ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತಾರ್‌ಪುರ ಕಾರಿಡಾರ್ | ಸಿಖ್ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಕಡ್ಡಾಯ

ಪಾಕ್ ಸೇನೆ ಸ್ಪಷ್ಟನೆ; ಒಪ್ಪಂದ ಪಾಲಿಸಲು ಬದ್ಧ ಎಂದ ಭಾರತ
Last Updated 8 ನವೆಂಬರ್ 2019, 1:45 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಕರ್ತಾರ್‌ಪುರ ಕಾರಿಡಾರ್ ಮೂಲಕ ಪಾಕಿಸ್ತಾನಕ್ಕೆ ಭೇಟಿ ನೀಡುವ ಸಿಖ್ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಕಡ್ಡಾಯ ಎಂದು ಪಾಕಿಸ್ತಾನದ ಸೇನೆ ಗುರುವಾರ ಸ್ಪಷ್ಟಪಡಿಸಿದೆ.ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ಹೇಳಿಕೆಯನ್ನು ‘ಡಾನ್ ನ್ಯೂಸ್’ ಪ್ರಸಾರ ಮಾಡಿದೆ.

ಭಾರತದ ಯಾತ್ರಿಕರು ಗುರುತಿನ ಚೀಟಿ ಹೊಂದಿದ್ದರೆ ಸಾಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಘೋಷಿಸಿದ್ದರು. ಈ ಬಗ್ಗೆ ಭಾರತ ಸ್ಪಷ್ಟನೆ ಕೇಳಿತ್ತು.

ಸಿಖ್ ಧರ್ಮಗುರು ಗುರುನಾನಕ್ ಅವರ 550ನೇ ಜಯಂತಿ ಪ್ರಯುಕ್ತ ಇಮ್ರಾನ್ ಖಾನ್ ಅವರುಶನಿವಾರ (ನವೆಂಬರ್ 9) ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟಿಸಲಿದ್ದಾರೆ. ಗುರುದ್ವಾರಕ್ಕೆ ಭೇಟಿ ನೀಡುವ ಭಾರತದ ಸಿಖ್ ಸಮುದಾಯದ ಯಾತ್ರಿಕರಿಗೆ ವೀಸಾ ಅಗತ್ಯವಿಲ್ಲ.

ಕಾರಿಡಾರ್ ಉದ್ಘಾಟನೆಗೆ ಸಿದ್ಧವಾಗಿದೆ ಎಂದು ನವೆಂಬರ್ 1ರಂದು ಪ್ರಕಟಿಸಿದ್ದ ಇಮ್ರಾನ್ ಖಾನ್, ಕೆಲ ವಿನಾಯಿತಿಗಳನ್ನು ನೀಡಿದ್ದರು. 10 ದಿನಗಳ ಮುನ್ನ ನೋಂದಣಿ ಮಾಡುವುದು ಹಾಗೂ ಪಾಸ್‌ಪೋರ್ಟ್ ಹೊಂದಿರಬೇಕು ಎಂಬ ನಿಯಮಗಳನ್ನು ಕೈಬಿಟ್ಟಿದ್ದರು. ಉದ್ಘಾಟನೆ ದಿನ ಆಗಮಿಸುವ ಯಾತ್ರಾರ್ಥಿಗಳಿಗೆ ಸೇವಾ ಶುಲ್ಕ (20 ಅಮೆರಿಕನ್ ಡಾಲರ್) ಇಲ್ಲ ಎಂದಿದ್ದರು.

ಸಿಧು ಭೇಟಿಗೆ ಅನುಮತಿ
ನವದೆಹಲಿ:
ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರು ಕರ್ತಾರ್‌ಪುರ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭಾರತದ ವಿದೇಶಾಂಗ ಇಲಾಖೆ ಗುರುವಾರ ಕೊನೆಗೂ ಅನುಮತಿ ನೀಡಿದೆ. ಸಿಧು ಅವರು ಪಾಕಿಸ್ತಾನಕ್ಕೆ ತೆರಳಲು ಅವಕಾಶ ಕೋರಿ ಮೂರು ಬಾರಿ ಪತ್ರ ಬರೆದಿದ್ದರು.ಸಿಧು ಅವರಿಗೆ ಪಾಕಿಸ್ತಾನವೀಸಾ ನೀಡಿ, ಆಹ್ವಾನಿಸಿದೆ.

‘ಒಬ್ಬರನ್ನೇ ಬಿಂಬಿಸುವುದು ಸರಿಯಲ್ಲ’:‘ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ಐತಿಹಾಸಿಕಕಾರ್ಯಕ್ರಮ. ಯೋಜನೆ ಸಾಕಾರಕ್ಕೆ ಭಾರತ 20 ವರ್ಷಗಳಿಂದ ಯತ್ನಿಸುತ್ತಿದೆ. ಆದರೆ ಒಬ್ಬ ವ್ಯಕ್ತಿಯನ್ನು ಮಾತ್ರ ಬಿಂಬಿಸುವುದರಿಂದ ಕಾರ್ಯಕ್ರಮಕ್ಕೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ’ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಗುರುವಾರ ಹೇಳಿಕೆ ನೀಡಿದ್ದಾರೆ.

ಭದ್ರತೆಗೆ ‘ಪ್ರವಾಸೋದ್ಯಮ ಪೊಲೀಸ್ ಪಡೆ’: ಕರ್ತಾರ್‌ಪುರ ಗುರುದ್ವಾರಕ್ಕೆ ಆಗಮಿಸುವ ಸಿಖ್ ಯಾತ್ರಿಕರ ಭದ್ರತೆಗೆ ‘ಪ್ರವಾಸೋದ್ಯಮ ಪೊಲೀಸ್ ಪಡೆ’ಯನ್ನು ಪಾಕಿಸ್ತಾನ ನಿಯೋಜಿಸಿದೆ. ಕಾರಿಡಾರ್ ಉದ್ಘಾಟನಾ ದಿನದಂದು ಈ ಪಡೆ ಕಾರ್ಯಾರಂಭ ಮಾಡಲಿದೆ.

ಕಾರ್ಯಕ್ರಮದ ಭದ್ರತೆಯ ಹೊಣೆಯನ್ನು ಪಾಕಿಸ್ತಾನದ ರೇಂಜರ್ಸ್‌ಗೆ ವಹಿಸಲಾಗಿದೆ.

ಯಾತ್ರಿಗಳ ಭದ್ರತೆಗೆ ‘ಪ್ರವಾಸೋದ್ಯಮ ಪೊಲೀಸ್ ಪಡೆ’
ಕರ್ತಾರ್‌ಪುರ ಗುರುದ್ವಾರಕ್ಕೆ ಆಗಮಿಸುವ ಸಿಖ್ ಯಾತ್ರಿಕರ ಭದ್ರತೆಗೆ ‘ಪ್ರವಾಸೋದ್ಯಮ ಪೊಲೀಸ್ ಪಡೆ’ಯನ್ನು ಪಾಕಿಸ್ತಾನ ನಿಯೋಜಿಸಿದೆ. ಕಾರಿಡಾರ್ ಉದ್ಘಾಟನಾ ದಿನದಂದು ಈ ಪಡೆ ಕಾರ್ಯಾರಂಭ ಮಾಡಲಿದೆ.

ಯಾತ್ರಿಗಳ ಭದ್ರತೆಯ ಹೊಣೆಯನ್ನು ಪಾಕಿಸ್ತಾನದ ರೇಂಜರ್ಸ್‌ಗೆ ವಹಿಸಲಾಗಿದೆ. ಸೈನಿಕರ ಜೊತೆಗೆ ಪಂಜಾಬ್ ಪ್ರಾಂತ್ಯದ ಪೊಲೀಸರು ಸಹಕಾರ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿಬ್ಬಂದಿಗೆ ತರಬೇತಿ ನೀಡಲಿದ್ದು, ಅವರು ಮೊದಲ ತಂಡವನ್ನು ಸೇರಿಕೊಳ್ಳಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ಪಾಕ್ ರೇಂಜರ್ಸ್‌ನ ಸೈನಿಕರ ಸಂಖ್ಯೆ ಹೆಚ್ಚಿಸಲಾಗಿದೆ.

**

ಪಾಸ್‌ಪೋರ್ಟ್ ಗುರುತು ಆಧರಿಸಿ ಪ್ರವೇಶ ಕಲ್ಪಿಸುವುದು ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ಒಂದು. ಭದ್ರತೆ ಅಥವಾ ಸಾರ್ವಭೌಮತೆಯಲ್ಲಿ ಯಾವುದೇ ರಾಜಿ ಇಲ್ಲ.
-ಆಸಿಫ್ ಗಫೂರ್, ಪಾಕ್ ಸೇನಾ ವಕ್ತಾರ

**

ಪಾಕಿಸ್ತಾನ ಒಮ್ಮೆ ಬೇಡ ಎಂದರೆ, ಮತ್ತೊಮ್ಮೆ ಬೇಕು ಎನ್ನುತ್ತಿದೆ. ಪಾಸ್‌ಪೋರ್ಟ್ ಅಗತ್ಯ ಎಂಬ ಒಪ್ಪಂದಕ್ಕೆ ಭಾರತ ಬದ್ಧವಾಗಿದೆ.
-ರವೀಶ್ ಕುಮಾರ್, ಭಾರತದ ವಿದೇಶಾಂಗ ಇಲಾಖೆ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT