ಭಾನುವಾರ, ಮಾರ್ಚ್ 29, 2020
19 °C
ಬ್ರಿಕ್ಸ್‌ ಉದ್ಯಮ ಮುಖಂಡರ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಹೂಡಿಕೆ ಸ್ನೇಹಿ ಆರ್ಥಿಕತೆಗೆ ಭಾರತ ಮುಕ್ತ: ನರೇಂದ್ರ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ರೆಸಿಲಿಯಾ: ಇಡೀ ವಿಶ್ವದಲ್ಲೇ ಭಾರತ ಅತಿದೊಡ್ಡ ‘ಮುಕ್ತ ಮತ್ತು ಹೂಡಿಕೆ ಸ್ನೇಹಿ’ ಆರ್ಥಿಕತೆಯ ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬ್ರಿಕ್ಸ್ ಉದ್ಯಮ ನಾಯಕರ ವೇದಿಕೆಯಲ್ಲಿ ಮಾತನಾಡಿದ ಅವರು, ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಮಾಡುವಂತೆ ಮನವಿ ಮಾಡಿದರು.

ಜಾಗತಿಕ ಆರ್ಥಿಕ ಕುಸಿತದ ನಡುವೆಯೂ ಐದು ದೇಶಗಳ ಗುಂಪು ರಚಿಸಿರುವುದರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಹೇಳಿದರು.

‘ಭಾರತ ಅನಂತ ಅವಕಾಶಗಳ ನೆಲ. ಆದ್ದರಿಂದ ನಮ್ಮಲ್ಲಿಗೆ ಬಂದು ಹೂಡಿಕೆ ಮಾಡಿ’ ಎಂದು ಕರೆ ನೀಡಿದರು.

‘ಬ್ರಿಕ್ಸ್‌ ದೇಶಗಳು ವಿಶ್ವದ ಆರ್ಥಿಕ ಬೆಳವಣಿಗೆಯಲ್ಲೇ ಶೇ 50 ರಷ್ಟು ಪಾಲು ಹೊಂದಿವೆ. ಜಾಗತಿಕ ಮಟ್ಟದಲ್ಲಿ ಹಿಂಜರಿತ ಇದ್ದರೂ ಬ್ರಿಕ್ಸ್‌ ದೇಶಗಳಲ್ಲಿ ಆರ್ಥಿಕ ಅಭಿವೃದ್ಧಿ ಇದೆ. ಕೋಟ್ಯಂತರ ಜನ ಈ ದೇಶಗಳಲ್ಲಿ ಬಡತನದಿಂದ ಹೊರ ಬಂದಿದ್ದಾರೆ ಮತ್ತು ತಂತ್ರಜ್ಞಾನ ಹಾಗೂ ಸಂಶೋಧನೆಯಲ್ಲಿ ಈ ದೇಶಗಳು ಹೊಸತನ್ನು ಸಾಧಿಸಿವೆ’ ಎಂದು ಹೇಳಿದರು.

ವೀಸಾ ಮುಕ್ತ ಪ್ರವೇಶ: ಲ್ಯಾಟಿನ್ ಅಮೆರಿಕನ್ ದೇಶಕ್ಕೆ ವೀಸಾ ಮುಕ್ತ ಪ್ರವೇಶಕ್ಕೆ ಭಾರತೀಯರಿಗೆ ಅವಕಾಶ ನೀಡಿದ್ದಕ್ಕೆ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸನಾರೊ ಅವರಿಗೆ ಮೋದಿ ಕೃತಜ್ಞತೆ ಸಲ್ಲಿಸಿದರು.

ಮೋದಿಗೆ ಆಹ್ವಾನ: ಮುಂದಿನ ವರ್ಷ ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಪ್ರಧಾನಿ ಮೋದಿಗೆ ಆಹ್ವಾನ ನೀಡಿದರು.

ಬ್ರೆಜಿಲ್‌ ಅಧ್ಯಕ್ಷರ ಜತೆಗೂ ಮೋದಿ ಮಾತುಕತೆ ನಡೆಸಿದರು. ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರಕ್ಕಾಗಿ ಕಾರ್ಯತಂತ್ರ ಮತ್ತು ವಿಶ್ವದ ಐದು ಪ್ರಮುಖ ಆರ್ಥಿಕತೆಯ ದೇಶಗಳ ಜತೆ ಭಾರತದ ಬಲ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದರು.

ಚೀನಾ ಅಧ್ಯಕ್ಷರ ಭೇಟಿ: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಅವರು, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವಿಷಯಗಳ ಕುರಿತು ಚರ್ಚೆ ನಡೆಸಿದರು. ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಸಹಭಾಗಿತ್ವಕ್ಕಾಗಿ ಉಭಯ ನಾಯಕರು ಮಾತುಕತೆ ನಡೆಸಿದರು.

ಗಡಿ ಸಂಬಂಧಿತ ಮತ್ತೊಂದು ಸುತ್ತಿನ ಮಾತುಕತೆ ಭಾರತ ಮತ್ತು ಚೀನಾ ಒಪ್ಪಿರುವುದಾಗಿ ಹೇಳಿಕೆಯೊಂದು ತಿಳಿಸಿದೆ. ಭಾರತ–ಚೀನಾ ಗಡಿ ಮಾತುಕತೆ ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದಿತ್ತು.

ಸಾಮಾನ್ಯ ಪಾವತಿ ವ್ಯವಸ್ಥೆಗೆ ಒಲವು (ಮಾಸ್ಕೊ ವರದಿ): ಸಾಮಾನ್ಯ ಪಾವತಿ ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ಬ್ರಿಕ್ಸ್‌ ದೇಶಗಳು ಒಲವು ವ್ಯಕ್ತಪಡಿಸಿವೆ ಎಂದು ರಷ್ಯಾದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಅಮೆರಿಕದ ಡಾಲರ್‌ ಮೇಲೆ ಹೆಚ್ಚು ಅವಲಂಬಿಸದ ಮಾರ್ಗದ ಬಗ್ಗೆ ರಷ್ಯಾ ಮತ್ತು ಬ್ರಿಕ್ಸ್‌ ದೇಶಗಳು ಚಿಂತನೆ ನಡೆಸುತ್ತಿವೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು