ಶುಕ್ರವಾರ, ಏಪ್ರಿಲ್ 3, 2020
19 °C

ಇರಾನ್‌ನಲ್ಲಿ ಹೆಚ್ಚಿದ ‘ಕೋವಿಡ್‌–19’ ಭೀತಿ: ಇರಾಕ್‌ನಲ್ಲಿ ಮೌಲ್ವಿ ಸಾವು

ಎಪಿ/ಪಿಟಿಐ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಟೆಹರಾನ್‌: ಇರಾನ್‌ನಲ್ಲಿ ‘ಕೋವಿಡ್‌–19’ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಇದುವರೆಗೆ ಇರಾನ್‌ನಲ್ಲಿ 92 ಮಂದಿ ಸಾವಿಗೀಡಾಗಿದ್ದು, 2,922 ಮಂದಿಯಲ್ಲಿ ವೈರಸ್‌ ಸೋಂಕು ಕಾಣಿಸಿಕೊಂಡಿದೆ.

ಚೀನಾದ ಬಳಿಕ ಅತಿ ಹೆಚ್ಚು ಸಾವಿನ ಪ್ರಕರಣಗಳು ಇರಾನ್‌ನಲ್ಲಿ ಸಂಭವಿಸಿವೆ. ಇರಾನ್‌ನಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದರೂ ಸರ್ಕಾರ ಮಾಹಿತಿಯನ್ನು ಮುಚ್ಚಿಡುತ್ತಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಇರಾನ್‌ನ 31 ಪ್ರಾಂತ್ಯಗಳಲ್ಲಿ ವೈರಸ್‌ ಸೋಂಕು ಕಾಣಿಸಿಕೊಂಡಿದೆ. ವ್ಯಾಪಕವಾಗಿ ಇದು ಹರಡುತ್ತಿದೆ. ತ್ವರಿತಗತಿಯಲ್ಲಿ ಈ ವೈರಸ್‌ ನಿಯಂತ್ರಿಸಲು ಕ್ರಮಕೈಗೊಳ್ಳಬೇಕಾಗಿದೆ’ ಎಂದು ಅಧ್ಯಕ್ಷ ಹಸ್ಸನ್‌ ರೌಹಾನಿ ತಿಳಿಸಿದ್ದಾರೆ.

ಪ್ರಾರ್ಥನೆ ರದ್ದು: ಇರಾನ್‌ನ ಎಲ್ಲ ಪ್ರಾಂತ್ಯಗಳ ರಾಜಧಾನಿಗಳಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ಸಹ ರದ್ದುಗೊಳಿಸಲಾಗಿದೆ.

ನಿರ್ಬಂಧ ವಿಧಿಸಿದ ಸೌದಿ ಅರೇಬಿಯಾ: ಮೆಕ್ಕಾಗೆ ಗುಂಪಿನಲ್ಲಿ ಯಾತ್ರೆ ಕೈಗೊಳ್ಳುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಸೌದಿ ಅರೇಬಿಯಾದ ಉಪ ಆರೋಗ್ಯ ಸಚಿವ ಅಬ್ದೇಲ್‌ ಫಥಾಹ್‌ ಮಷತ್‌ ತಿಳಿಸಿದ್ದಾರೆ.

ವಿದೇಶಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗುಂಪಿನಲ್ಲಿ ತೆರಳುವುದು ಸಾಮಾನ್ಯವಾಗಿದೆ. ಆದರೆ, ಕುಟುಂಬದ ಸದಸ್ಯರು ಒಟ್ಟಾಗಿ ಅಥವಾ ಒಬ್ಬೊಬ್ಬರಾಗಿ ಮೆಕ್ಕಾಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇರಾಕ್‌ನಲ್ಲಿ ಮೊದಲ ಸಾವು: ಇರಾಕ್‌ನಲ್ಲಿ ‘ಕೋವಿಡ್‌–19’ಗೆ ಮುಸ್ಲಿಂ ಮೌಲ್ವಿಯೊಬ್ಬರು ಬುಧವಾರ ಸಾವಿಗೀಡಾಗಿದ್ದಾರೆ. ಇರಾಕ್‌ನಲ್ಲಿ ವೈರಸ್‌ನಿಂದ ಸಾವಿಗೀಡಾದ ಮೊದಲ ಪ್ರಕರಣ ಇದಾಗಿದೆ. ಒಟ್ಟು 31 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವೈರಸ್‌ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇರಾನ್‌ ಜತೆಗಿನ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಜತೆಗೆ, ಇರಾನ್‌ ಮತ್ತು ವೈರಸ್‌ ಸೋಂಕು ಕಾಣಿಸಿಕೊಂಡ ರಾಷ್ಟ್ರಗಳಿಂದ ವಿದೇಶಿ ನಾಗರಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಮಾರ್ಚ್‌ 7ರವರೆಗೆ ಶಾಲೆ, ವಿಶ್ವವಿದ್ಯಾಲಯಗಳು, ಚಿತ್ರ ಮಂದಿರಗಳನ್ನು ಮುಚ್ಚಲು ಆದೇಶಿಸಲಾಗಿದೆ. ರ‍್ಯಾಲಿಗಳು ಮತ್ತು ಸಾಮೂಹಿಕ ಪ್ರಾರ್ಥನೆಗೂ ನಿಷೇಧ ಹೇರಲಾಗಿದೆ.

ಪ್ರವಾಸಿಗರಿಗೆ ಎಚ್ಚರಿಕೆ: ವೈರಸ್‌ ಸೋಂಕು ಕಾಣಿಸಿಕೊಂಡಿರುವ ಇರಾನ್‌ ಸೇರಿದಂತೆ ವಿವಿಧ ದೇಶಗಳಿಂದ ಬರುವ ಪ್ರಯಾಣಿಕರು ಪ್ರತ್ಯೇಕವಾಗಿ ವಾಸಿಸಬೇಕು ಎಂದು ಆಸ್ಟ್ರೇಲಿಯಾ ಎಚ್ಚರಿಕೆ ನೀಡಿದೆ.

‘ಇರಾನ್‌ನಿಂದ ಫೆಬ್ರುವರಿ 19ರ ನಂತರ ಬಂದವರು ಪ್ರತ್ಯೇಕವಾಗಿ ವಾಸಿಸಬೇಕು. ಆಸ್ಟ್ರೇಲಿಯಾ ನಾಗರಿಕರು ಇರಬಹುದು ಅಥವಾ ಪ್ರವಾಸಿಗರು ಇರಬಹುದು. ಇದು ಎಲ್ಲರಿಗೂ ಅನ್ವಯಿಸುತ್ತದೆ’ ಎಂದು ಆರೋಗ್ಯ ಸಚಿವ ಗ್ರೆಗ್‌ ಹಂಟ್‌ ತಿಳಿಸಿದ್ದಾರೆ.

 ಆಸ್ಟ್ರೇಲಿಯಾದಲ್ಲಿ ಒಬ್ಬರು ಸಾವಿಗೀಡಾಗಿದ್ದು, 40 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಪೋಲೆಂಡ್‌ನಲ್ಲೂ ಮೊದಲ ವೈರಸ್‌ ಪ್ರಕರಣ ಪತ್ತೆಯಾಗಿದೆ.

ಚೀನಾ: ಕಡಿಮೆಯಾದ ಪ್ರಕರಣಗಳು
ಬೀಜಿಂಗ್‌
: ‘ಕೋವಿಡ್‌–19’ನಿಂದ ನಲುಗಿರುವ ಚೀನಾದಲ್ಲಿ ಈಗ ವೈರಸ್‌ ಸೋಂಕಿನ ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಸಾವಿಗೀಡಾಗುತ್ತಿರುವವರ ಸಂಖ್ಯೆ ಮತ್ತೆ ಮುಂದುವರಿದಿದೆ.

ದೇಶದಲ್ಲಿ ಮತ್ತೆ 38 ಮಂದಿ ಸಾವಿಗೀಡಾಗಿದ್ದಾರೆ. ಇವರಲ್ಲಿ 37 ಮಂದಿ ಹ್ಯುಬೆ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ. ಇದರಿಂದ, ಮಂಗಳವಾರದವರೆಗೆ ಒಟ್ಟು 2,981 ಮಂದಿ ವೈರಸ್‌ನಿಂದ ಸಾವಿಗೀಡಾಗಿದ್ದಾರೆ. 80,270 ಮಂದಿ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಹೊಸದಾಗಿ 119 ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 115 ಮಂದಿ ಹ್ಯುಬೆ ಪ್ರಾಂತ್ಯಕ್ಕೆ ಸೇರಿದ್ದಾರೆ. ಇತರ ದೇಶಗಳಿಂದ ಚೀನಾಗೆ ಮಂಗಳವಾರ ಬಂದಿಳಿದ 6,728 ಪ್ರಯಾಣಿಕರ ಪೈಕಿ 75 ಮಂದಿಯಲ್ಲಿ ವೈರಸ್‌ ಸೋಂಕು ಕಾಣಿಸಿಕೊಂಡಿದೆ.

ಔಷಧ ಬಳಕೆಗೆ ಒಪ್ಪಿಗೆ: ‘ಕೋವಿಡ್‌–19‘ ನಿಯಂತ್ರಿಸಲು ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿರುವ ಚೀನಾ, ಸ್ವಿಟ್ಜರ್ಲೆಂಡ್‌ನ ಔಷಧ ತಯಾರಿಕೆ ಕಂಪನಿ ರೋಚ್‌ನ ‘ಅಕ್ಟೆಮ್ರಾ’ ಬಳಸಲು ಒಪ್ಪಿಗೆ ಸೂಚಿಸಿದೆ.

**

ಜಗತ್ತಿನಾದ್ಯಂತ 3,160 ಮಂದಿ ಸಾವು
92,943 ಮಂದಿಯಲ್ಲಿ ಸೋಂಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು