ಭಾನುವಾರ, ಸೆಪ್ಟೆಂಬರ್ 15, 2019
30 °C

ಲಿಥುವೇನಿಯಾ ಜತೆ ತಂತ್ರಜ್ಞಾನ ಸಹಭಾಗಿತ್ವಕ್ಕೆ ಆದ್ಯತೆ: ನಾಯ್ಡು

Published:
Updated:
Prajavani

ವಿಲ್ನಿಯಸ್: ಕೃಷಿ ಉತ್ಪನ್ನಗಳ ಸಂಸ್ಕರಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಲಿಥುವೇನಿಯಾ ಜತೆಗೆ ಭಾರತ ತಂತ್ರಜ್ಞಾನ ಸಹಭಾಗಿತ್ವ ಹೊಂದಬಹುದು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸೋಮವಾರ ಹೇಳಿದರು.

‘ಎರಡೂ ದೇಶಗಳ ಆರ್ಥಿಕತೆಯಲ್ಲಿ ಸಾಕಷ್ಟು ಪೂರಕ ಅಂಶಗಳಿವೆ. ಇದನ್ನು ಪರಸ್ಪರ ಲಾಭಕ್ಕೆ ಬಳಸಿಕೊಳ್ಳಬಹುದು. ಹೈನುಗಾರಿಕೆ ಮತ್ತು ಚೀಸ್ ಉತ್ಪಾದನೆ ಉದ್ದಿಮೆಯಲ್ಲಿ ಲಿಥುವೇನಿಯಾ ಸಾಕಷ್ಟು ಬೆಳವಣಿಗೆ ಸಾಧಿಸಿದೆ. ಇಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನಗಳನ್ನು ಭಾರತದ ಮೆಗಾ ಫುಡ್‌ಪಾರ್ಕ್‌ಗಳಲ್ಲಿ ಅಳವಡಿಸಿಕೊಳ್ಳಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ–ಲಿಥುವೇನಿಯಾ ಉದ್ಯಮ ವೇದಿಕೆ ಉದ್ದೇಶಿಸಿ ಮಾತನಾಡಿದ ನಾಯ್ಡು, ‘ಮುಕ್ತ, ಪಾರದರ್ಶಕ ಹಾಗೂ ಪ್ರಬಲವಾದ ಉದ್ಯಮ ವಲಯ ಸೃಷ್ಟಿಸುವಲ್ಲಿ ಎರಡೂ ರಾಷ್ಟ್ರಗಳು ಯಶಸ್ಸಿನ ಹಾದಿಯಲ್ಲಿವೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ, ಲಿಥುವೇನಿಯಾದ ಉದ್ಯಮಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಬಲ್ಲದು’ ಎಂದು ತಿಳಿಸಿದರು.

‘ಎರಡೂ ರಾಷ್ಟ್ರಗಳು ಪ್ರಜಾಪ್ರಭುತ್ವ ಹಾಗೂ ಕಾನೂನು ವ್ಯವಸ್ಥೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಇದರಿಂದಾಗಿ, ಐರೋಪ್ಯ ರಾಷ್ಟ್ರಗಳಲ್ಲಿ ಲಿಥುವೇನಿಯಾ ಭಾರತದ ಪ್ರಮುಖ ಸಹಭಾಗಿ ರಾಷ್ಟ್ರವಾಗಿದೆ’ ಎಂದು ನಾಯ್ಡು ಅವರು ತಿಳಿಸಿದ್ದಾರೆ.

Post Comments (+)