ಗುರುವಾರ , ಜೂಲೈ 2, 2020
28 °C
ಚರ್ಚೆ ಆರಂಭ

ಭಾರತದ ಜತೆ ಗಡಿ ವಿವಾದ l ನೇಪಾಳ ಸಂಸತ್ತಿನಲ್ಲಿ ಭೂಪಟ ತಿದ್ದುಪಡಿ ಮಸೂದೆ ಮಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು (ನೇಪಾಳ): ನೇಪಾಳದ ಭೌಗೋಳಿಕ ಮತ್ತು ರಾಜಕೀಯ ಭೂಪಟವನ್ನು ಮಾರ್ಪಡಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸರ್ಕಾರವು ಸಂಸತ್ತಿನಲ್ಲಿ ಭಾನುವಾರ ಮಂಡನೆ ಮಾಡಿದೆ. ಭಾರತದ ಜತೆಗಿನ ವಿವಾದಿತ ಗಡಿ ಮತ್ತು ಭೂಪ್ರದೇಶಗಳು ನೇಪಾಳದ ಭಾಗ ಎಂದು ಈ ಭೂಪಟದಲ್ಲಿ ತೋರಿಸಲಾಗಿದೆ.

ಇದು ಸಂವಿಧಾನ ತಿದ್ದುಪಡಿ ಮಸೂದೆ ಆದ ಕಾರಣ, ಸಂಸತ್ತಿನ ಮೂರನೇ ಎರಡರಷ್ಟು ಸದಸ್ಯರ ಅನುಮೋದನೆ ಅಗತ್ಯವಾಗಿತ್ತು.

ಮೇ 27ರಂದೇ ಈ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸಲಾಗಿತ್ತು. ಸಂಸತ್ತಿನ ಕಲಾಪದಲ್ಲೂ ಮಸೂದೆ ಮಂಡನೆಯನ್ನು ಪಟ್ಟಿ ಮಾಡಲಾಗಿತ್ತು. ಪ್ರಮುಖ ವಿರೋಧ ಪಕ್ಷ ನೇಪಾಳಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ ಕಾರಣ, ಮಸೂದೆ ಮಂಡನೆಯಿಂದ ಸರ್ಕಾರ ಹಿಂದೆ ಸರಿದಿತ್ತು.

ಆದರೆ, ನೇಪಾಳಿ ಕಾಂಗ್ರೆಸ್ ಪಕ್ಷವು ಮಸೂದೆಗೆ ಶನಿವಾರ ಬೆಂಬಲ ವ್ಯಕ್ತಪಡಿಸಿತ್ತು. ಹೀಗಾಗಿ ಸರ್ಕಾರ ಭಾನುವಾರ ಮಸೂದೆ ಮಂಡಿಸಿದೆ. ನೇಪಾಳ ಸಂಸತ್ತಿನ ಎರಡೂ ಸದನಗಳಲ್ಲಿ ಚರ್ಚೆ ನಡೆದು, ಅನುಮೋದನೆ ದೊರೆಯಬೇಕಿದೆ. ಚರ್ಚೆ ಒಂದೆರಡು ವಾರಗಳ ಅವಧಿಯಷ್ಟು ವಿಸ್ತರಿಸುವ ಸಾಧ್ಯತೆ ಇದೆ.

* ಟಿಬೆಟ್‌ನಲ್ಲಿರುವ ಕೈಲಾಸ–ಮಾನಸ ಸರೋವರ ಯಾತ್ರೆಯ ರಸ್ತೆಗೆ ಸಂಪರ್ಕ ಕಲ್ಪಿಸುವ ಲಿಪುಲೇಖ್ ಪಾಸ್‌ಗೆ ಸಂಬಂಧಿಸಿದ ವಿವಾದ ಇದಾಗಿದೆ

* ಲಿಪುಲೇಖ್ ಪಾಸ್‌ನ ಮೂರ್ವ ದಿಕ್ಕಿಗೆ ಕಾಲಾಪಾನಿ ಇದೆ. ಉತ್ತರಕ್ಕೆ ಟಿಬೆಟ್ ಇದೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಭಾರತವಿದೆ

* ಇದು ಭಾರತದ ಗಡಿಯಲ್ಲಿದೆ. ಭಾರತದ ಪ್ರತಿಪಾದನೆಯನ್ನು ಚೀನಾ ಸಹ ಒಪ್ಪಿದೆ. ಹೀಗಾಗಿ ಈ ಪಾಸ್‌ನ ಮೂಲಕ ಭಾರತೀಯರು ಟಿಬೆಟ್ ಪ್ರವೇಶಿಸಲು ಅವಕಾಶ ನೀಡಿದೆ

* ಉತ್ತರಾಖಂಡದ ಧಾರಾಚುಲಾದಿಂದ ಲಿಪುಲೇಖ್ ಪಾಸ್‌ಗೆ ಈವರೆಗೆ ಕಾಲ್ನಡಿಗೆ ಹಾದಿ ಮಾತ್ರ ಇತ್ತು. ಕೇಂದ್ರ ಸರ್ಕಾರ ಇಲ್ಲಿ ರಸ್ತೆ ನಿರ್ಮಿಸಿದೆ. ಈಚೆಗಷ್ಟೇ ಈ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದರು.

* ಈ ರಸ್ತೆಯ ಉದ್ಘಾಟನೆಯ ನಂತರ ಲಿಪುಲೇಖ್ ಪಾಸ್‌ನ ದಕ್ಷಿಣ ಭಾಗವೂ ನಮ್ಮದು ಎಂದು ನೇಪಾಳ ಪ್ರತಿಪಾದಿಸಿತ್ತು. ಆನಂತರ ನೇಪಾಳದ ನೂತನ ನಕ್ಷೆಯನ್ನು ರೂಪಿಸಲು ಮುಂದಾಗಿತ್ತು.

*
ನೇಪಾಳದಲ್ಲಿನ ಬೆಳವಣಿಗೆಯನ್ನು ಗಮನಿಸಿದ್ದೇವೆ. ನೇಪಾಳದ ಜತೆ ಮುಕ್ತವಾಗಿ ಚರ್ಚಿಸಲು ಭಾರತ ಸಿದ್ಧವಿದೆ. ಇದು ನಿರಂತರ ಪ್ರಕ್ರಿಯೆ ಆಗಿದ್ದು, ಸಕಾರಾತ್ಮಕ, ರಚನಾತ್ಮಕ ಪ್ರಯತ್ನ ಅಗತ್ಯ.
-ಅನುರಾಗ್ ಶ್ರೀವಾಸ್ತವ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು