ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಮಗ ತಾರಿಖ್‌ಗೆ ಜೀವಾವಧಿ ಶಿಕ್ಷೆ

7
ಚುನಾವಣಾ ರ‍್ಯಾಲಿ ಮೇಲೆ ಗ್ರೆನೇಡ್ ದಾಳಿ ಪ್ರಕರಣ; 18 ಮಂದಿಗೆ ಮರಣ ದಂಡನೆ

ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಮಗ ತಾರಿಖ್‌ಗೆ ಜೀವಾವಧಿ ಶಿಕ್ಷೆ

Published:
Updated:

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಗುರಿಯಾಗಿಸಿಕೊಂಡು 2004ರಲ್ಲಿ ಚುನಾವಣಾ ರ‍್ಯಾಲಿ ಮೇಲೆ ಗ್ರೆನೇಡ್ ದಾಳಿ ನಡೆಸಿದ ಪ್ರಕರಣದಲ್ಲಿ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಖ್ ರಹಮಾನ್‌ಗೆ (50) ಜೀವಾವಧಿ ಶಿಕ್ಷೆ ಹಾಗೂ ಉಳಿದ 18 ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಬುಧವಾರ ನೀಡಿದೆ.

ಮರಣದಂಡನೆ ಶಿಕ್ಷಗೆ ಗುರಿಯಾದ ಅಪರಾಧಿಗಳಲ್ಲಿ ಗೃಹ ಖಾತೆ ಮಾಜಿ ರಾಜ್ಯ ಸಚಿವ ಲುಟ್ಫೋಝ್ಝಾಮನ್ ಬಾಬರ್ ಕೂಡ ಇದ್ದಾರೆ. ಎಲ್ಲ ಅಪರಾಧಿಗಳಿಗೆ ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ.

ಜಿಯಾ ಅವರ ರಾಜಕೀಯ ಸಲಹೆಗಾರ ಹ್ಯಾರೀಸ್‌ ಚೌಧರಿ ಮತ್ತು ಬಿಎನ್‌ಪಿ ಸಂಸದ ಖಾಜಿ ಷಾ ಮೊಫಾಝಾಲ್ ಹೊಸೈನ್‌ ಕೈಕೋಬಾದ್ ಸೇರಿ ಹಲವು ರಾಜಕಾರಣಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಢಾಕಾದಲ್ಲಿ ಅವಾಮಿ ಲೀಗ್‌ ಪಕ್ಷದ ಚುನಾವಣಾ ಪ್ರಚಾರ ರ‍್ಯಾಲಿ ವೇಳೆ ನಡೆದಿದ್ದ ಈ ದಾಳಿಯಲ್ಲಿ 24 ಜನರು ಮೃತಪಟ್ಟಿದ್ದರು. ಪ್ರಧಾನಿ ಶೇಖ್ ಹಸೀನಾ ಸೇರಿ 500 ಜನರು ಗಾಯಗೊಂಡಿದ್ದರು. ಹಸೀನಾ ಆಗ ಪ್ರತಿಪಕ್ಷದ ನಾಯಕಿಯಾಗಿದ್ದರು. ಅವರು ಪ್ರಾಣಾಪಾಯದಿಂದ ಪಾರಾದರೂ ಶ್ರವಣಶಕ್ತಿ ಕಳೆದುಕೊಂಡಿದ್ದರು.

ಅವಾಮಿ ಲೀಗ್‌ನ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ, ಮಾಜಿ ಅಧ್ಯಕ್ಷ ಝಿಲ್ಲುರ್‌ ರಹಮಾನ್‌ ಅವರ ಪತ್ನಿ ಐವಿ ರಹಮಾನ್ ಸಹ ಈ ಘಟನೆಯಲ್ಲಿ ಮೃತಪಟ್ಟಿದ್ದರು.

ಸೆಪ್ಟೆಂಬರ್ 18ರಂದು ವಿಚಾರಣೆ ಮುಕ್ತಾಯಗೊಳಿಸಿದ್ದ ಢಾಕಾದ ಶೀಘ್ರ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶ ಸಹೀದ್‌ ನೂರುಲ್ಲಾ ಅವರು ತೀರ್ಪು ಕಾಯ್ದಿರಿಸಿದ್ದರು.

ರಹಮಾನ್ ತಲೆಮರೆಸಿಕೊಂಡಿರುವುದರಿಂದ ಆತನ ಗೈರುಹಾಜರಿಯಲ್ಲೇ ವಿಚಾರಣೆ ಮುಕ್ತಾಯಗೊಳಿಸಲಾಗಿತ್ತು. ಆತ ಸದ್ಯ ಲಂಡನ್‌ನಲ್ಲಿ ಇದ್ದು, ಅಲ್ಲಿನ ಆಶ್ರಯ ಕೋರಿದ್ದಾನೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ರಹಮಾನ್‌ ಜತೆಗೆ ಇಬ್ಬರು ಮಾಜಿ ಸಚಿವರು, ಬಿಎನ್‌ಪಿ ನೇತೃತ್ವದ ನಾಲ್ಕು ಪಕ್ಷಗಳ ಸಮ್ಮಿಶ್ರ ಸರ್ಕಾರದಲ್ಲಿದ್ದ ಉನ್ನತ ಪೊಲೀಸ್‌ ಅಧಿಕಾರಿಗಳು, ಗುಪ್ತದಳದ ಅಧಿಕಾರಿಗಳು ಸೇರಿ 49 ಮಂದಿ ಆರೋಪಿಗಳಾಗಿದ್ದರು.

ರಹಮಾನ್‌ ಈ ಕೃತ್ಯ ಪ್ರಮುಖ ರೂವಾರಿಯಾಗಿದ್ದು, ಇದೊಂದು ಪ್ರಾಯೋಜಿತ ದಾಳಿಯಾಗಿತ್ತು. ಉಗ್ರ ಸಂಘಟನೆ ಹುಜಿ ಮೂಲಕ ಈ ದಾಳಿ ನಡೆಸಲಾಗಿತ್ತು. ಇದರಲ್ಲಿ ಬಿಎನ್‌ಪಿ ನೇತೃತ್ವದ ಸರ್ಕಾರದ ನೇರ ಕೈವಾಡ ಇರುವುದು ತನಿಖೆಯಿಂದ ಪತ್ತೆಯಾಗಿತ್ತು. ಶೇಖ್‌ ಹಸೀನಾ ಅವರೇ ಈ ದಾಳಿಯ ಪ್ರಮುಖ ಗುರಿಯಾಗಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಪ್ರಧಾನಿ ಹಾಗೂ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (ಪಿಎನ್‌ಬಿ) ಮುಖ್ಯಸ್ಥೆ ಖಲೀದಾ ಜಿಯಾ ಅವರ ಹೆಸರು ಈ ಪ್ರಕರಣದಲ್ಲಿ ಸೇರ್ಪಡೆಯಾಗಿಲ್ಲ. ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೂ ಮೊದಲೇ ಈ ಪ್ರಕರಣದ ತೀರ್ಪು ಹೊರಬಿದ್ದಿದೆ. 2014ರ ಚುನಾವಣೆಯನ್ನು ಜಿಯಾ ಅವರ ಪಕ್ಷ ಬಹಿಷ್ಕರಿಸಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !