ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಬೀಗ ಹಾಕಿದ ವಿದ್ಯಾರ್ಥಿಗಳು

ಅಮ್ಮನಲ್ಲೂರು ಗ್ರಾಮ: ಶಿಕ್ಷಕರ ಕೊರತೆಗೆ ಆಕ್ರೋಶ
Last Updated 15 ಜೂನ್ 2018, 13:01 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿನ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಎಸ್‌ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ಬುಧವಾರ ಬೀಗ ಜಡಿದು ಧರಣಿ ನಡೆಸಿದರು.

‘ಬೇಸಿಗೆ ರಜೆಯ ನಂತರ ಶಾಲೆ ಆರಂಭವಾಗಿ ಎರಡು ವಾರ ಕಳೆದಿದೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಪಾಠ ಬೋಧನೆ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಶಾಲೆಯು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿದ್ದು, 1ನೇ ತರಗತಿಯಿಂದ 8ನೇ ತರಗತಿವರೆಗೆ ಒಟ್ಟು 75 ಮಕ್ಕಳಿದ್ದಾರೆ. ಆದರೆ, ಇಷ್ಟು ವಿದ್ಯಾರ್ಥಿಗಳಿಗೆ ಕೇವಲ ಇಬ್ಬರೇ ಶಿಕ್ಷಕರಿದ್ದಾರೆ. 8ನೇ ತರಗತಿ ಪ್ರೌಢ ಶಾಲಾ ಹಂತಕ್ಕೆ ಬರುವುದರಿಂದ ಪ್ರತ್ಯೇಕ ಶಿಕ್ಷಕರನ್ನು ನೇಮಕ ಮಾಡಿಲ್ಲ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸಿ.ರಮೇಶ್ ಹೇಳಿದರು.

‘ಶಿಕ್ಷಕರ ಕೊರತೆ ಸಂಬಂಧ ಬೇಸಿಗೆ ರಜೆಗೂ ಮುನ್ನವೇ ಶಿಕ್ಷಣ ಇಲಾಖೆಗೆ ದೂರು ನೀಡಿ ಹೊಸ ಶಿಕ್ಷಕರನ್ನು ನೇಮಿಸುವಂತೆ ಮನವಿ ಮಾಡಿದ್ದೆವು. ರಜೆ ಮುಗಿದು ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ವರ್ಗಾವಣೆ ಪ್ರಕ್ರಿಯೆಯಲ್ಲಿ ಹೊಸ ಶಿಕ್ಷಕರನ್ನು ನಿಯೋಜಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಆ ಭರವಸೆ ಹುಸಿಯಾಗಿದೆ’ ಎಂದು ದೂರಿದರು.

‘ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಇಲಾಖೆಯ ಯಾವುದೇ ಅಧಿಕಾರಿ ಶಾಲೆಗೆ ಭೇಟಿ ನೀಡಿ ಶಿಕ್ಷಕರ ಕೊರತೆ ಬಗ್ಗೆ ಪರಿಶೀಲನೆ ಮಾಡಿಲ್ಲ. ಅಧಿಕಾರಿಗಳಿಗೆ ಮಕ್ಕಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ಧರಣಿನಿರತರು ದೂರಿದರು.

‘ಶಾಲೆಗೆ ಶೀಘ್ರವೇ ಹೊಸ ಶಿಕ್ಷಕರನ್ನು ನೇಮಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಎಸ್‌ಡಿಎಂಸಿ ಸದಸ್ಯರಾದ ಆಂಜನೇಯ, ವೆಂಕಟೇಶ್, ರಾಮಕೃಷ್ಣಪ್ಪ, ಮುನೇಗೌಡ, ಮುನಿರಾಜು, ಮಂಜುಳಾ, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT