ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆ: ಅಭ್ಯರ್ಥಿಗಳ ಭವಿಷ್ಯ ‘ಇವಿಎಂ’ನಲ್ಲಿ ಭದ್ರ

ಕೊಡಗು ಜಿಲ್ಲೆ: ಕಾವೇರಿ ನಾಡಿನಲ್ಲಿ 10 ಗಂಟೆವರೆಗೆ ನೀರಸ ಮತದಾನ, ನಂತರ ಉತ್ಸಾಹದಲ್ಲಿ ಮತದಾರರು: ಶೇ 75 ಮತ ಚಲಾವಣೆ
Last Updated 13 ಮೇ 2018, 10:13 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಉತ್ಸಾಹದ ಮತದಾನ ನಡೆಯಿತು. ಸಣ್ಣಪುಟ್ಟ ಲೋಪದೋಷ ಹೊರತು ಪಡಿಸಿದರೆ, ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಆಯಿತು.

ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗದ ಮತಗಟ್ಟೆಗಳಲ್ಲಿ ಮತದಾರರ ಉತ್ಸಾಹ ಕಂಡುಬಂತು. ನಗರದ ವಿವಿಧ ಮತಗಟ್ಟೆಗಳಲ್ಲಿ ಬೆಳಿಗ್ಗೆ 10 ಗಂಟೆಯಾದರೂ ಅಂತಹ ಉತ್ಸಾಹ ಕಂಡುಬರಲಿಲ್ಲ. ಕೆಲವು ಮತಗಟ್ಟೆಯಲ್ಲಿ ಚುನಾವಣೆ ಸಿಬ್ಬಂದಿ ಕಾದು ಕುಳಿತಿದ್ದರು. 10ರ ನಂತರ ಮತಗಟ್ಟೆಯತ್ತ ಮತದಾರರು ಹೆಜ್ಜೆ ಹಾಕಲು ಆರಂಭಿಸಿದರು.

ನಗರಸಭೆ ಆವರಣದಲ್ಲಿ ‘ಮಾದರಿ ಮತಗಟ್ಟೆ’ ಸ್ಥಾಪಿಸಲಾಗಿತ್ತು. ಅಲ್ಲಿ ಮತದಾನ ಮಾಡಿದವರಿಗೆ ಗುಲಾಬಿ ಹೂವು ನೀಡಿ ಕೇಂದ್ರಕ್ಕೆ ಬರ ಮಾಡಿಕೊಳ್ಳಲಾಯಿತು. ಮತಗಟ್ಟೆಯನ್ನೂ ಬಲೂನ್‌ನಿಂದ ಸಿಂಗರಿಸಲಾಗಿತ್ತು.
ಮತದಾನ ಮಾಡಿ ಬಂದವರಿಗೆ, ಪೇಟ ತೊಡಿಸಿ, ರಾಜ ಪೋಷಾಕು ಹಾಕಿ ಗೌರವಿಸಲಾಯಿತು. ಮಹಿಳೆಯರಿಗೂ ಪೇಟ ಹಾಕಿ ವಿಶೇಷ ಗೌರವ ನೀಡಲಾಯಿತು.

ಮೊದಲು ಚುನಾವಣೆ ಸಿಬ್ಬಂದಿಯ ಈ ಆತಿಥ್ಯಕ್ಕೆ ವೀಣಾ, ದೀಪಾಂಜಲಿ, ವಿಜಯ್‌, ಸೌಮ್ಯಾ ಅವರು ಪಾತ್ರರಾದರು. ‘ಮತದಾನವೆಂದರೆ ಈ ಬಾರಿ ಹಬ್ಬದಂತೆ ಭಾಸವಾಗುತ್ತಿದೆ’ ಎಂದು ಅವರು ಸಂತೋಷ ಹಂಚಿಕೊಂಡರು.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆ ಸಂಖ್ಯೆ: 224ರಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಕೈಕೊಟ್ಟಿತ್ತು. ಹೀಗಾಗಿ, ಒಂದೂವರೆ ಗಂಟೆ ತಡವಾಗಿ ಮತದಾನ ಆರಂಭಗೊಂಡಿತು. ಇನ್ನು ದುಬಾರೆ, ವೆಸ್ಟ್‌ ನಮ್ಮೆಲೆಯ ಮತಗಟ್ಟೆಯಲ್ಲೂ ‘ಇವಿಎಂ’ ಕೈಕೊಟ್ಟ ಕಾರಣ ತಡವಾಗಿ ಮತದಾನ ಆರಂಭಗೊಂಡಿತು.

ವೋಟರ್‌ ಐಡಿ ಗೊಂದಲ: ಗುಡ್ಡೆಹೊಸೂರು ಮತಗಟ್ಟೆಯಲ್ಲಿ ಮತದಾರರ ಗುರುತಿನ ಚೀಟಿಯ ಗೊಂದಲದಿಂದ ದಂಪತಿ ಹಕ್ಕು ಚಲಾವಣೆಯಿಂದ ವಂಚಿತರಾದರು. ಮತಗಟ್ಟೆ ಅಧಿಕಾರಿಗನ್ನು ಪ್ರಶ್ನಿಸಿದರು; ಅವರೂ ಸಹ ಅಸಹಾಯಕತೆ ವ್ಯಕ್ತಪಡಿಸಿದರು ಎಂದು ದಂಪತಿ ದೂರಿದರು.

ಎಚ್‌.ಎಂ. ಗಿರೀಶ್‌, ಎಚ್‌.ಸಿ. ಲಕ್ಷ್ಮಿ ಅವರು ಗುರುತಿನ ಚೀಟಿ ಹಿಡಿದು ಮಧ್ಯಾಹ್ನ 12ರ ವೇಳೆಗೆ ಮತಗಟ್ಟೆಗೆ ಬಂದಿದ್ದರು. ಅವರ ಗುರುತಿನ ಚೀಟಿ ಸಂಖ್ಯೆ 1,363 ಹಾಗೂ 1,358 ಆಗಿತ್ತು. ಈ ದಂಪತಿ ಬರುವುದಕ್ಕೂ ಮೊದಲೇ ಅದೇ ಸಂಖ್ಯೆಯ ಗುರುತಿನ ಚೀಟಿ ಹೊಂದಿದ್ದ ಇಬ್ಬರು ಮತದಾನ ಮಾಡಿ ಹೋಗಿದ್ದರು. ಕೊನೆಗೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಅವರೂ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ.

ಕಡಗದಾಳು ಗ್ರಾಮದಲ್ಲಿ ಉತ್ಸಾಹ:
ಸಮೀಪದ ಕಡಗದಾಳು ಗ್ರಾಮದಲ್ಲಿ ‘ಸಖಿ’ ಮತಗಟ್ಟೆಯಲ್ಲಿ ಬೆಳಿಗ್ಗೆ 10ರ ವೇಳೆಗೆ ಶೇ 30ರಷ್ಟು ಮತದಾನ ನಡೆದಿತ್ತು. ಆ ಮತಗಟ್ಟೆಯಲ್ಲಿ 1,195 ಮತದಾರರು ಇದ್ದರು. ಪುರುಷ ಹಾಗೂ ಮಹಿಳಾ ಮತದಾರರು ಸರದಿ ಸಾಲಿನಲ್ಲಿ ನಿಂತು, ಹಕ್ಕು ಚಲಾಯಿಸಿದರು.

ಚೆಟ್ಟಳ್ಳಿ ಮತಗಟ್ಟೆಯಲ್ಲೂ ಬಿಸಿಲು ಲೆಕ್ಕಿಸದೇ ಮತದಾರರು ಮತದಾನ ಮಾಡಿದರು. ನಂಜರಾಯಪಟ್ಟಣ, ವಾಲ್ನೂರು, ದುಬಾರೆ, ರಂಗಸಮುದ್ರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಜನಸಂಖ್ಯೆ ಕಡಿಮೆಯಿತ್ತು. ನಂತರ ಹೆಚ್ಚಿನ ಸಂಖ್ಯೆಯಲ್ಲಿ ಬಂದರು.

ಯಾರ್‍ಯಾರು ಎಲ್ಲೆಲ್ಲಿ?: ವಿರಾಜಪೇಟೆ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ನಗರದ ಜೂನಿಯರ್‌ ಕಾಲೇಜು ಕೇಂದ್ರದಲ್ಲಿ ಬೆಳಿಗ್ಗೆಯೇ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಅರುಣ್‌ ಮಾಚಯ್ಯ ಗೋಣಿಕೊಪ್ಪಲಿನಲ್ಲಿ, ಜೆಡಿಎಸ್‌ ಅಭ್ಯರ್ಥಿ ಸಂಕೇತ್‌ ಪೂವಯ್ಯ ಅವರು ವಿರಾಜಪೇಟೆ ಸಂತ ಮೈಕಲರ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್‌ ಕುಂಬೂರು ಮತಗಟ್ಟೆಯಲ್ಲಿ ಮತದಾನ ಮಾಡಿದರು.

ತಾಲ್ಲೂಕು ಕಚೇರಿಯ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮತದಾನ ಮಾಡಿದರು. ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರು ಸಂತ ಮೈಕಲರ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರ: ಎಂ.ಪಿ. ಅಪ್ಪಚ್ಚು ರಂಜನ್‌ (ಬಿಜೆಪಿ), ಕೆ.ಪಿ. ಚಂದ್ರಕಲಾ (ಕಾಂಗ್ರೆಸ್‌), ಬಿ.ಎ. ಜೀವಿಜಯ (ಜೆಡಿಎಸ್‌), ಭಾರ್ಗವ್‌ ಚೆರಿಯಮನೆ (ಅಖಿಲ ಭಾರತ್‌ ಹಿಂದೂ ಮಹಾಸಭಾ), ರಶೀದಾ ಬೇಗಂ (ಎಂಇಪಿ), ಕೆ.ಬಿ. ರಾಜು (ಭಾರತೀಯ ರಿಪಬ್ಲಿಕ್‌ ಪಕ್ಷ), ಸಿ.ಯು. ಕಿಶನ್‌, ಎಂ. ಖಲೀಲ್‌, ಬಿ.ಎಂ. ತಿಮ್ಮಪ್ಪ, ಎಂ. ಮಹಮ್ಮದ್‌ ಹನೀಫ್‌, ಪಿ.ಎಸ್‌. ಯಡೂರಪ್ಪ (ಎಲ್ಲರೂ ಪಕ್ಷೇತರ) ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ವಿರಾಜಪೇಟೆ ಕ್ಷೇತ್ರ: ಅರುಣ್‌ ಮಾಚಯ್ಯ (ಕಾಂಗ್ರೆಸ್‌), ಕೆ.ಜಿ. ಬೋಪಯ್ಯ (ಬಿಜೆಪಿ), ಸಂಕೇತ್‌ ಪೂವಯ್ಯ (ಜೆಡಿಎಸ್‌), ಎಚ್‌.ಡಿ. ಬಸವರಾಜ್‌ (ಎಂಇಪಿ), ಎಚ್‌.ಡಿ. ದೊಡ್ಡಯ್ಯ (ಪಕ್ಷೇತರ), ಎಂ.ಕೆ. ನಂಜಪ್ಪ (ಪಕ್ಷೇತರ) ಅವರು ಸ್ಪರ್ಧಿಸಿದ್ದು ಎಲ್ಲರ ಭವಿಷ್ಯವೂ ‘ಇವಿಎಂ’ನಲ್ಲಿ ಭದ್ರವಾಗಿದೆ. ಜಿಲ್ಲೆಯ ಎರಡು ಕ್ಷೇತ್ರಗಳಿಂದ 17 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಹಾಡಿ ಜನರಿಂದ ಬಹಿಷ್ಕಾರ

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಕ್ಕಬ್ಬೆ ಸಮೀಪದ ಕೆರೆತೊಟ್ಟು ಪೈಸಾರಿ ನಿವಾಸಿಗಳು ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ, 200ಕ್ಕೂ ಹೆಚ್ಚು ಮಂದಿ ಮತದಾನ ಬಹಿಷ್ಕರಿಸಿದರು. ‘ಸಂಪರ್ಕ ರಸ್ತೆಗೆ ಖಾಸಗಿಯವರು ಬೇಲಿ ಹಾಕಿಕೊಂಡು ಸಂಚಾರಕ್ಕೆ ಅಡ್ಡಿಉಂಟು ಮಾಡುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಸಮಸ್ಯೆ ಬಗೆಹರಿಸಿಲ್ಲ. ಕುಡಿಯಲು ನೀರು ಇಲ್ಲ. ಮಕ್ಕಳಿಗೆ ಅಂಗನವಾಡಿ ಹಾಗೂ ಶಾಲೆಯನ್ನು ಮಂಜೂರು ಮಾಡಿಸಿಕೊಟ್ಟಿಲ್ಲ. ಮತದಾನ ಮಾಡಲು 7 ಕಿ.ಮೀ ದೂರ ಕ್ರಮಿಸುವ ಪರಿಸ್ಥಿತಿಯಿದೆ. ಎಂದು ಪೈಸಾರಿ ನಿವಾಸಿಗಳು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT