ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌, ಪೋರ್ಚುಗಲ್‌ ತಂಡಗಳಿಗೆ ಜಯ

Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

ಬೆರ್ನ್‌/ಜಿನೀವ/ಮಾಸ್ಕೊ: ಇಂಗ್ಲೆಂಡ್ ಮತ್ತು ಪೋರ್ಚುಗಲ್ ತಂಡಗಳು ವಿಶ್ವಕಪ್‌ ಅಭ್ಯಾಸ ಪಂದ್ಯಗಳಲ್ಲಿ ಗುರುವಾರ ರಾತ್ರಿ ಸುಲಭ ಜಯ ಸಾಧಿಸಿದವು. ಕೋಸ್ಟರಿಕಾವನ್ನು ಇಂಗ್ಲೆಂಡ್‌ 2–0ಯಿಂದ ಮಣಿಸಿದರೆ ಪೋರ್ಚುಗಲ್‌ ಎದುರು ಅಲ್ಜೀರಿಯಾ 3–0ಯಿಂದ ಸೋತಿತು.

ಮಾರ್ಕಸ್ ರಶ್‌ಫೊರ್ಡ್‌ ಮತ್ತು ಡ್ಯಾನಿ ವೆಲ್‌ಬೆಕ್ ಅವರ ಅಮೋಘ ಆಟದ ನೆರವಿನಿಂದ ಇಂಗ್ಲೆಂಡ್‌ ಏಕ ಪಕ್ಷೀಯ ಜಯ ಸಾಧಿಸಿತು. ಲೀಡ್ಸ್‌ ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ನ ಕೋಚ್‌ ಗರೆತ್ ಸೌತ್‌ಗೇಟ್‌ ಭಾರಿ ಬದಲಾವಣೆಗಳನ್ನು ಮಾಡಿದ್ದರು. ನೈಜೀರಿಯಾ ಎದುರಿನ ಪಂದ್ಯದಲ್ಲಿ ಆಡಿದ ಒಂಬತ್ತು ಮಂದಿಗೆ ವಿಶ್ರಾಂತಿ ನೀಡಿದ್ದರು. ಕೋಸ್ಟರಿಕಾ ಮೇಲೆ ಪೂರ್ಣ ಆಧಿಪತ್ಯ ಸ್ಥಾಪಿಸಲು ಈ ಆಟಗಾರರಿಗೆ ಸಾಧ್ಯವಾಯಿತು.

ಪೋರ್ಚುಗಲ್ ತಂಡದ ಜಯದಲ್ಲಿ ಫಾರ್ವರ್ಡ್ ಆಟಗಾರ ಗೊಂಕಾಲೊ ಗೇಡ್ಸ್‌ ಪ್ರಮುಖ ಪಾತ್ರ ವಹಿಸಿದರು. ಬರ್ನಾರ್ಡೊ ಸಿಲ್ವಾ ಅವರು ಹೆಡರ್ ಮೂಲಕ ನೀಡಿದ ಪಾಸ್‌ನಿಂದ ಮೊದಲ ಗೋಲು ಗಳಿಸಿದ ಅವರು ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. ಅಭ್ಯಾಸ ಪಂದ್ಯದಲ್ಲಿ ಇದೇ ಮೊದಲ ಬಾರಿ ಕಣಕ್ಕೆ ಇಳಿದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಎರಡನೇ ಗೋಲು ಗಳಿಸಿದರು. ರಾಫೆಲ್‌ ಗುರೇರೊ ಅವರ ಕ್ರಾಸ್‌ ಅನ್ನು ನಿಯಂತ್ರಿಸಿ ಮೂರನೇ ಗೋಲು ಗಳಿಸಿದ ಗೊಂಕಾಲೊ ತಂಡದ ಜಯವನ್ನು ಖಾತರಿಪಡಿಸಿಕೊಂಡರು.

ಸಹಾಯಕ ರೆಫರಿ ರಾಜೀನಾಮೆ: ವಿಶ್ವಕಪ್ ಫುಟ್‌ಬಾಲ್‌ಗೆ ನಿಯೋಜನೆ ಗೊಂಡಿದ್ದ ಸಹಾಯಕ ರೆಫರಿ, ಕಿನ್ಯಾದ ಏಡನ್ ರೇಂಜ್‌ ಮರ್ವಾ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಅವರು ಆಫ್ರಿಕಾದಲ್ಲಿ ನಡೆದ ಪಂದ್ಯವೊಂದರ ಸಂದರ್ಭದಲ್ಲಿ ಲಂಚ ಪಡೆಯುತ್ತಿದ್ದುದು ಮಾರುವೇಷದ ಕಾರ್ಯಾಚರಣೆಯಲ್ಲಿ ಕಂಡು ಬಂದಿತ್ತು ಎಂದು ಫಿಫಾ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿಗಳ ಅಪರೂಪರ ಪ್ರತಿಭಟನೆ: ವಿಶ್ವಕಪ್ ಫುಟ್‌ಬಾಲ್ ಸಂದರ್ಭದಲ್ಲಿ ರಷ್ಯಾ ರಾಜಧಾನಿಗೆ ಲಗ್ಗೆ ಇರಿಸುವ ಪ್ರೇಕ್ಷಕರು ಹಸಿರು ನಾಶ ಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿ ಮಾಸ್ಕೊದ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಇಲ್ಲಿ ಸುಮಾರು 25 ಸಾವಿರ ಮಂದಿ ಉಚಿತವಾಗಿ ಪಂದ್ಯ ವೀಕ್ಷಿಸಲು ಅನುಕೂಲ ಆಗುವಂತೆ ಬೃಹತ್ ಪರದೆಯನ್ನು ಅಳವಡಿಸಲಾಗಿದೆ. ಈ ಪರದೆಯಲ್ಲಿ ಪಂದ್ಯ ವೀಕ್ಷಿಸಲು ಬರುವವರ ತುಳಿತಕ್ಕೆ ಒಳಗಾಗಿ ಹಸಿರು ನಾಶ ಆಗುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿಗಳು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT