ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಂಕಷ್ಟವನ್ನು ಟ್ರಂಪ್ ಸರಿಯಾಗಿ ನಿರ್ವಹಿಸಿಲ್ಲ: ಒಬಾಮ

6 ತಿಂಗಳಲ್ಲಿ ಚುನಾವಣೆ | ಕೊರೊನಾ ನಿರ್ವಹಣೆ ಬಗ್ಗೆ ಬಿಸಿಬಿಸಿ ಚರ್ಚೆ
Last Updated 10 ಮೇ 2020, 4:52 IST
ಅಕ್ಷರ ಗಾತ್ರ
ADVERTISEMENT
""

ವಾಷಿಂಗ್‌ಟನ್: ‘ಕೊರೊನಾ ವೈರಸ್ ಪಿಡುಗನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ’ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಟೀಕಿಸಿದ್ದಾರೆ. ತಮ್ಮ ಆಡಳಿತ ಅವಧಿಯಲ್ಲಿ ಸಹವರ್ತಿಗಳಾಗಿದ್ದವರೊಂದಿಗೆ ಕಾನ್ಫರೆನ್ಸ್‌ ಕಾಲ್‌ನಲ್ಲಿ ಆಡಿದ್ದ ಅವರ ಮಾತುಗಳು ಸೋರಿಕೆಯಾಗಿವೆ.

ಈವರೆಗೆ ಕೋವಿಡ್–19ಕ್ಕೆಅಮೆರಿಕದಲ್ಲಿ ಸುಮಾರು 75 ಸಾವಿರ ಮಂದಿ ಮೃತಪಟ್ಟಿದ್ದಾರೆ. ‘ಈ ಹಿಂದೆ ಆಡಳಿತ ನಿರ್ವಹಿಸಿದವರು ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಲು ಹೆಚ್ಚು ಗಮನ ನೀಡಿರಲಿಲ್ಲ. ಹೀಗಾಗಿಯೇ ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಹಿನ್ನಡೆಯುಂಟಾಗಿದೆ’ ಎಂದು ಡೊನಾಲ್ಡ್‌ ಟ್ರಂಪ್ ಪರೋಕ್ಷವಾಗಿ ಒಬಾಮಾ ನೇತೃತ್ವದ ಡೆಮಾಕ್ರಟಿಕ್ ಪಕ್ಷದ ಆಡಳಿತವನ್ನು ಟೀಕಿಸಿದ್ದರು.

ಒಬಾಮಾ ಸಹವರ್ತಿಗಳ ಸಂಸ್ಥೆ (Obama Alumni Association) ಈಚೆಗೆ ಆಯೋಜಿಸಿದ್ದ ಒಬಾಮಾ ಆಡಳಿತದ ಮುಖ್ಯಸ್ಥರ ಕಾನ್ಫರೆನ್ಸ್‌ ಕಾಲ್‌ನಲ್ಲಿ ಕೊರೊನಾ ಪಿಡುಗನ್ನು ಟ್ರಂಪ್ ನಿರ್ವಹಿಸುತ್ತಿರುವ ರೀತಿಯಲ್ಲಿ ಒಬಾಮಾನ ತೀಕ್ಷ್ಣವಾಗಿ ಟೀಕಿಸಿದ್ದರು. ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಕಣಕ್ಕಿಳಿದಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್ ಅವರಿಗೆ ಬೆಂಬಲ ನೀಡುವಂತೆ ವಿನಂತಿಸಿದ್ದರು.

‘ಈ ಬಾರಿ ನಡೆಯುವ ಅಧ್ಯಕ್ಷೀಯ ಚುನಾವಣೆಯು ಅತಿಮುಖ್ಯ. ಏಕೆಂದರೆನಾವು ಒಬ್ಬ ವ್ಯಕ್ತಿಯನ್ನೋ ಅಥವಾ ಒಂದು ಪಕ್ಷವನ್ನೋ ಎದುರಿಸುತ್ತಿಲ್ಲ. ಹಲವು ವರ್ಷಗಳಿಂದ ನೆಲೆಯೂರಿರುವ ಸ್ವಾರ್ಥಪರ, ವಿವೇಚನೆಯಿಲ್ಲದ ಆಡಳಿತ, ಒಡೆದು ಆಳುವ ನೀತಿ, ಇನ್ನೊಬ್ಬರನ್ನು ಶತ್ರುಗಳು ಎಂದು ಪರಿಗಣಿಸುವ ಧೋರಣೆಯ ವಿರುದ್ಧ ನಾವು ಹೋರಾಡಬೇಕಿದೆ. ಅಮೆರಿಕ ಸಮಾಜ ಈಗಾಗಲೇ ಈ ನೀತಿಗಳಿಂದ ಸಾಕಷ್ಟು ತೊಂದರೆ ಅನುಭವಿಸಿದೆ’ ಎಂದು ಒಬಾಮಾ ತಮ್ಮ ಬೆಂಬಲಿಗರಿಗೆ ಕಿವಿಮಾತು ಹೇಳಿದ್ದರು.

‘ಟ್ರಂಪ್ ಆಡಳಿತದ ಕೊರೊನಾ ಪಿಡುಗು ನಿರ್ವಹಣೆಯನ್ನು ಅಸ್ತವ್ಯಸ್ತ’ ಎಂದು ಕರೆದಿದ್ದೇಕೆ ಎಂಬುದಕ್ಕೂ ಒಬಾಮಾ ಬಳಿ ವಿವರಣೆಯಿತ್ತು.

‘ವಿಶ್ವದ ಅತ್ಯುತ್ತಮ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರಗಳೂ ಸಹ ಪಿಡುಗು ನಿರ್ವಹಿಸಲು ಪರದಾಡುತ್ತಿವೆ. ಆದರೆ ನಮ್ಮಲ್ಲಿಯಂತೂ ವಿಪರೀತಕ್ಕಿಟ್ಟುಕೊಂಡಿದೆ. ಇದರಲ್ಲಿ ನನಗೇನು ಸಿಗುತ್ತೆ? ಬೇರೆಯವರಿಗೆ ಏನಾದರೆ ನನಗೇನು? ಎಂಬ ಮನಃಸ್ಥಿತಿ ಇರುವ ಆಡಳಿತಗಾರರು ಸರ್ಕಾರದ ಚುಕ್ಕಾಣಿ ಹಿಡಿದರೆ ಇನ್ನೇನಾಗುತ್ತೆ’ ಎಂದು ಒಬಾಮಾನ ಪರೋಕ್ಷವಾಗಿ ಟ್ರಂಪ್ ವಿರುದ್ಧ ಹರಿಹಾಯ್ದರು.

‘ಇದಕ್ಕಾಗಿಯೇ ಜೋ ಬಿಡೆನ್ ಪರ ಪ್ರಚಾರ ಕಾರ್ಯದಲ್ಲಿ ನನಗೆಷ್ಟು ಸಾಧ್ಯವೋ ಅಷ್ಟೂ ಹೊತ್ತು ತೊಡಗಿಸಿಕೊಳ್ಳುವ ಸಂಕಲ್ಪ ಮಾಡಿದ್ದೇನೆ’ ಎಂದು ಒಬಾಮಾ ಹೇಳಿದರು.

ಖಾಸಗಿ ಕಾಲ್ ಕಾನ್ಫರೆನ್ಸ್‌ನಲ್ಲಿ ತಾವು ಆಡಿದ ಮಾತುಗಳು ರಾಯಿಟರ್ಸ್‌ ಸುದ್ದಿ ಮತ್ತು ಯಾಹೂ ಜಾಲತಾಣದ ಮೂಲಕ ಬಹಿರಂಗವಾದ ನಂತರ ಅಮೆರಿಕದಲ್ಲಿ ವ್ಯಾಪಕ ಚರ್ಚೆ ಆರಂಭವಾಯಿತು. ಈ ಕುರಿತು ಪ್ರತಿಕ್ರಿಯೆ ನೀಡಲು ಒಬಾಮಾ ಅವರ ಕಚೇರಿ ನಿರಾಕರಿಸಿತು.

ಒಬಾಮಾ ಹೇಳಿಕೆಯನ್ನು ಶ್ವೇತಭವನ ‘ಅನಿರೀಕ್ಷಿತ’ ಎಂದು ವ್ಯಾಖ್ಯಾನಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶ್ವೇತ ಭವನದ ವಕ್ತಾರೆ ಕೆಲಿಶ್ ಮೆಕ್‌ಎನಾನಿ, ಟ್ರಂಪ್ ವಿರುದ್ಧದ ವಾಗ್ದಂಡನೆ ನಿಲುವಳಿ ಮಂಡನೆಗೆ ಕಾರಣವಾದಉಕ್ರೇನ್ ವಿಚಾರಣೆಯನ್ನು ಪ್ರಸ್ತಾಪಿಸಿದರು.

‘ಡೆಮಾಕ್ರಟ್ ಪಕ್ಷದವರು ಅಧ್ಯಕ್ಷ ಟ್ರಂಪ್ ಅವರನ್ನು ಹಣಿಯುವುದು ಹೇಗೆ ಎಂದು ಯೋಚಿಸುತ್ತಿದ್ದಾಗ ಟ್ರಂಪ್ ಚೀನಾದಿಂದ ಜನರು ಬರುವುದನ್ನು ನಿರ್ಬಂಧಿಸುತ್ತಿದ್ದರು. ಡೆಮಾಕ್ರಟ್ ಪಕ್ಷದವರು ಸಭೆಗಳನ್ನು ನಡೆಸಿ ಮುಂದಿನ ಕಾರ್ಯತಂತ್ರ ಚಿಂತನೆ ಮಾಡುತ್ತಿದ್ದಾಗ, ಟ್ರಂಪ್ ಅವರು ಪಿಪಿಇ ಕಿಟ್, ವೆಂಟಿಲೇಟರ್‌ಗಳನ್ನು ಹೊಂದಿಸಲು ಮತ್ತು ಟೆಸ್ಟಿಂಗ್ ಸೌಲಭ್ಯ ಹೆಚ್ಚಿಸಲು ಕೆಲಸ ಮಾಡುತ್ತಿದ್ದರು’ ಎಂದು ಒಬಾಮಾ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ.

ಅಮೆರಿಕದಲ್ಲಿ ಅಧ್ಯಕ್ಷರ ಚುನಾವಣೆಗೆ ಇನ್ನು 6 ತಿಂಗಳು ಬಾಕಿಯಿದೆ. ಟ್ರಂಪ್ ಮತ್ತು ಬಿಡೆನ್ ನಡುವೆ ಜಿದ್ದಾಜಿದ್ದಿ ನಡೆಯುವ ನಿರೀಕ್ಷೆಗಳಿವೆ. ಹಲವು ರಾಜ್ಯಗಳಲ್ಲಿ ಬಿಡೆನ್ ಮುಂದಿದ್ದಾರೆ ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ.

ಅಮೆರಿಕದ ವಿವಿಧ ರಾಜ್ಯಗಳಲ್ಲಿ ಸೋಂಕಿತರು ಮತ್ತು ಮೃತರ ವಿವರ. (ಮೇ 10, ಭಾರತೀಯ ಕಾಲಮಾನ ಬೆಳಿಗ್ಗೆ 10.15ರ ಮಾಹಿತಿ. ಕೃಪೆ: www.worldometers.info)

ಕೊರೊನಾ ನಿರ್ವಹಣೆ:ಅಮೆರಿಕ ಗೊಂದಲದ ಗೂಡು

ಅಮೆರಿಕದಲ್ಲಿ ಈವರೆಗೆ 13.47 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 80 ಸಾವಿರ ಮಂದಿ ಮೃತಪಟ್ಟಿದ್ದಾರೆ.

ಅಮೆರಿಕದ ಮಿಸಿಸಿಪ್ಪಿ ಮತ್ತು ಬೊಟ್‌ಸ್ವಾನಾ ಸೇರಿದಂತೆ ಕೆಲ ರಾಜ್ಯಗಳು ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿವೆ. ಕೊರೊನಾ ಸೋಂಕನ್ನು ಅತ್ಯುತ್ತಮವಾಗಿ ನಿಭಾಯಿಸಿದ ನ್ಯೂಯಾರ್ಕ್‌ ನಗರದ ಮೇಯರ್ ಬಿಲ್‌ ಡೆ ಬ್ಲಾಸಿಯೊ, ‘ನಿರ್ಬಂಧಗಳನ್ನು ಆತುರಾತುರವಾಗಿ ಸಡಿಲಿಸುತ್ತಿರುವ ರಾಜ್ಯಗಳು ತಪ್ಪು ಮಾಡುತ್ತಿವೆ. ಆರ್ಥಿಕತೆ ಪುನಶ್ಚೇತನಕ್ಕಾಗಿ ಎಂದು ನೀವು ತೆಗೆದುಕೊಳ್ಳುತ್ತಿರುವ ಕ್ರಮಗಳು ತಿರುಗುಬಾಣವಾಗಬಹುದು‘ ಎಂದು ಹೇಳಿದ್ದಾರೆ.

‘ಏನು ಬೇಕಾದರೂ ಆಗಲಿ ಸುರಕ್ಷೆಯ ಕಡೆಗೆ ಗಮನ ಕೊಟ್ಟು, ನಿರ್ಬಂಧ ಸಡಿಲಿಸಿಯೇ ಸಿದ್ದ‘ ಎನ್ನುವ ಧೋರಣೆ ಪ್ರದರ್ಶಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘60 ವರ್ಷ ದಾಟಿದವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT