನೋಪಾಯಕ್ಕೆ ಅಂಧ ಸರ್ಕಾರದಿಂದ ಭಾರಿ ಅಪಾಯ ಎದುರಾಗಿದೆ

ಶಾ ಮೆಹಮೂದ್‌ ಖುರೇಷಿ ,ಪಾಕಿಸ್ತಾನದ ವಿದೇಶಾಂಗ ಸಚಿವ

*ಬೇರೆ ದೇಶದ ಅಲ್ಪಸಂಖ್ಯಾತರ ಹಕ್ಕು ದಮನವಾಗುತ್ತಿದೆ ಎನ್ನುತ್ತಿರುವವರೇ ತಮ್ಮ ದೇಶದಲ್ಲಿ ಹಕ್ಕುಗಳನ್ನು ತುಳಿಯುತ್ತಿದ್ದಾರೆ. ಬೇಟೆಗಾರರು ತಾವೇ ಬಲಿಪಶು ಎನ್ನುತ್ತಿದ್ದಾರೆ

ವಿಜಯಾ ಠಾಕೂರ್‌ ಸಿಂಗ್‌,ವಿದೇಶಾಂಗ ಸಚಿವಾಲಯ ಕಾರ್ಯದರ್ಶಿ

ಚೀನಾಕ್ಕೆ ತಾಕೀತು

ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರವನ್ನು ಹಾದುಹೋಗುವ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಗೆ ಬಂಡವಾಳ ಹೂಡುವುದನ್ನು ತಕ್ಷಣವೇ ನಿಲ್ಲಿಸಿ ಎಂದು ಭಾರತವು ಚೀನಾಕ್ಕೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT