ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವವಾದಿ ಬಿಜೆಪಿಯನ್ನು ತಿರಸ್ಕರಿಸಿ

ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಹೇಳಿಕೆ
Last Updated 5 ಮೇ 2018, 13:00 IST
ಅಕ್ಷರ ಗಾತ್ರ

ಕೋಲಾರ: ‘ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ವಿಷ ಬೀಜ ಬಿತ್ತಿ ದೇಶ ಒಡೆಯುವ ಬಿಜೆಪಿಗೆ ಮತ ಹಾಕಬಾರದು. ಕೋಮು ಸಾಮರಸ್ಯ ಕದಡಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಹಿಂದುತ್ವವಾದಿಗಳನ್ನು ತಿರಸ್ಕರಿಸಬೇಕು’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಹೇಳಿದರು.

ನಗರದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಜಮೀರ್ ಪಾಷಾ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ‘ದಕ್ಷಿಣ ಭಾರತದಲ್ಲಿ ಕೋಮು ಸಾಮರಸ್ಯವಿದೆ. ಈ ಭಾಗದಲ್ಲಿ ಅಶಾಂತಿ ಸೃಷ್ಟಿಸಲು ಬಿಜೆಪಿ ನಿರಂತರ ಪ್ರಯತ್ನ ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿಯು ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ತನ್ನ ಕಬಂಧ ಬಾಹುಗಳನ್ನು ಹರಡಲು ಪ್ರಯತ್ನಿಸುತ್ತಿದೆ. ಆದರೆ, ಅದಕ್ಕೆ ಅವಕಾಶ ಸಿಗುತ್ತಿಲ್ಲ. ಈ ರಾಜ್ಯಗಳಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಆದರೆ, ಬಿಜೆಪಿ ಜನರ ಮನಸ್ಸಿನಲ್ಲಿ ಹಿಂದುತ್ವ ಭಾವನೆ ಕೆರಳಿಸಿ ಅದರ ಲಾಭ ಪಡೆಯುವ ಪ್ರಯತ್ನ ಮಾಡುತ್ತಿದೆ. ಜನ ಅದಕ್ಕೆ ಅವಕಾಶ ಕೊಡಬಾರದು’ ಎಂದು ಮನವಿ ಮಾಡಿದರು.

‘ಪ್ರಧಾನಿ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿಯು ಲೋಕಸಭಾ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ವಿದೇಶದಲ್ಲಿನ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಘೋಷಣೆ ಮಾಡಿತ್ತು. ಆದರೆ, ಜನರ ಖಾತೆಗೆ 15 ರೂಪಾಯಿಯೂ ಬಂದಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗಾವಕಾಶ ಸೃಷ್ಟಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ, ವಿದ್ಯಾವಂತ ಯುವಕ ಯುವತಿಯರು ಉದ್ಯೋಗವಿಲ್ಲದೆ ಪರದಾಡುವಂತಾಗಿದೆ’ ಎಂದರು.

ಬುಡ ಮೇಲಾಗಿದೆ: ‘ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯೀಕರಣದಿಂದ ದೇಶದ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳು, ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದಕ್ಕೆಲ್ಲಾ ಮೋದಿಯವರೇ ಕಾರಣ’ ಎಂದರು.

‘ಕಾಂಗ್ರೆಸ್‌ ಸರ್ಕಾರವು ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್ ಸೌಲಭ್ಯ ಕಲ್ಪಿಸಿದೆ. ರೈತರ ₹ 8 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

**
ರಾಜ್ಯದಲ್ಲಿ ರಾಯಚೂರು ಬಿಟ್ಟರೆ ಕೋಲಾರ ಕ್ಷೇತ್ರದಲ್ಲಿ ಅತಿ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಪಕ್ಷವು ರಾಜ್ಯದ 224 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಟಿಕೆಟ್‌ ಕೊಟ್ಟಿದೆ. ಆದರೆ, ಬಿಜೆಪಿಯು ಮುಸ್ಲಿಂ ಸಮುದಾಯವನ್ನು ನಿರ್ಲಕ್ಷಿಸಿದೆ
– ಕೆ.ಎಚ್‌.ಮುನಿಯಪ್ಪ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT