ಬುಧವಾರ, ಜುಲೈ 28, 2021
21 °C
ಜಾರ್ಜ್‌ ಫ್ರಾಯ್ಲ್ಡ್‌ ಹತ್ಯೆಗೆ ಆಕ್ರೋಶ: ವಾರಾಂತ್ಯದ ವೇಳೆಗೆ ಕುಗ್ಗಿದ ಹಿಂಸಾಚಾರ, ಆಕ್ರೋಶ

ಅಮೆರಿಕದಲ್ಲಿ ಪೊಲೀಸ್ ಕ್ರೌರ್ಯದ ವಿರುದ್ಧ ಪ್ರತಿಭಟನೆ ಅನವರತ, ಜೀವಂತ

ಎಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಪೊಲೀಸ್ ಕ್ರೌರ್ಯದ ವಿರುದ್ಧ ಅಮೆರಿಕದಾದ್ಯಂತ ಒಂದು ವಾರ ಹಿಂಸಾಚಾರಕ್ಕೆ ಕಾರಣವಾಗಿದ್ದ ತೀವ್ರ ಪ್ರತಿಭಟನೆ ವಾರಾಂತ್ಯದ ವೇಳೆಗೆ ಶಾಂತವಾಗಿದ್ದು, ಅಲ್ಲಲ್ಲಿ ಮೆರವಣಿಗೆ, ಜಾಥಾಗೆ ಸೀಮಿತವಾಗಿತ್ತು. ಪ್ರತಿಭಟನೆಯನ್ನು ಜೀವಂತವಾಗಿಡುವ ವಿಶ್ವಾಸ ಸಂಘಟಕರದು.

ಸಾವಿರಾರು ನಾಗರಿಕರು ಶನಿವಾರವೂ ದೇಶದ ವಿವಿಧೆಡೆ ಪ್ರತಿಭಟನಾ ಜಾಥಾ ಕೈಗೊಂಡಿದ್ದು, ಬಹುತೇಕ ಶಾಂತಿಯುತವಾಗಿತ್ತು. ಯಾವುದೇ ಅಹಿತಕರ ಬೆಳವಣಿಗೆಗಳಿಗೆ ಆಸ್ಪದವಾಗಲಿಲ್ಲ.

ಮಾಸ್ಕ್ ಧರಿಸಿ ಮೂಲಭೂತ ಬದಲಾವಣೆಯ ಹಕ್ಕನ್ನು ಪ್ರತಿಪಾದಿಸಿದ ಪ್ರತಿಭಟನಾಕಾರರು ಅಲ್ಲಲ್ಲಿ ಗುಂಪುಗೂಡಿ ಪ್ರತಿಭಟಿಸಿದರು. ಆದರೆ, ನಾರ್ಥ್ ಕೊರೊಲಿನಾದಲ್ಲಿ ಅಸಂಖ್ಯ ಜನರು ಪೊಲೀಸ್ ಕ್ರೌರ್ಯದಿಂದ ಮೃತಪಟ್ಟ ಜಾರ್ಜ್ ಫ್ಲಾಯ್ಡ್ ಶವವಿದ್ದ ಶವಪೆಟ್ಟಿಗೆ ಆಗಮನದ ನಿರೀಕ್ಷೆಯಲ್ಲಿದ್ದರು.

ಫ್ಲಾಯ್ಡ್ ಮೃತಪಟ್ಟ ಮೇ 25ರ ದಿನ ಹೊರತುಪಡಿಸಿ ಶನಿವಾರವೇ ಒಟ್ಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರತಿಭಟನೆಗಾಗಿ ಸೇರಿದ್ದರು. ಹಿಂಸಾಚಾರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕದ ವಿವಿಧೆಡೆ ವಿಧಿಸಿದ್ದ ಕರ್ಫ್ಯೂ ಅನ್ನು ತೆರವುಗೊಳಿಸಲಾಗಿತ್ತು. ಅಧಿಕಾರಿಗಳೂ ಬಿಗಿ ನಿಲುವು ಸಡಿಲಿಸಿದ್ದರು.

ಲಂಡನ್, ಮಾರ್ಸೆಲೆ, ಫ್ರಾನ್ಸ್‌ನಲ್ಲೂ  ಪ್ರತಿಭಟನೆ ನಡೆಯಿತು. ಸಿಯಾಚಿಲ್ ಪೊಲೀಸರು ಗುಂಪು ಚದುರಿಸಲು ಪೆಪ್ಪರ್ ಸ್ಪ್ರೇ ಬಳಸಿದರು. ಪ್ರತಿಭಟನಾಕಾರರು ಕಲ್ಲು, ಬಾಟೆಲ್ ಎಸೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಕಲ್ಲು ತೂರಾಟದಲ್ಲಿ ಹಲವು ಪೊಲೀಸರು ಗಾಯಗೊಂಡರು.

ಅತಿದೊಡ್ಡ ಪ್ರತಿಭಟನೆ ವಾಷಿಂಗ್ಟನ್‌ನಲ್ಲಿ ನಡೆಯಿತು. ರಸ್ತೆಗಳಲ್ಲಿ ಸೇರಿದ್ದ ಪ್ರತಿಭಟನಾಕಾರರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ವಾಣಿಜ್ಯ ಚಟುವಟಿಕೆ ತಾಣಗಳಲ್ಲೂ ಜನರು ಗುಂಪುಗೂಡಿಸಿದ್ದು, ಅಲ್ಲಲ್ಲಿ ನೀರು, ಆಹಾರ ಒದಗಿಸಲು ಟೆಂಟ್ ಹಾಕಲಾಗಿತ್ತು. ಪೊಲೀಸರಿಗೆ ಹೆಚ್ಚಿನ ಉತ್ತರಾದಾಯಿತ್ವ ಇರಬೇಕು ಎಂಬುದು ನಮ್ಮ ಆಗ್ರಹ ಎಂದು ಪ್ರತಿಭಟನೆಯಲ್ಲಿದ್ದ ಪಮೇಲಾ ರೇನಾಲ್ಡ್ಸ್ ಹೇಳಿದರು.

`ಕಾನೂನು ಅವರನ್ನೇ ರಕ್ಷಿಸುತ್ತಿದೆ’ ಎಂದು 37 ವರ್ಷದ ಆಫ್ರಿಕನ್, ಅಮೆರಿಕನ್ ಶಿಕ್ಷಕಿ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರಿಗೆ ಹೊಣೆಗಾರಿಕೆ ಇರಬೇಕು ಮತ್ತು ಅವರು ಸಮವಸ್ತ್ರದಲ್ಲಿಯೇ ಕ್ಯಾಮೆರಾ ಲಗತ್ತಿಸಿರಬೇಕು ಎಂಬುದು ಅವರ ಆಗ್ರಹವಾಗಿತ್ತು.

ಪ್ರತಿಭಟನೆಯನ್ನು ಹತ್ತಿಕ್ಕಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಆಗ್ರಹಪಡಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡಿದ್ದು, ಡಿ.ಸಿ ಬಳಿ ನಿರೀಕ್ಷೆಗಿಂತಲೂ ಕಡಿಮೆ ಸಂಖ್ಯೆಯಲ್ಲಿ ಜನರಿದ್ದರು’ ಎಂದು ಹೇಳಿದ್ದಾರೆ.

ಅಲ್ಲದೆ, ದೇಶದ ಪ್ರಮುಖ ಹೆಗ್ಗುರುತುಗಳಾದ ಸ್ಯಾನ್ ಫ್ರಾನ್ಸಿಸ್ಕೊದ ಗೋಲ್ಡನ್ ಗೇಟ್ ಬ್ರಿಡ್ಜ್, ನ್ಯೂಯಾರ್ಕ್‌ನ ಬ್ರೂಕಿಂಗ್ ಬ್ರಿಡ್ಜ್ ಬಳಿಯೂ ಪ್ರತಿಭಟನೆ ನಡೆಯಿತು. ಇಲ್ಲಿ, ಕರ್ಫ್ಯೂ ವಿಧಿಸಿರುವ ಕುರಿತು ಪೊಲೀಸರ ಜೊತೆಗೆ ವಾಗ್ವಾದವೂ ನಡೆಯಿತು.

ಪ್ರತಿಭಟನೆಯು ಕೊರೊನಾ ಸೋಂಕು ಹರಡಲು ಕಾರಣವಾಗಬಹುದು ಎಂಬ ಭೀತಿಯ ನಡುವೆಯೇ ಅನೇಕ ಮಂದಿ ಮಾಸ್ಕ್ ಧರಿಸಿದ್ದರು. ಕಪ್ಪುವರ್ಣೀಯರಾದ ರೊಡೆರ್ರಿಕ್ ಸ್ವೀನೆ ಅವರು, ಶ್ವೇತ ವರ್ಣೀಯರೂ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿರುವುದು, ಕಪ್ಪು ವರ್ಣೀಯರೂ ಇರಬೇಕು ಎಂಬ ಬಲವಾದ ಸಂದೇಶವನ್ನು ರವಾನಿಸಿದೆ ಎಂದು ಅಭಿಪ್ರಾಯಪಟ್ಟರು.

ಶ್ವೇತ ವರ್ಣೀಯರು ಈ ನಿಟ್ಟಿನಲ್ಲಿ ಸ್ಪಷ್ಟ, ಬಲವಾದ ನಿಲುವು ತಳೆಯದೇ ಯಾವುದೇ ಬದಲಾವಣೆ ನಿರೀಕ್ಷಿಸಲಾಗದು ಎಂದು  ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು