ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ವಿಶ್ವ ಯುದ್ಧದ ಬಾಂಬ್‌ ಸ್ಫೋಟಗೊಂಡಿದ್ದು ಈಗ!

Last Updated 26 ಜೂನ್ 2019, 16:01 IST
ಅಕ್ಷರ ಗಾತ್ರ

ಬರ್ಲಿನ್‌:ಎರಡನೇ ವಿಶ್ವಯುದ್ಧದ ಸಮಯದಲ್ಲಿ ಜರ್ಮನಿಯ ಅಹ್ಲ್‌ಬಾಚ್‌ ಎಂಬಲ್ಲಿ ಅಮೆರಿಕ ನೇತೃತ್ವದ ಮಿತ್ರ ಪಡೆಗಳುಹಾಕಿದ್ದ ಬಾಂಬ್‌ ಮಂಗಳವಾರ (ಜೂನ್‌ 26) ಸ್ಫೋಟಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಹ್ಲ್‌ಬಾಚ್‌ ಎಂಬುದು ಜರ್ಮನಿಯ ಒಂದು ಸಣ್ಣ ಹಳ್ಳಿ. ಹಳ್ಳಿಯ ವಿಶಾಲವಾದ ಜೋಳದ ಬೆಳೆಯ ನಡುವೆ ಮಂಗಳವಾರ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿತ್ತು. ಆರಂಭದಲ್ಲಿ ನಿಗೂಢವಾಗಿದ್ದ ಈ ಸ್ಫೋಟ ಪ್ರಕರಣ ವಿವಿಧ ಆಯಾಮಗಳನ್ನು ಪಡೆದುಕೊಂಡಿತ್ತು. ಭೂಕಂಪನದಿಂದ ಸ್ಫೋಟವಾಗಿರಬಹುದು, ಅಂತರಿಕ್ಷದಿಂದ ಏನೋ ಬಿದ್ದರಬಹುದು, ಕ್ಷುದ್ರಗ್ರಹಗಳ ತುಣುಕು ಬಿದ್ದಿರಬಹುದುಎಂದೆಲ್ಲ ವಿಶ್ಲೇಷಿಸಲಾಯಿತು. ಆದರೆ, ಸ್ಫೋಟದ ಜಾಗದಲ್ಲಿ ಆಗಿದ್ದ ಹಾನಿಯನ್ನು ವೈಮಾನಿಕ ಸಮೀಕ್ಷೆ ನಡೆಸಿದಾಗ ಇದು ಬಾಂಬ್‌ನಿಂದಾದ ಸ್ಫೋಟ ಎಂಬುದು ಗೊತ್ತಾಗಿದೆ.

1940–45ರ ಸುಮಾರಿನಲ್ಲಿ ಈ ಬಾಂಬ್‌ ಅಹ್ಲ್‌ಬಾಚ್‌ನಲ್ಲಿ ಬಿದ್ದಿತ್ತು ಎನ್ನಲಾಗಿದ್ದು, ಆಗ ಸ್ಫೋಟಗೊಳ್ಳದೇ ಕಾಲಾಂತರದಲ್ಲಿ ಭೂಮಿಯಲ್ಲಿ ಹುದುಗಿದೆ. ಮಂಗಳವಾರ ರಾಸಾಯನಿಕ ಪ್ರಕ್ರಿಯೆಗಳು ನಡೆದು ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.ಸರಿಸುಮಾರು 550 ಪೌಂಡ್‌ ಗಾತ್ರದ ಸ್ಫೋಟಕ ಇದಾಗಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಎರಡನೇ ವಿಶ್ವ ಯುದ್ಧದ ವೇಳೆ ಮಿತ್ರ ಪಡೆಗಳು ಯುರೋಪ್‌ನಾದ್ಯಂತ 2.7 ಮಿಲಿಯನ್‌ ಟನ್‌ಗಳಷ್ಟು ಬಾಂಬ್‌ ಅನ್ನು ಹಾಕಿದ್ದವು. ಇದರಲ್ಲಿ ಅರ್ಧಭಾಗ ಜರ್ಮನಿಯ ಮೇಲೇ ಹಾಕಲಾಗಿತ್ತು.ಈ ಪೈಕಿ ಶೇ. 10 ರಷ್ಟು ಬಾಂಬ್‌ಗಳು ಸ್ಫೋಟಗೊಂಡಿರಲಿಲ್ಲ. ಅಂದು ಸ್ಫೋಟವಾಗದೇ ಉಳಿದ ಬಾಂಬ್‌ಗಳು ಇಂದಿಗೂ ಜರ್ಮನಿಯಾದ್ಯಂತ ಆಗಾಗ ಪತ್ತೆಯಾಗುತ್ತಲೇ ಇರುತ್ತವೆ. ಕಟ್ಟಡ ನಿರ್ಮಾಣದ ವೇಳೆ, ಮಣ್ಣು ಅಗೆಯುವ ವೇಳೆ ಅಲ್ಲಲ್ಲಿ ಬಾಂಬ್‌ಗಳು ಪತ್ತೆಯಾದ ಉದಾಹರಣೆಗಳು ಜರ್ಮನಿಯಲ್ಲಿ ಸಾಕಷ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT