ಸೋಮವಾರ, ನವೆಂಬರ್ 18, 2019
25 °C
ಆರ್ಥಿಕ ಸುಧಾರಣೆಗೆ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ: ಹಣಕಾಸು ಸಚಿವೆ ಹೇಳಿಕೆ

ಹೂಡಿಕೆಗೆ ಭಾರತಕ್ಕಿಂತ ಪ್ರಶಸ್ತ ಸ್ಥಳ ಬೇರೆ ಇಲ್ಲ: ನಿರ್ಮಲಾ ಸೀತಾರಾಮನ್

Published:
Updated:

ವಾಷಿಂಗ್ಟನ್: ಹೂಡಿಕೆದಾರರಿಗೆ ಭಾರತಕ್ಕಿಂತ ಹೆಚ್ಚು ಪ್ರಶಸ್ತವಾದ ಸ್ಥಳ ಇನ್ನೊಂದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಪ್ರಧಾನ ಕಚೇರಿಯಲ್ಲಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪ್ರಜಾಪ್ರಭುತ್ವವನ್ನು ಪ್ರೀತಿಸುವ, ಬಂಡವಾಳ ಹೂಡಿಕೆದಾರರನ್ನು ಗೌರವಿಸುವ ವಾತಾವರಣ ಹೊಂದಿರುವ ಭಾರತವು ಹೂಡಿಕೆಗೆ ಉತ್ತಮ ವೇದಿಕೆಯಾಗಿದೆ’ ಎಂದು ಹೇಳಿದ್ದಾರೆ. ಜತೆಗೆ, ಆರ್ಥಿಕತೆಯ ಸುಧಾರಣೆಗೆ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಅವರು ಹೂಡಿಕೆದಾರರಿಗೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಕೇಂದ್ರದ ಆರ್ಥಿಕ ನೀತಿ ಟೀಕಿಸಿದ ನಿರ್ಮಲಾ ಪತಿ

‘ಇಂದು ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಕೌಶಲಯುಕ್ತ ಮಾನವ ಸಂಪನ್ಮೂಲವನ್ನು ಒಳಗೊಂಡಿದೆ. ಏನೇನು ಸುಧಾರಣೆಗಳಾಗಬೇಕೋ ಆ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ’ ಎಂದು ನಿರ್ಮಲಾ ಹೇಳಿದ್ದಾರೆ.

ಭಾರತದಲ್ಲೇ ಏಕೆ ಹೂಡಿಕೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶದಲ್ಲಿ ನ್ಯಾಯಾಲಯದ ಕಲಾಪಗಳಲ್ಲಿ ತುಸು ವಿಳಬವಾಗುವುದು ನಿಜ. ಆದರೆ, ಭಾರತವು ಪಾರದರ್ಶಕ ಮತ್ತು ಮುಕ್ತ ಸಮಾಜವನ್ನು ಹೊಂದಿದೆ. ಕಾನೂನು ಪಾಲನೆಯಾಗುತ್ತಿದೆ ಮತ್ತು ಸಾಕಷ್ಟು ಸುಧಾರಣೆಗಳಾಗುತ್ತಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಹೂಡಿಕೆಸ್ನೇಹಿ ವಾತಾವರಣವಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಾಲ ಮೇಳ: ಬ್ಯಾಂಕ್‌ಗಳಿಂದ ₹81,781 ಕೋಟಿ ವಿತರಣೆ

ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಮತ್ತು ಯುಎಸ್–ಇಂಡಿಯಾ ಸ್ಟ್ರೆಟಜಿಕ್ ಅಂಡ್ ಪಾರ್ಟ್‌ನರ್ಶಿಪ್ ಫೋರಂ ಜಂಟಿಯಾಗಿ ಸಂವಾದ ಆಯೋಜಿಸಿದ್ದವು.

ಪ್ರತಿಕ್ರಿಯಿಸಿ (+)